ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುತ್ತಾ? – ಸಿಂಹ ಮಾಡಿರುವ ಮೂರು ತಪ್ಪುಗಳು ಇದಕ್ಕೆ ಕಾರಣನಾ..!

ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುತ್ತಾ? –  ಸಿಂಹ ಮಾಡಿರುವ ಮೂರು ತಪ್ಪುಗಳು ಇದಕ್ಕೆ ಕಾರಣನಾ..!

ಸಿಂಹ ಘರ್ಜಿಸುವ ಬದಲು ಪ್ರಾರ್ಥಿಸುವ ಹಂತಕ್ಕೆ ಬಂದು ನಿಂತಿದೆ.. ಇದಕ್ಕೆ ಕಾರಣ ಸಿಂಹ ಅಲ್ಲದೆ ಬೇರೆ ಯಾರೂ ಅಲ್ಲ.. ಮೈಸೂರಿನಿಂದ ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್‌ ಮಿಸ್ಸಾಗಬಹುದು ಎಂಬ ಸುದ್ದಿ ಈಗ ಎಲ್ಲೆಡೆಯೂ ಹಾಟ್‌ ಕೇಕ್‌ ನಂತೆ ಹರಿದಾಡುತ್ತಿದೆ.. ಹತ್ತು ವರ್ಷಗಳ ಹಿಂದೆ ಇದೇ ಪ್ರತಾಪ್‌ ಸಿಂಹಗೆ ಟಿಕೆಟ್‌ ಸಿಕ್ಕಾಗಲೂ ಇಷ್ಟೇ ಸರ್‌ಪ್ರೈಸ್‌ ಇತ್ತು.. ಯಾಕಂದ್ರೆ ಬಿಜೆಪಿಯಲ್ಲಿ ಅಂದು ಕೂಡ ಟಿಕೆಟ್‌ ಆಕಾಂಕ್ಷಿಗಳಿಗೇನೂ ಕೊರತೆ ಇರಲಿಲ್ಲ.. ಹಾಗಿದ್ದರೆ ಈಗ ಪ್ರತಾಪ್‌ಗೆ ಟಿಕೆಟ್‌ ಕೈತಪ್ಪುವಂತಹ ವಾತಾವರಣ ನಿರ್ಮಾಣ ಆಗಿದ್ದು ಏಕೆ ಎನ್ನುವುದನ್ನು ನೋಡುತ್ತಾ ಹೋದಾಗಲೇ ಅರ್ಥವಾಗುವುದು ಪ್ರತಾಪ್  ಸಿಂಹ ಮಾಡಿರುವ ಮೂರು ತಪ್ಪುಗಳು.

ಇದನ್ನೂ ಓದಿ: ಮೈಸೂರು – ಕೊಡಗು ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ ಒಡೆಯರ್..? ಕುತೂಹಲ ಮೂಡಿಸಿದ ಯದುವೀರ್ ಶಾರದಾಂಬೆ ದರ್ಶನ

ಮೂರನೇ ಬಾರಿ ಮೈಸೂರಿನಿಂದ ಸ್ಪರ್ಧಿಸಿ ಗೆಲ್ಲುವ ವಿಶ್ಸಾಸದಲ್ಲಿರುವ ಸಂಸದ ಪ್ರತಾಪ್‌ ಸಿಂಹಗೆ ಈ ಬಾರಿ ಟಿಕೆಟ್‌ ಸಿಗುತ್ತೋ ಇಲ್ಲವೋ ಎಂಬ ಚರ್ಚೆ ಜೋರಾಗಿದೆ.. ಆದ್ರೆ ಇಂತದ್ದೊಂದು ಸ್ಥಿತಿ ನಿರ್ಮಾಣ ಆಗೋದಿಕ್ಕೆ, ಅಂದ್ರೆ ಟಿಕೆಟ್‌ ಕೈತಪ್ಪುತ್ತೆ ಎಂಬ ರೀತಿಯ ಚರ್ಚೆ ಆರಂಭವಾಗೋದಿಕ್ಕೆ ಕಾರಣ ಖುದ್ದು ಪ್ರತಾಪ್‌ ಸಿಂಹ ಅವರಲ್ಲದೆ ಬೇರೆ ಯಾರು ಅಲ್ಲ.. ಪ್ರತಾಪ್‌ ಸಿಂಹ ಜರ್ನಲಿಸ್ಟ್ ಆಗಿದ್ದವರು.. ಬರಹಗಾರರಿಗೆ ಬಲಪಂಥೀಯ ಆಶಯಗಳನ್ನು ಮುಕ್ತವಾಗಿ ಬರೆದು, ಅದರ ಮೂಲಕ ಬಿಜೆಪಿಯಿಂದ ಟಿಕೆಟ್‌ ಪಡೆದವರು.. ಸಂಸದರಾದ ಮೇಲೆ ಒಳ್ಳೆಯ ಕೆಲಸಗಾರ ಎಂಬ ಹೆಸರು ಪಡೆದಿದ್ದಾರೆ.. ಫೈಲ್‌ ಹಿಡಿದು ಅದನ್ನು ಫಾಲೋಅಪ್‌ ಮಾಡಿ, ಯಾವುದೇ ಮಂತ್ರಿಯ ಬಳಿಗೆ ಬೇಕಿದ್ದರೂ ಹೋಗಿ ಕೇಂದ್ರದ ಯೋಜನೆಯನ್ನು ತರುತ್ತಾರೆ ಎನ್ನುವುದು ಪ್ರತಾಪ್‌ ಸಿಂಹ ಬೆಂಬಲಿಗರ ಮಾತು.. ಪ್ರತಾಪ್‌ ಸಿಂಹ ಕೂಡ ಇದನ್ನು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಈ ದೃಷ್ಟಿಯಿಂದ ನೋಡಿದಾಗ ಪ್ರತಾಪ್‌ ಸಿಂಹಗೆ ಟಿಕೆಟ್‌ ತಪ್ಪಬಾರದು.. ಅವರಿಗೆ ಮತ್ತೊಮ್ಮೆ ಅವಕಾಶ ಸಿಗೋದ್ರಲ್ಲಿ ಯಾವುದೇ ತಪ್ಪಿಲ್ಲ.. ಹಾಗಿದ್ದರೂ ಪ್ರತಾಪ್‌ ಸಿಂಹ ಮಾಡಿರುವ ತಪ್ಪುಗಳು ಏನು ಎನ್ನುವುದನ್ನು ಈ ಸಂದರ್ಭದಲ್ಲಿ ನೋಡುವುದು ಸೂಕ್ತ..

ತಪ್ಪು 1 – ತಾನು ಮಾಡಿದ್ದು ಮಾತ್ರ ಸರಿ.. ಉಳಿದವರು ಮಾಡಿದ್ದು ತಪ್ಪು!

ಇದು ಪ್ರತಾಪ್‌ ಸಿಂಹ ಅನುಸರಿಸಿಕೊಂಡು ಬಂದಿರುವ ಧೋರಣೆ.. ತಾನು ಏನು ಕೆಲಸ ಮಾಡಿದ್ದೀನೋ ಅದು ಮಾತ್ರವೇ ಸರಿ.. ತನ್ನನ್ನು ಬಿಟ್ಟರೆ ತನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸ್ವಪಕ್ಷೀಯ ನಾಯಕರು ಮಾಡಿರುವ ಕೆಲಸಗಳು ಕೂಡ ತಪ್ಪು ಎನ್ನುವ ರೀತಿಯಲ್ಲಿ ಬಿಂಬಿಸುವ ಧೋರಣೆಯನ್ನು ಪ್ರತಾಪ್‌ ಸಿಂಹ ಹೊಂದಿದ್ದಾರೆ.. ಇದಕ್ಕೆ ಉದಾಹರಣೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪ್ರತಾಪ್‌ ಸಿಂಹ ಮತ್ತು ಆಗ ಶಾಸಕರಾಗಿದ್ದ ಕೃಷ್ಣರಾಜ ಕ್ಷೇತ್ರದ ರಾಮದಾಸ್‌ ಮತ್ತು ಚಾಮರಾಜ ಕ್ಷೇತ್ರದ ನಾಗೇಂದ್ರ ಅವರ ನಡುವೆ ನಡೆದಿದ್ದ ತಿಕ್ಕಾಟ.. ತಮ್ಮ ಕ್ಷೇತ್ರಗಳಲ್ಲಿ ಗ್ಯಾಸ್‌ ಪೈಪ್‌ಲೈನ್‌ ಹಾಕೋದಿಕ್ಕೂ ಈ ಇಬ್ಬರು ಬಿಜೆಪಿ ಶಾಸಕರು ಬಿಡ್ತಿಲ್ಲ ಎಂದು ಓಪನ್‌ ಆಗಿಯೇ ಜಗಳವಾಡಿದ್ದರು ಪ್ರತಾಪ್ ಸಿಂಹ.. ಆದ್ರೆ ಈ ಪ್ರತಾಪ್‌ ಸಿಂಹ ಮೈಸೂರಿಗೆ ಬರೋದಿಕ್ಕೂ ಮೊದಲೇ, ಬಿಜೆಪಿಗೆ ಸೇರೋದಿಕ್ಕೂ ಮೊದಲೇ ರಾಮದಾಸ್‌ ಹಾಗೂ ನಾಗೇಂದ್ರರಂತವರು ಬಿಜೆಪಿಗಾಗಿ ದುಡಿದಿದ್ದರು. ಪಕ್ಷ ಕಟ್ಟಿದ್ದರು.. ಪ್ರತಾಪ್‌ ಸಿಂಹ ಗೆಲುವಿನಲ್ಲೂ ಪಾತ್ರ ನಿರ್ವಹಿಸಿದ್ದರು.. ಅಂತವರನ್ನೇ ಲೆಕ್ಕಕ್ಕೆ ಇಟ್ಟುಕೊಳ್ಳದ ರೀತಿಯಲ್ಲಿ ಪ್ರತಾಪ್‌ ಸಿಂಹ ವರ್ತಿಸಿದ್ದು, ಈಗ ಟಿಕೆಟ್‌ ಕೊಡಬೇಕೋ ಬೇಡವೋ ಎಂಬ ಚರ್ಚೆ ಹುಟ್ಟೋದಿಕ್ಕೆ ಕಾರಣಗಳಲ್ಲಿ ಒಂದು ಎನ್ನುವುದು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತು…

ತಪ್ಪು 2- ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಸಂಸದ!

ಅದ್ಯಾಕೋ ಏನೋ, ಬಿಜೆಪಿಯ ಕೆಲ ಸಂಸದರಿಗೆ ತಮ್ಮ ಪಕ್ಷದ ಕಾರ್ಯಕರ್ತರು ಇರೋದು ಕೇವಲ ಪಕ್ಷದ ಆದೇಶಗಳನ್ನು ಪಾಲಿಸಲು ಎಂಬ ಧೋರಣೆಯಿದೆ.. ಈ ಸಾಲಿಗೆ ಪ್ರತಾಪ್‌ ಸಿಂಹ ಕೂಡ ಸೇರಿದ್ದಾರೆ ಎನ್ನುವುದು ಬಿಜೆಪಿ ಕಾರ್ಯಕರ್ತರ ದೂರು.. ಯಾಕಂದ್ರೆ ಮೋದಿ ಹೆಸರಿನಲ್ಲಿ ಎರಡು ಬಾರಿ ಗೆದ್ದಿದ್ದಾರೆ.. ಮೂರನೇ ಬಾರಿಯೂ ಗೆಲುವಿಗೆ ಮೋದಿ ಹೆಸರೇ ಶಕ್ತಿ.. ಅಲ್ಲದೆ ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಗೆಲ್ಲಿಸಬೇಕು ಅಷ್ಟೇ ಎನ್ನುವುದು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರು ಕಾಣುವ ಏಕೈಕ ಕನಸು.. ಇದನ್ನು ಕಮಲ ಕಾರ್ಯಕರ್ತರು ವ್ರತದಂತೆ ಆಚರಿಸಿಕೊಂಡು ಬಂದಿದ್ದಾರೆ.. ಅವರಿಗೆಲ್ಲಿ ಸಿಂಹ. ಹುಲಿ, ಆನೆಗಳು ಮುಖ್ಯವಲ್ಲ.. ಮೋದಿಯೇ ಮುಖ್ಯ ಎನ್ನುವ ನಿಲುವಿದೆ.. ಇದರ ಪರಿಣಾಮವಾಗಿ ಸಂಸದರಾದವರಿಗೆ ಕಾರ್ಯಕರ್ತರನ್ನು ಮಾತಾಡಿಸದಿದ್ದರೂ ಪರ್ವಾಗಿಲ್ಲ.. ಮೋದಿಗಾಗಿ ಕೆಲಸ ಮಾಡ್ತಾರೆ.. ಮೋದಿ ಪರವಾಗಿ ನಾಲ್ಕು ಭಾಷಣ ಹೊಡೆದ್ರೆ ಮುಗೀತು.. ತಾವು ಗೆದ್ದು ಬರೋದು ನಿಶ್ಚಿತ ಎಂಬ ಧೋರಣೆಯಿದೆ.. ಇದೇ ರೀತಿಯಲ್ಲೇ ಪ್ರತಾಪ್‌ ಸಿಂಹ ವರ್ತಿಸಿದ್ದಾರೆ ಎಂಬ ಸಿಟ್ಟು ವಿಶೇಷವಾಗಿ ಕೊಡಗು ಭಾಗದ ಬಿಜೆಪಿ ಕಾರ್ಯಕರ್ತರಲ್ಲಿದೆ.. ಜನರು ಪ್ರತಾಪ್‌ ಸಿಂಹ ಪರವಾಗಿ ವಿಶ್ವಾಸ ಹೊಂದಿದ್ದರೂ ಬಿಜೆಪಿ ಕಾರ್ಯಕರ್ತರು ಮಾತ್ರ ಪ್ರತಾಪ್ ಸಿಂಹ ವಿಚಾರದಲ್ಲಿ ಈ ಬಾರಿ ಬೇಸರ ಹೊಂದಿದ್ದಾರೆ.. ಪ್ರತಾಪ್‌ ಸಿಂಹಗೆ ಅವರ ಧೋರಣೆ ಬದಲಿಸುವ ನಿಟ್ಟಿನಲ್ಲೂ ಅವರ ಟಿಕೆಟ್‌ ಚರ್ಚೆ ಪ್ರಮುಖ ಪಾತ್ರವಹಿಸಿದೆ ಅಂತಲೂ ಹೇಳಲಾಗುತ್ತಿದೆ..

ತಪ್ಪು 3-  ಲೋಕಸಭೆಯಲ್ಲಿ ಕಲರ್‌ ಬಾಂಬ್ ಸ್ಫೋಟಿಸಿದವರಿಗೆ ಪಾಸ್‌!

ಇದೇ ನೋಡಿ ಎಲ್ಲಕ್ಕಿಂತ ಮುಖ್ಯವಾದ ವಿಚಾರ.. ಇದರಲ್ಲಿ ನೇರವಾಗಿ ಪ್ರತಾಪ್ ಸಿಂಹ ಅವರ ತಪ್ಪಿದೆಯೋ ಇಲ್ಲವೋ ಎನ್ನುವುದು ತನಿಖೆ ಸಂಪೂರ್ಣವಾಗಿ ಮುಗಿದ ನಂತರ ಗೊತ್ತಾಗಬಹುದು.. ಆದರೆ ನೂತನ ಸಂಸತ್‌ ಭವನದ ಒಳಗೆ ನುಗ್ಗಿ, ಅಲ್ಲಿ ಕಲರ್‌ ಬಾಂಬ್‌ ಸ್ಫೋಟಿಸಿದ್ದು ಮೋದಿ ಸರ್ಕಾರದ ಆಡಳಿತಕ್ಕೆ ಅತಿದೊಡ್ಡ ಕಪ್ಪುಚುಕ್ಕೆಯಾಗಿತ್ತು.. ಸರ್ವಭದ್ರತೆಯ ತಾಣದಲ್ಲೇ ಪಾಸ್‌ ಮೂಲಕ ನುಗ್ಗಿ, ಪಾರ್ಲಿಮೆಂಟ್‌ ಒಳಗೆ ಕಲರ್‌ ಬಾಂಬ್‌ ಸ್ಫೋಟಿಸಿದ್ದು ಬಿಜೆಪಿಗೆ ಸಮರ್ಥಿಸಿಕೊಳ್ಳಲು ಸಾಧ್ಯವಾಗದ ಬೆಳವಣಿಗೆಯಾಗಿತ್ತು.. ಹೀಗೆ ಸಂಸತ್‌ನ ಒಳಗೆ ನುಗ್ಗಿದ್ದವರಿಗೆ ಅಂದು ಪಾಸ್‌ ಕೊಟ್ಟಿದ್ದು ಇದೇ ಪ್ರತಾಪ್‌ ಸಿಂಹ.. ಸಂಸದ ಪ್ರತಾಪ್‌ ಸಿಂಹ ಅದಕ್ಕೆ ಏನೇ ಸಮಜಾಯಿಷಿ ಕೊಟ್ಟಿರಬಹುದು.. ಆದ್ರೆ ಇದ್ರಿಂದಾಗಿ ಬಿಜೆಪಿ ಮುಜುಗರಕ್ಕೆ ಸಿಲುಕಿದ್ದು ಸುಳ್ಳಲ್ಲ.. ನೇರವಾಗಿ ಆಗಲೇ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಂಡರೆ ರಾಜಕೀಯವಾಗಿ ಬಿಜೆಪಿ ಅದು ಹಿನ್ನಡೆಯಾಗುವ ಸಾಧ್ಯತೆಯಿತ್ತು.. ಆಗ ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡಿದ್ದ ಬಿಜೆಪಿಯ ರಾಷ್ಟ್ರೀಯ ವರಿಷ್ಠರು ಈಗ ಪ್ರತಾಪ್ ಸಿಂಹಗೆ ಟಿಕೆಟ್‌ ಕೊಡದೆ ಶಿಕ್ಷೆ ವಿಧಿಸುತ್ತಾರಾ ಎಂಬ ಚರ್ಚೆಯೂ ಜೋರಾಗಿ ನಡೆಯುತ್ತಿದೆ..

ಹಾಗಂತ ಪ್ರತಾಪ್‌ ಸಿಂಹಗೆ ಟಿಕೆಟ್‌ ಕೈತಪ್ಪಿಯೇ ಹೋಗುತ್ತೆ ಅಂತ ಹೇಳೋದು ಕಷ್ಟ.. ಪ್ರತಾಪ್ ಸಿಂಹ ಕೂಡ ತಾಯಿ ಚಾಮುಂಡೇಶ್ವರಿ, ಕಾವೇರಿ ಮಾತೆ ಮತ್ತು ಮೋದಿ.. ಈ ಮೂವರ ಆಶೀರ್ವಾದ ಕೂಡ ತನ್ನ ಮೇಲಿದೆ ಎಂದು ಎಮೋಷನಲ್‌ ಆಗಿಯೇ ಮಾತಾಡುತ್ತಿದ್ದಾರೆ.. ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿ ಯಧುವೀರ ಒಡೆಯರ್‌ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಚರ್ಚೆ ಜೋರಾಗಿದೆ.. ಆದ್ರೆ ಮೈಸೂರಿನ ರಾಜವಂಶಸ್ಥರು ಹೊಂದಿರುವ ಆಸ್ತಿಗೆ ಸಂಬಂಧಿಸಿದ ಕಾನೂನು ಸಮರಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜೊತೆಗೆ ಬ್ಯಾಲೆನ್ಸ್‌ ಮಾಡುತ್ತಾ ಸಾಗಬೇಕಾದ ಅನಿವಾರ್ಯತೆಯಿದೆ.. ಇದೇ ಕಾರಣಕ್ಕಾಗಿ ಮೈಸೂರಿನ ರಾಜವಂಶಸ್ಥೆ ರಾಜಮಾತೆ ಪ್ರಮೋದಾ ದೇವಿ ಏಕಾಏಕಿ ಯಧುವೀರ ದತ್ತ ಒಡೆಯರ್‌ಗೆ ಚುನಾವಣೆಗೆ ಸ್ಪರ್ಧಿಸುವ ಅನುಮತಿ ನೀಡುವುದು ಕಷ್ಟ.. ಹಾಗಂತ ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್ ಕೊಡಬಾರದು ಎಂದು ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದ್ರೆ ಆಗ, ಯಧುವೀರ್ ಅವರೇ ಟಿಕೆಟ್‌ ಪಡೆಯಬೇಕು ಅಂತೇನಿಲ್ಲ.. ಬಿಜೆಪಿ ಸದ್ಯ ಅಭ್ಯರ್ಥಿಯ ಹೆಸರಿಗಿಂತ ಪ್ರಧಾನಿ ಮೋದಿಯವರ ಹೆಸರನ್ನೇ ಬಹುವಾಗಿ ನೆಚ್ಚಿಕೊಂಡಿದೆ.. ಇಂತಹ ಸಂದರ್ಭದಲ್ಲಿ ಹೊಸ ಅಭ್ಯರ್ಥಿ ಅಖಾಡಕ್ಕೆ ಇಳಿದರೂ ಅಚ್ಚರಿ ಪಡಬೇಕಿಲ್ಲ..

Sulekha