ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಡೇಟ್ ಫಿಕ್ಸ್ – ಭಕ್ತರಿಗೆ ದರ್ಶನ ಯಾವಾಗ?

ಕೋಟ್ಯಂತರ ರಾಮ ಭಕ್ತರ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಆಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಶೇಕಡಾ 70 ರಷ್ಟು ಪೂರ್ಣಗೊಂಡಿದ್ದು, ಇದೀಗ ಆಯೋಧ್ಯೆ ರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನಾಂಕ ನಿಗದಿಯಾಗಿದೆ.
ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಖನ್ನಾ ಈ ಬಗ್ಗೆ ಟ್ವೀಟ್ ಮಾಡಿದ್ದು, ದೇವಾಲಯದ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದು, 2023ರ ಡಿಸೆಂಬರ್ ವೇಳೆಗೆ ರಾಮನ ಗರ್ಭಗುಡಿ ನಿರ್ಮಾಣ ಪೂರ್ಣಗೊಳ್ಳಲಿದೆ. ಜನವರಿ 22, 2024 ರಂದು ರಾಮನ ವಿಗ್ರಹವನ್ನು ಶಾಶ್ವತವಾಗಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರಿನ ಶಿಲ್ಪಿಯಿಂದ ಅಯೋಧ್ಯೆಯ ಬಾಲ ರಾಮನ ವಿಗ್ರಹ ಕೆತ್ತನೆ
ಜನವರಿ 2024ರಲ್ಲಿ ದೇವಾಲಯವನ್ನು ಭಕ್ತರಿಗೆ ತೆರೆಯಲಾದರೂ, ಎರಡನೇ ಮಹಡಿ ಮತ್ತು ದೇವಾಲಯದ ಇತರ ಭಾಗಗಳ ನಿರ್ಮಾಣವು ಮುಂದುವರಿಯುತ್ತದೆ. ಮುಖ್ಯ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿರುತ್ತಾರೆ ಎಂದು ಸಚಿವ ಸುರೇಶ್ ಖನ್ನಾ ಮಾಹಿತಿ ನೀಡಿದ್ದಾರೆ.
ಇನ್ನು ರಾಮ, ಸೀತೆಯ ವಿಗ್ರಹಗಳನ್ನು ತಯಾರಿಸಲು ಬಳಸಲಾದ ಕಲ್ಲುಗಳನ್ನು ನೇಪಾಳದಿಂದ ಖರೀದಿಸಲಾಗಿದೆ. ನೇಪಾಳದ ಕಾಳಿ ಗಂಡಕಿ ನದಿಯಲ್ಲಿ ಪತ್ತೆಯಾದ ಇವು ಸಾಲಿಗ್ರಾಮ ಕಲ್ಲುಗಳಾಗಿದ್ದು, ಬರೋಬ್ಬರಿ 60 ಮಿಲಿಯನ್ ವರ್ಷಗಳಷ್ಟು ಹಳೆಯವಾಗಿವೆ. ಅಯೋಧ್ಯೆಯಲ್ಲಿಯೇ ರಾಮನ ವಿಗ್ರಹವನ್ನು ನಿರ್ಮಿಸಲಾಗುತ್ತಿದೆ. ಇದು ರಾಮನ ಬಾಲ್ಯದ ವಿಗ್ರಹವಾಗಲಿದೆ. ರಾಮನ ವಿಗ್ರಹದ ಎತ್ತರವು 5 ರಿಂದ 5.5 ಅಡಿಗಳ ನಡುವೆ ಇರುತ್ತದೆ. ರಾಮನವಮಿಯ ದಿನದಂದು ಸೂರ್ಯನ ಕಿರಣಗಳು ನೇರವಾಗಿ ರಾಮನ ಹಣೆಯ ಮೇಲೆ ಬೀಳುವ ರೀತಿಯಲ್ಲಿ ರಾಮನ ಎತ್ತರವನ್ನು ಆಯ್ಕೆ ಮಾಡಲಾಗಿದೆ.