ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಗರಣ – ಮೈತ್ರಿ ಮುರಿಯೋದು ಫಿಕ್ಸ್?
ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ತೀವ್ರ ಮುಖಭಂಗ

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಗರಣ – ಮೈತ್ರಿ ಮುರಿಯೋದು ಫಿಕ್ಸ್?ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ತೀವ್ರ ಮುಖಭಂಗ

ರಾಸಲೀಲೆ ರಾಡಿ ಎಬ್ಬಿಸಿ ವಿದೇಶಕ್ಕೆ ಪರಾರಿಯಾಗಿರೋ ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಅನ್ನೋ ಸುಳಿವೇ ಇಲ್ಲ. ಭಾರತಕ್ಕೂ ಬರದೇ ವಿಚಾರಣೆಗೂ ಹಾಜರಾಗದೇ ಕಳ್ಳಾಟ ಆಡ್ತಿದ್ದಾರೆ. ಎಲೆಕ್ಷನ್ ಟೈಮಲ್ಲೇ ಪ್ರಜ್ವಲ್ ಮಾನಗೇಡಿ ವಿಡಿಯೋಗಳು ಕಾಂಗ್ರೆಸ್​ಗೆ ಬ್ರಹ್ಮಾಸ್ತ್ರವಾಗಿದ್ರೆ ದೋಸ್ತಿ ಪಕ್ಷಗಳಿಗೆ ಬಿಸಿ ತುಪ್ಪವಾಗಿವೆ. ಜೆಡಿಎಸ್ ಅಂತೂ ಪ್ರಜ್ವಲ್​ರನ್ನ ಪಕ್ಷದಿಂದ ಅಮಾನತು ಮಾಡಿದ್ದೇವೆ ಅಂತಾ ತೇಪೆ ಹಚ್ಚೋಕೆ ನೋಡ್ತಿದ್ರೂ ಬಿಜೆಪಿ ಮಾತ್ರ ಬಾರೀ ಮುಜುಗರಕ್ಕೀಡಾಗಿದೆ. ಲೋಕಸಭಾ ಚುನಾವಣೆ ಹೊತ್ತಲ್ಲೇ ಕಮಲ ವಿಲ ವಿಲ ಅಂತಿದೆ. ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಳಿಕ ರಾಜ್ಯದಲ್ಲಿ ಬಿಜೆಪಿ ಸುದ್ದಿಯೇ ಇಲ್ಲ. ಆಗೊಮ್ಮೆ ಈಗೊಮ್ಮೆ ವಿಪಕ್ಷನಾಯಕ ಆರ್.ಅಶೋಕ್ ಸುದ್ದಿಗೋಷ್ಠಿ ನಡೆಸಿ ಪ್ರಕರಣದಿಂದ ಅಂತರ ಕಾಯ್ದುಕೊಳ್ಳೋ ರೀತಿ ಸ್ಟೇಟ್​ಮೆಂಟ್ ಕೊಡ್ತಿದ್ದಾರೆ. ಆದ್ರೆ ಅಸಲಿ ವಿಚಾರ ಅಂದ್ರೆ ಪ್ರಜ್ವಲ್ ಪ್ರಕರಣ ದೋಸ್ತಿ ಮೈತ್ರಿಗೇ ಬ್ರೇಕ್ ಹಾಕೋ ಲಕ್ಷಣ ಕಾಣ್ತಿದೆ.

ಇದನ್ನೂ ಓದಿ:RCBಗೆ 2025ಕ್ಕೆ ಕೊಹ್ಲಿ ಕ್ಯಾಪ್ಟನ್? – ಫಾಫ್, ಪಾಂಡ್ಯ, ಶಿಖರ್ FAIL!

ಹಾಸನ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸಂಬಂಧಿಸಿದ್ದು, ಎನ್ನಲಾದ ಪೆನ್‌ಡ್ರೈವ್‌ ಲೈಂಗಿಕ ಹಗರಣ ರಾಷ್ಟ್ರಮಟ್ಟದಲ್ಲೂ ಸಂಚಲನ ಸೃಷ್ಟಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಈ ಪ್ರಕರಣ ತೀವ್ರ ಮುಖಭಂಗ ಮಾಡಿದೆ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್‌ 26 ರಂದು ನಡೆದಿತ್ತು. ಈ ಟೈಮಲ್ಲೇ ಸಣ್ಣಗೆ ಸದ್ದು ಮಾಡಿದ್ದ ಕೇಸ್ ಬಳಿಕ ಎರಡನೇ ಹಂತದ ಮತದಾನದ ವೇಳೆಗೆ ಕಾಡ್ಗಿಚ್ಚಿನಂತೆ ಹಬ್ಬಿತ್ತು. ರಾಷ್ಟ್ರ ಮಟ್ಟದ ನಾಯಕರ ವಾಕ್ ಪ್ರಹಾರಕ್ಕೆ ಕಾರಣವಾಗಿತ್ತು. ಕಾಂಗ್ರೆಸ್‌ ನಾಯಕರು ಮೋದಿ ಇದಕ್ಕೆ ಉತ್ತರಿಸಬೇಕು ಎಂದು ವಾಗ್ದಾಳಿ ನಡೆಸಿದ್ದರು. ಹೀಗಾಗಿ ಪೆನ್ ಡ್ರೈವ್ ಪ್ರಕರಣ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರ ಉಂಟು ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ಬಿಜೆಪಿಯ ಆಂತರಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿದೆ. ಆರಂಭದಲ್ಲೇ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಹಾಗೂ ಒಕ್ಕಲಿಗ ಸಮುದಾಯದ ನಾಯಕರಿಗೆ ಈ ಮೈತ್ರಿ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಒಪ್ಪಿಗೆ ಇರಲಿಲ್ಲ, ಮೈತ್ರಿ ಕುರಿತು ಬಹಿರಂಗವಾಗಿಯೇ ತೀವ್ರ ಅಸಮಾಧಾನವನ್ನ ವ್ಯಕ್ತಪಡಿಸಿದ್ರು. ಇದೀಗ ಪ್ರಜ್ವಲ್‌ ರೇವಣ್ಣ ಅವರ ಪ್ರಕರಣದಿಂದ ತೀವ್ರ ಮುಜುಗರವನ್ನ ಅನುಭವಿಸುತ್ತಿರುವ ಬಿಜೆಪಿ ನಾಯಕರಲ್ಲಿಯೇ ಮೈತ್ರಿ ಮುಂದುವರೆಸಬೇಕಾ ಇಲ್ಲವೇ ಎನ್ನುವ ಕುರಿತು ಚರ್ಚೆಗಳು ನಡೆಯುತ್ತಿವೆ. ಅಲ್ಲದೇ ಕಾಂಗ್ರೆಸ್‌ ನಾಯಕರು ಸಹ ಈ ವಿಚಾರವಾಗಿ ಬಿಜೆಪಿ ನಾಯಕರ ಮೌನವನ್ನ ಕುಟುಕುವಂತಹ ಕೆಲಸ ಮಾಡುತ್ತಿರೋದು ಮತ್ತಷ್ಟು ತಲೆಬಿಸಿ ತಂದಿದೆ.

ಪ್ರಜ್ವಲ್‌ ರೇವಣ್ಣ ಅವರ ಪೆನ್‌ ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಂತರ ಕಾಯ್ದುಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಇದರ ಜೊತೆ ಜೊತೆಗೆ ಆಂತರಿಕವಾಗಿಯೂ ಬಿಜೆಪಿಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗಾಗಲೇ ಮೂರು ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ನಡೆಸಿದ್ದು, ಲೋಕಸಭಾ ಚುನಾವಣಾ ಫಲಿತಾಂಶದ ಮೇಲೆಯೇ ಎಲ್ಲವೂ ನಿರ್ಧಾರವಾಗಲಿದೆ.

ಈಗಾಗಲೇ ಮೈತ್ರಿ ಕುರಿತು ರಾಜ್ಯದಲ್ಲಿ ಅಪಸ್ವರಗಳು ಕೇಳಿ ಬರುತ್ತಿವೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಮಾತನಾಡಿ, ಮೈತ್ರಿ ಮುಂದುವರಿಯುತ್ತೋ, ಮುಂದುವರಿಯಲ್ವಾ ಎಂಬುದು ನಮ್ಮಲ್ಲಿಲ್ಲ. ಮೈತ್ರಿ ಒಪ್ಪಂದ ಸುದೀರ್ಘವಾಗಿ ಹೋಗಬೇಕು ಎನ್ನುವುದು ನಮ್ಮ ಉದ್ದೇಶ. ಈ ಪ್ರಕರಣದಿಂದ ಮುಜುಗರ ಆದ್ರೆ ಅವರು ತೀರ್ಮಾನ ತೆಗೆದುಕೊಳ್ಳಬೇಕು. ಈ ಮೈತ್ರಿ ಯಿಂದಲೇ ಕಾಂಗ್ರೆಸ್ ನಿದ್ದೆಗೆಟ್ಟಿದೆ ಈ ಪ್ರಕರಣದಲ್ಲಿ ಮುಜುಗರ ಆಗುತ್ತೆ ಎಂದು ಮೈತ್ರಿ ಮುರಿದರೆ ನನ್ನ ತಕರಾರು ಇಲ್ಲ ಎಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.  ಪ್ರಜ್ವಲ್ ಪ್ರಕರಣದಿಂದ ಅಂತರ ಕಾಯ್ದುಕೊಳ್ತಿರೋ ರಾಜ್ಯ ಬಿಜೆಪಿ ನಾಯಕರು ಪ್ರಜ್ವಲ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಪ್ರಜ್ವಲ್ ಗೆ ಕಠಿಣ ಶಿಕ್ಷೆಯಾಗಲಿ ಎಂದು ಬಹಿರಂಗವಾಗೇ ಹೇಳಿದ್ದಾರೆ. ವಿಪಕ್ಷನಾಯಕ ಆರ್. ಅಶೋಕ್ ಕೂಡ ಅಚ್ಚರಿಯ ಹೇಳಿಕೆ ನೀಡಿದ್ರು. ಪ್ರಜ್ವಲ್ ರೇವಣ್ಣ ಅವರು ಗೆದ್ರೆ ಅವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅವರನ್ನ ಉಚ್ಚಾಟನೆ ಮಾಡುತ್ತೇವೆ. ನಮ್ಮ ಹೊಂದಾಣಿಕೆಯಲ್ಲಿ ಪ್ರಜ್ವಲ್ ರೇವಣ್ಣ ಇನ್ನೂ ಗೆದ್ದಿಲ್ಲ. ಪ್ರಜ್ವಲ್ ಗೆದ್ದರೆ ಅವರ ಪಕ್ಷದ ನಾಯಕರು ಕ್ರಮ ಕೈಗೊಳ್ಳಲಿ. ನಾವು ಕೂಡ ಕಾನೂ‌ನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು.

ಸದ್ಯ ಕರ್ನಾಟಕದಲ್ಲಿ 28 ಕ್ಷೇತ್ರಗಳಿಗೆ ಮತದಾನ ಮುಗಿದಿದೆ. ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ ತೀವ್ರ ಸದ್ದು ಮಾಡಿದೆ. ಹೀಗಾಗಿ ಈ ವಿಡಿಯೋ ಕೇಸ್ ಮೈತ್ರಿ ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ಯಾ..? ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಬಿಜೆಪಿಗೂ ಎಫೆಕ್ಟ್ ತಟ್ಟಿತಾ..? ಕಾಂಗ್ರೆಸ್​ಗೆ ವರದಾನವಾಯ್ತಾ ಅನ್ನೋದು ಚುನಾವಣಾ ಫಲಿತಾಂಶದ ಬಳಿಕ ಗೊತ್ತಾಗಲಿದೆ.

 

Sulekha