ಪೊಲೀಸರಿಗೆ ಸರೆಂಡರ್ ಆದ್ರಾ ರಾಸಲೀಲೆ ಪ್ರಜ್ವಲ್ ರೇವಣ್ಣ?

ಪೊಲೀಸರಿಗೆ ಸರೆಂಡರ್ ಆದ್ರಾ ರಾಸಲೀಲೆ ಪ್ರಜ್ವಲ್ ರೇವಣ್ಣ?

ರಾಜ್ಯ ರಾಜಕೀಯದಲ್ಲಿ ಈಗ ಒಂದೇ ಮಾತು. ಪ್ರಜ್ವಲ್ ಎಲ್ಲಿದ್ದೀಯಪ್ಪ ಅನ್ನೋದು. ನೋಟಿಸ್ ಮೇಲೆ ನೋಟಿಸ್ ಕೊಟ್ಟಾಗಿದೆ. ಮನೆ, ಬಂಗಲೆ, ಸರ್ಕಾರಿ ನಿವಾಸಗಳ ತುಂಬೆಲ್ಲಾ ಶೋಧ ನಡೆಸಲಾಗ್ತಿದೆ. ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ. ಆದ್ರೆ ರಾಸಲೀಲೆ ರಾಡಿ ಎದ್ದು ವಾರ ಕಳೆದ್ರೂ ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಪತ್ತೆಯೇ ಇಲ್ಲ. ಲೋಕಸಭಾ ಚುನಾವಣೆಯ ಮೊದಲ ಹಂತದ ವೋಟಿಂಗ್ ಮುಗಿಸಿ ವಿದೇಶಕ್ಕೆ ಹಾರಿದ್ದ ಪ್ರಜ್ವಲ್ ಅದೆಲ್ಲಿ ಅಲೆಯುತ್ತಿದ್ದಾರೆ ಅನ್ನೋ ಸುಳಿವೂ ಇಲ್ಲ. ಹೋಗಿದ್ದು ಜರ್ಮನಿಗೆ ಆದ್ರೂ ಅಲ್ಲಿಂದ ಜಾಗ ಖಾಲಿ ಮಾಡಿರೋ ಪ್ರಜ್ವಲ್ ಆಮೇಲೆ ಎಲ್ಲಿ ತಲೆಮರೆಸಿಕೊಂಡಿದ್ದಾರೋ ಗೊತ್ತಿಲ್ಲ. ಹಾಗಾದ್ರೆ ತಪ್ಪೇ ಮಾಡಿಲ್ಲ ಅನ್ನೋ ಪ್ರಜ್ವಲ್ ಹೀಗೆ ಕಳ್ಳಾಟ ಆಡ್ತಿರೋದೇಕೆ..? ಯಾವ ದೇಶದಲ್ಲಿ ಅಡಗಿ ಕುಳಿತಿದ್ದಾರೆ..? ಎಸ್​ಐಟಿ ಅಧಿಕಾರಿಗಳು ನಾಕಾಬಂಧಿ ಹಾಕಿರೋದೇಕೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:   ಪ್ರಜ್ವಲ್ ರೇವಣ್ಣನನ್ನು ವಿದೇಶದಿಂದ ಕರೆ ತಂದು ಕಠಿಣ ಶಿಕ್ಷೆ ನೀಡಬೇಕು –  ಪ್ರಧಾನಿ ಮೋದಿ

ಎಸ್​ಐಟಿ ಚಕ್ರವ್ಯೂಹದಲ್ಲಿ ಸಿಲುಕಿ ಮಾಜಿ ಸಚಿವ ಹೆಚ್.​ಡಿ ರೇವಣ್ಣ ಪ್ರಶ್ನೆಗಳಿಗೆ ಉತ್ತರಿಸಲಾಗದೆ ವಿಲವಿಲ ಒದ್ದಾಡ್ತಿದ್ದಾರೆ. ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದಾರೆ. ಮತ್ತೊಂದೆಡೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಜನರಿಗೆ ಮುಖ ತೋರಿಸೋಕೂ ಮುಜುಗರ ಪಡ್ತಿದ್ದಾರೆ. ಇತ್ತ ಬಿಜೆಪಿ ನಾಯಕರು ಯಾಕಾದ್ರೂ ಮೈತ್ರಿ ಮಾಡಿಕೊಂಡ್ವೋ ಅಂತಾ ಕೈ ಕೈ ಹಿಸುಕಿಕೊಳ್ತಿದ್ದಾರೆ. ಆದ್ರೆ ರಾಜಕೀಯ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿರೋ ಕಲಾವಿದ ಪ್ರಜ್ವಲ್ ರೇವಣ್ಣ ಮಾತ್ರ ಮಂಗಮಾಯ. ಯಾವ ದೇಶದಲ್ಲಿದ್ದಾರೋ ಗೊತ್ತಿಲ್ಲ, ಯಾವಾಗ ವಾಪಸ್ ಬರ್ತಾರೋ ಗೊತ್ತಿಲ್ಲ, ಅದೆಷ್ಟು ಹೆಣ್ಣುಮಕ್ಕಳನ್ನ ತನ್ನ ಚಟಕ್ಕೆ ಬಳಸಿಕೊಂಡಿದ್ದಾರೋ ಇನ್ನೂ ಲೆಕ್ಕ ಇಲ್ಲ. ಮಾಡೋದೆಲ್ಲಾ ಮಾಡಿ ದೇಶ ಬಿಟ್ಟಿರೋ ಪ್ರಜ್ವಲ್​ನನ್ನ ಹಿಡಿಯೋದೇ ಎಸ್​ಐಟಿ ಅಧಿಕಾರಿಗಳಿಗೆ ಸವಾಲಾಗಿದೆ. ಹೀಗಾಗಿ ದಶದಿಕ್ಕುಗಳಲ್ಲೂ  ದಿಗ್ಬಂಧನ ಹಾಕಿ ಕಾಯ್ತಿದ್ದಾರೆ.

ಮತದಾನದ ಬಳಿಕ ಭಾರತಕ್ಕೆ!

ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಮುಗಿದ ಮರುದಿನವೇ ಪ್ರಜ್ವಲ್ ದೇಶ ಬಿಟ್ಟು ಹೊರದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದಾರೆ. ಇದೀಗ ಮೇ 5ರಂದೇ ಪ್ರಜ್ವಲ್ ಬೆಂಗಳೂರಿಗೆ ಬರ್ತಾರೆ ಅನ್ನೋ ಸುದ್ದಿ ಸಂಚಲನ ಸೃಷ್ಟಿಸಿತ್ತು. ಬೆಂಗಳೂರು, ಮಂಗಳೂರು, ಗೋವಾ ಹಾಗೇ ಕೊಚ್ಚಿ ಏರ್​ಪೋರ್ಟ್​ಗಳಲ್ಲಿ ಎಸ್​ಐಟಿ ಅಧಿಕಾರಿಗಳು ಕಾದು ಕುಳಿತಿದ್ದರು. ಸದ್ಯ ಪ್ರಜ್ವಲ್​ಗಾಗಿ ಎಸ್​ಐಟಿ ಅಧಿಕಾರಿಗಳು 2 ದಿನದಿಂದ ಕಾಯುತ್ತಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲೇ ಎಸ್​ಐಟಿ ಅಧಿಕಾರಿಗಳು ಠಿಕಾಣಿ ಹೂಡಿದ್ದು, ಇಮಿಗ್ರೇಷನ್​ನಲ್ಲಿ ಬೆಂಗಳೂರಿಗೆ ಬರುವ ವಿಮಾನಗಳ ಪ್ರಯಾಣಿಕರ ಲಿಸ್ಟ್ ಪರಿಶೀಲನೆ ನಡೆಸಿದ್ದಾರೆ. ಪ್ರಜ್ವಲ್ ಪಾಸ್​ಪೋರ್ಟ್ ನಂಬರ್ ಸಮೇತ ಟಿಕೆಟ್ ಪರಿಶೀಲನೆ ಮಾಡಿದ್ದಾರೆ. ಆದರೆ, ಈವರೆಗೂ ಯಾವುದೇ ಫ್ಲೈಟ್​ನಲ್ಲಿ ಪ್ರಜ್ವಲ್ ಟಿಕೆಟ್ ಬುಕ್ ಆಗಿಲ್ಲ. ದುಬೈ, ಮಸ್ಕತ್, ಫ್ರಾಂಕ್​ಫರ್ಟ್ ಸೇರಿ ಹಲವು ದೇಶಗಳ ವಿಮಾನಗಳ ಮೇಲೂ ಹದ್ದಿನ ಕಣ್ಣು ಇಡಲಾಗಿದೆ. ಎರಡು ಪಾಳಿಯಲ್ಲಿ ಎರಡು ತಂಡಗಳಿಂದ ಏರ್ಪೋಟ್​ನಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಜ್ವಲ್​ಗೆ ಬಂದ್ರೆ ಏರ್ಪೋಟ್​ನಿಂದಲೇ ವಶಕ್ಕೆ ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗೇ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ ‘ಬ್ಲೂ ಕಾರ್ನರ್​’ ನೋಟಿಸ್​ ನೀಡಿದೆ. ಈಗಿರೋ ಸ್ಫೋಟಕ ಮಾಹಿತಿ ಏನಂದ್ರೆ ಪ್ರಜ್ವಲ್ ಮೇ 7ರ ನಂತ್ರ ಭಾರತಕ್ಕೆ ವಾಪಸ್ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. 2ನೇ ಹಂತದ ಮತದಾನದ ಬಳಿಕ ಪ್ರಜ್ವಲ್ ಶರಣಾಗತಿಯಾಗುವ ಸಾಧ್ಯತೆ ಇದೆ. ಈಗಲೇ ದೇಶಕ್ಕೆ ಮರಳಿದ್ರೆ ವಿಚಾರಣೆ, ಬಂಧನ, ತನಿಖೆ ಅಂತೆಲ್ಲಾ ಬೆಳವಣಿಗೆಗಳು ನಡೆಯುತ್ತವೆ. ಇದು ಮೈತ್ರಿ ಪಕ್ಷದ ನಾಯಕರಿಗೆ ಹಾಗೇ ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಅನ್ನೋ ಕಾರಣಕ್ಕೆ ಈ ಪ್ಲ್ಯಾನ್ ಮಾಡಲಾಗಿದೆ.

ಸದ್ಯ ಪ್ರಜ್ವಲ್ ನಾಪತ್ತೆಯಿಂದಾಗಿ ದೊಡ್ಡಗೌಡ್ರ ಕುಟುಂಬಸ್ಥರು ತುಂಬಾನೇ ಮುಜುಗರಕ್ಕೀಡಾಗಿದ್ದಾರೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಸಂಸದ ಪ್ರಜ್ವಲ್ ಮೇಲೆ ಒತ್ತಡ ಹಾಕಿದ್ದಾರೆ. ಕಾನೂನು ಹೋರಾಟದಿಂದ ಸತ್ಯಾಂಶ ಹೊರಬರುತ್ತದೆ. ವಿಚಾರಣೆಗೆ ಹಾಜರಾಗದೇ ಕಾನೂನು ಹೋರಾಟಕ್ಕೆ ಮೊರೆ ಹೋದ್ರೆ ಮತ್ತಷ್ಟು ಸಮಸ್ಯೆಯಾಗುತ್ತದೆ. ಈಗಾಗಲೇ ಈ ಪ್ರಕರಣದಿಂದ ಸಾಕಷ್ಟು ಡ್ಯಾಮೇಜ್ ಆಗ್ತಿದೆ. ಕೂಡಲೇ ವಕೀಲರ ಜತೆ ಚರ್ಚಿಸಿ ವಿಚಾರಣೆಗೆ ಹಾಜರಾಗು ಎಂದು ಕುಟುಂಬದವರು ಸಲಹೆ ನೀಡಿದ್ದಾರೆ. ಮತ್ತೊಂದೆಡೆ ಎಸ್​ಐಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ತನಿಖೆ ಮುಂದುವರಿಕೆ! 

ಹೊಳೆನರಸೀಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಸಂತ್ರಸ್ತೆಯೊಬ್ಬರನ್ನು ಇಂದು ಬಸವನಗುಡಿಯಲ್ಲಿರುವ ಶಾಸಕ ಹೆಚ್ ಡಿ ರೇವಣ್ಣ ಮನೆಗೆ ಕರೆತಂದು ಸ್ಥಳ ಮಹಜರು ನಡೆಸಲಾಗಿದೆ. ಹಾಗೇ ಅಶ್ಲೀಲ ವಿಡಿಯೋಗಳಲ್ಲಿ ಇದ್ದಾರೆ ಎನ್ನಲಾದ ಮೂವರು ಮಹಿಳಾ ಸರ್ಕಾರಿ ಅಧಿಕಾರಿಗಳಿಗೆ ಎಸ್​ಐಟಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ವೈರಲ್ ಆಗಿರುವ ವಿಡಿಯೋಗಳಲ್ಲಿ ಕೆಲ ಸರ್ಕಾರಿ ಮಹಿಳಾ ಅಧಿಕಾರಿಗಳ ಫೋಟೋಗಳು ಬಹಿರಂಗವಾಗಿರುವ ಹಿನ್ನೆಲೆ ನೋಟಿಸ್ ಕೊಡಲಾಗಿದೆ. ಹಾಗೇನಾದ್ರೂ ಈ ಮೂವರು ದೂರು ನೀಡಿದಲ್ಲಿ ಪ್ರಜ್ವಲ್‌ ರೇವಣ್ಣಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಹಾಗೇ ಅಶ್ಲೀಲ ವಿಡಿಯೋಗಳು ಹಾಗೂ ಪೋಟೋಗಳಲ್ಲಿರುವ ಮಹಿಳೆಯರನ್ನು ಗುರುತಿಸಿ, ದೂರು ನೀಡುವಂತೆ ಅಧಿಕಾರಿಗಳು ಮನವೊಲಿಸುತ್ತಿದ್ದಾರೆ. ಇನ್ನೊಂದು ವಿಪರ್ಯಾಸ ನೋಡಿ ಯುದ್ಧ, ಪ್ರವಾಹದಂತಹ ಪ್ರಕರಣಗಳು ನಡೆದಾಗ ಸಹಾಯವಾಣಿ ತೆರೆಯಲಾಗುತ್ತಿತ್ತು. ಆದ್ರೀಗ ಪ್ರಜ್ವಲ್ ಕೇಸ್​ನಲ್ಲಿ ಸಂತ್ರಸ್ತೆಯರಿಗಾಗೇ ಸಹಾಯವಾಣಿ ಆರಂಭಿಸಲಾಗಿದೆ. ಸಂತ್ರಸ್ತೆಯರು ಅಥವಾ ಅವರ ಸಂಬಂಧಿಕರು 6360938947ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ.

ಸದ್ಯ ಮಹಿಳೆ ಅಪಹರಣ ಪ್ರಕರಣದಲ್ಲಿ ರೇವಣ್ಣ ಅರೆಸ್ಟ್ ಆಗಿರೋದ್ರಿಂದ ಯಾವುದೇ ಕ್ಷಣದಲ್ಲೂ ಪ್ರಜ್ವಲ್ ರಾಜ್ಯಕ್ಕೆ ವಾಪಸ್ ಆಗೋ ಸಾಧ್ಯತೆ ಇದೆ. ಪ್ರಜ್ವಲ್ ರಾಜ್ಯಕ್ಕೆ ಕಾಲಿಡುತ್ತಿದ್ದಂತೆಯೇ ಅವರ ಬಂಧನಕ್ಕೆ ಎಸ್‌ಐಟಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ತನಿಖೆ ಬಳಿಕವಷ್ಟೇ ಪ್ರಜ್ವಲ್​ರಿಂದ ಮತ್ತಷ್ಟು ಸತ್ಯ ಬಯಲಿಗೆ ಬರಬೇಕಿದೆ.

Shwetha M