ಹಾಸನದಿಂದ ದೆಹಲಿವರೆಗೂ ರಾಸಲೀಲೆ.. -ಪ್ರಜ್ವಲ್ ವಿಕೃತಿಯೇ ಭಯಾನಕ!

ಮಣ್ಣಿನ ಮಗ ಅಂತಾನೇ ಕರೆಸಿಕೊಳ್ಳೋ ತಾತ.. ರಾಷ್ಟ್ರದ ಮಾಜಿ ಪ್ರಧಾನಿ, ಕರುನಾಡು ಕಂಡ ಧೀಮಂತ ರಾಜಕಾರಣಿ.. ಚಿಕ್ಕಪ್ಪ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು. ಇನ್ನು ಅಪ್ಪ ಹಲವು ಬಾರಿ ಸಚಿವರಾಗಿ ದೊಡ್ಡ ದೊಡ್ಡ ಖಾತೆ ನಿಭಾಯಿಸಿದ ನಾಯಕ. ಹೀಗೆ ಇಡೀ ಕುಟುಂಬ ರಾಜಕಾರಣದಲ್ಲಿ ಹೆಮ್ಮರವಾಗಿ ಬೆಳೆದಿದೆ. ಆದ್ರೆ ಇಂಥಾ ಕುಟುಂಬದಲ್ಲಿ ಹುಟ್ಟಿದ ಮಗ ಇಂದು ಲಜ್ಜೆಗೇಡಿ ಕೆಲಸ ಮಾಡಿ ದೇಶವನ್ನೇ ಬಿಟ್ಟು ಹಾರಿದ್ದಾನೆ. ಕಂಡ ಕಂಡಲ್ಲಿ ಕಚ್ಚೆ ಬಿಚ್ಚಿ ರಾಜ್ಯದ ಮಾನವನ್ನ ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕಿದ್ದಾನೆ. ಲೋಕಸಭಾ ಚುನಾವಣಾ ಅಖಾಡದಲ್ಲಿ ಸಂಸದ ಪ್ರಜ್ವಲ್ ರೇವಣ್ಣರ ಅಶ್ಲೀಲ ವಿಡಿಯೋಗಳು ಬಿರುಗಾಳಿ ಎಬ್ಬಿಸಿವೆ. ಕಾಂಗ್ರೆಸ್ಗೆ ಬ್ರಹ್ಮಾಸ್ತ್ರವಾಗಿ ಸಿಕ್ಕಿದ್ರೆ ಬಿಜೆಪಿ ಜೆಡಿಎಸ್ ನಾಯಕರು ತಲೆ ತಗ್ಗಿಸುವಂತಾಗಿದೆ. ಹಾಸನದಿಂದ ಹಿಡಿದು ದೆಹಲಿವರೆಗೂ ಸದ್ದು ಮಾಡ್ತಿರೋ ಪ್ರಜ್ವಲ್ ರೇವಣ್ಣನ ಮಾನಗೇಡಿ ಕೆಲ್ಸ ಎಂಥಾದ್ದು..? ಹೆಣ್ಮಕ್ಕಳು ಹೇಗೆ ಇವನ ಬಲೆಗೆ ಬೀಳ್ತಾ ಇದ್ರು..? ಪಕ್ಷದಿಂದಲೇ ಉಚ್ಚಾಟನೆ ಮಾಡಿದ ದೊಡ್ಡಗೌಡ್ರು ಕೊಟ್ಟ ಸಂದೇಶ ಏನು..? ಜೆಡಿಎಸ್ ಶಾಸಕರೇ ತಿರುಗಿ ಬಿದ್ದಿರೋದೇಕೆ..? ಜೈಲಿಗೆ ಕಳಿಸೋಕೆ ಸಿದ್ಧತೆ ಮಾಡಿಕೊಳ್ತಿದ್ಯಾ ಸರ್ಕಾರ..? ಈ ಕುರಿತ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಹಾಸನ ವಿಡಿಯೋ ಕೇಸ್ 4-5 ವರ್ಷ ಹಳೇದು – ಸ್ಪೋಟಕ ಹೇಳಿಕೆ ಕೊಟ್ಟ ಹೆಚ್.ಡಿ ರೇವಣ್ಣ
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಯವ್ರು ಜೇಬಲ್ಲಿ ಒಂದು ಪೆನ್ಡ್ರೈವ್ ಇಟ್ಕೊಂಡು ಓಡಾಡ್ತಿದ್ರು. ಕಾಂಗ್ರೆಸ್ನ ವರ್ಗಾವಣೆ ದಂಧೆ, ವೈಎಸ್ಟಿ ಟ್ಯಾಕ್ಸ್ ಏನೇನೋ ಇದೆ ಅಂತಾ ಮಾಧ್ಯಮಗಳ ಮುಂದೆ ತೋರಿಸಿ ಬಿಲ್ಡಪ್ ಕೊಡ್ತಿದ್ರು. ಆದ್ರೆ ಒಂದು ದಿನನೂ ಆ ಪೆನ್ಡ್ರೈವ್ ರಿಲೀಸ್ ಮಾಡೋ ಧೈರ್ಯ ತೋರಿಸಲೇ ಇಲ್ಲ. ಆದ್ರೀಗ ಅವ್ರದ್ದೇ ಸಹೋದರ ಹೆಚ್.ಡಿ ರೇವಣ್ಣರ ಮಗ ಪ್ರಜ್ವಲ್ ರೇವಣ್ಣನ ರಾಸಲೀಲೆ ವಿಡಿಯೋಗಳು ಪೆನ್ಡ್ರೈವ್, ಸಿಡಿ, ಮೊಬೈಲ್ಗಳಲ್ಲಿ ಹರಿದಾಡ್ತಿವೆ. ಕುಮಾರಣ್ಣ ತೋರಿಸ್ತಿದ್ದ ಪೆನ್ಡ್ರೈವ್ ಇದೇನಾ ಅಂತಾ ಜನ ಪ್ರಶ್ನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಸ್ವಪಕ್ಷ ಸಂಸದನ ವಿರುದ್ಧ ಜೆಡಿಎಸ್ ನಾಯಕರೇ ಸಿಡಿದೆದ್ದಿದ್ದು, ಇದರ ನಡುವೆ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಮಹತ್ವದ ಆದೇಶ ಹೊರಡಿಸಿದ್ದಾರೆ.
ಜೆಡಿಎಸ್ ನಿಂದ ಪ್ರಜ್ವಲ್ ಉಚ್ಚಾಟನೆ!
ಪ್ರಜ್ವಲ್ ರೇವಣ್ಣರ ವಿಕೃತ ಕಾಮಾಯಣಕ್ಕೆ ಜೆಡಿಎಸ್ ಶಾಸಕರೇ ರೊಚ್ಚಿಗೆದ್ದಿದ್ದಾರೆ. ಪ್ರಜ್ವಲ್ ರೇವಣ್ಣರನ್ನ ಪಕ್ಷದಿಂದ ಕಿತ್ತೊಗೆಯುವಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರಿಗೆ ಪತ್ರ ಬರೆದು ಪ್ರಜ್ವಲ್ ಉಚ್ಛಾಟನೆಗೆ ಆಗ್ರಹಿಸಿದ್ರು. ಇತ್ತ ಮುಳಬಾಗಿಲು ಜೆಡಿಎಸ್ ಶಾಸಕ ಶಾಸಕ ಸಮೃದ್ದಿ ಮಂಜುನಾಥ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಚ್.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರನ್ನು ಉಚ್ಛಾಟನೆ ಮಾಡುವಂತೆ ಒತ್ತಾಯಿಸಿದ್ದಾರೆ. ನಿಮಗೆ ಕುಟುಂಬದ ಸದಸ್ಯರು ಮುಖ್ಯವೋ ಅಥವಾ 19 ಜನ ಶಾಸಕರ ಭವಿಷ್ಯ ಬೇಕೋ ನಿರ್ಧರಿಸಿ ಎಂದು ಪ್ರಶ್ನಿಸಿದ್ದಾರೆ. ನಮಗೆಲ್ಲಾ ಪಕ್ಷದ ಹೆಸರು ಹೇಳಲು ಹೇಸಿಗೆ ಎನಿಸುವಂತಹ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಕೂಡಲೇ ಕ್ರಮಕೈಗೊಳ್ಳಿ ಎಂದು ಜೆಡಿಎಸ್ ಶಾಸಕ ಒತ್ತಾಯಿಸಿದ್ರು. ಮೊಮ್ಮಗನ ರಾಸಲೀಲೆಯಿಂದ ಆಘಾತಕ್ಕೆ ಒಳಗಾಗಿರುವ ಹೆಚ್.ಡಿ ದೇವೇಗೌಡರು ಮಹತ್ವದ ಆದೇಶ ಹೊರಡಿಸಿದ್ದಾರೆ. ಅಶ್ಲೀಲ ವಿಡಿಯೋಗಳು ವೈರಲ್ ಆದ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣರನ್ನ ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ.
ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ ಬಳಿಕ ಹೆಚ್.ಡಿ ರೇವಣ್ಣ ಅವರು ಹೆಚ್‌ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ. ವಿಡಿಯೋಗಳು ನಾಲ್ಕರಿಂದ 5 ವರ್ಷ ಹಳೆಯವು. ಚುನಾವಣೆಯ ಸಂದರ್ಭದಲ್ಲಿ ಹೊರಗೆ ತಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿದೆ. FIR ಹಾಕಿ SIT ತನಿಖೆ ನಡೆಸಿಕೊಳ್ಳಲಿ ಕಾನೂನು ರೀತಿ ಏನಿದೆ ಅದಾಗಲಿ ಎಂದಿದ್ದಾರೆ. ಪ್ರಜ್ವಲ್ ರೇವಣ್ಣರ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಹೆಚ್.ಡಿ ಕುಮಾರಸ್ವಾಮಿ ತಮ್ಮ ಸಹೋದರ ಹೆಚ್.ಡಿ ರೇವಣ್ಣರ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದಾರೆ. ಹೆಚ್.ಡಿ ರೇವಣ್ಣ ಕುಟುಂಬ ಬೇರೆ, ನಮ್ಮ ಕುಟುಂಬ ಬೇರೆ. ನಮ್ಮ ಕುಟುಂಬ ಅಂದ್ರೆ ನಾನು ಮತ್ತು ದೇವೇಗೌಡರು ಅಷ್ಟೆ. ಎಸ್‌ಐಟಿ ರಚನೆ ಆಗಿದೆ. ತಪ್ಪು ಮಾಡಿದವರ ಮೇಲೆ ಪಕ್ಷದಿಂದ ಕ್ರಮ ಆಗುತ್ತೆ ಎಂದಿದ್ದಾರೆ. ಅಷ್ಟಕ್ಕೂ ಇಲ್ಲಿ ವಿಡಿಯೋ ಸತ್ಯಾಸತ್ಯತೆ ಬಯಲಿಗೆಳೆಯಲು ಎಸ್‌ಐಟಿ ಟೀಂ ತನಿಖೆ ನಡೆಸುತ್ತಿದೆ. ಆದ್ರೆ ಕಾಡ್ತಿರೋ ಪ್ರಶ್ನೆ ಅಂದ್ರೆ ಈಗಾಗ್ಲೇ ಲೋಕಸಭಾ ಚುನಾವಣೆಗೆ ವೋಟಿಂಗ್ ಆಗಿದೆ. ಒಂದು ವೇಳೆ ಗೆದ್ರೆ ಪ್ರಜ್ವಲ್ ಸಂಸದರಾಗಿ ಮುಂದುವರಿಯಬಹುದಾ..? ಇಲ್ಲ ವಿಡಿಯೋ ಪ್ರಕರಣ ಸಾಬೀತಾದ್ರೆ ಜೈಲು ಸೇರಬಹುದಾ ಅನ್ನೋದಾ..? ಈ ಬಗ್ಗೆಯೂ ಮಾಹಿತಿ ನೀಡ್ತೇನೆ ನೋಡಿ.
ಜೈಲು ಸೇರುತ್ತಾರಾ ಪ್ರಜ್ವಲ್?
ಏಪ್ರಿಲ್ 26ರಂದು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆದಿದ್ದು, ಜೂನ್ 4 ರಂದು ಫಲಿತಾಂಶ ಹೊರ ಬೀಳಲಿದೆ. ಜೂನ್ 4ರ ಚುನಾವಣಾ ಫಲಿತಾಂಶದಲ್ಲಿ ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ ಗೆದ್ದರೆ ಆಯ್ಕೆಯಾದ ಪ್ರಮಾಣಪತ್ರ ನೀಡಲೇಬೇಕಾಗುತ್ತೆ. ಮತ್ತೊಂದೆಡೆ ಈಗಾಗಲೇ ಲೈಂಗಿಕ ದೌರ್ಜನ್ಯದ ಆರೋಪದಡಿ ಪ್ರಜ್ವಲ್ ವಿರುದ್ಧ ಕೇಸ್ ದಾಖಲಾಗಿದೆ. ಮುಂದೆ ಮತ್ತಷ್ಟು ಕೇಸ್ ದಾಖಲಾಗುವ ಸಾಧ್ಯತೆ ಇದೆ. ಆದರೆ ಕೋರ್ಟ್ ನಲ್ಲಿ ಆರೋಪ ಸಾಬೀತಾಗಬೇಕು. ಆರೋಪ ಸಾಬೀತಾದರೆ ಗರಿಷ್ಠ ಏಳು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಸಂಸದರಾಗಿ ಆಯ್ಕೆಯಾದವರು ನಾಲ್ಕು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷ ಜೈಲುಶಿಕ್ಷೆ ವಿಧಿಸಿದರೆ ಆಗ ಸಂಸದ ಸ್ಥಾನದಿಂದ ಅನರ್ಹ ಆಗ್ತಾರೆ. ಬಳಿಕ ಮುಂದಿನ 6 ವರ್ಷ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹರಾಗ್ತಾರೆ. ಹಾಗೇ ಒಬ್ಬ ವ್ಯಕ್ತಿ ತನ್ನ ವಿರುದ್ಧದ ಆರೋಪ, ದೂರು ಸುಳ್ಳು ಎಂದು ಕೋರ್ಟ್ ನಲ್ಲಿ ಸಾಬೀತುಪಡಿಸಲು ಅವಕಾಶವಿದೆ. ಲೈಂಗಿಕ ಹಗರಣದಲ್ಲಿ ತಾನು ಭಾಗಿಯೇ ಆಗಿಲ್ಲ ಎಂದು ಕೋರ್ಟ್ ನಲ್ಲಿ ವಾದಿಸಬಹುದು. ಯುವತಿಯರು, ಮಹಿಳೆಯರ ಜೊತೆಗೆ ಸಮ್ಮತಿಯೊಂದಿಗೆ ಎಲ್ಲವೂ ನಡೆದಿದೆ ಎಂದು ವಾದಿಸಲೂಬಹುದು. ಹೀಗಾಗಿ ಲೈಂಗಿಕ ದೌರ್ಜನ್ಯ ಆರೋಪವನ್ನ ಕೋರ್ಟ್ ನಲ್ಲಿ ಸಾಬೀತುಪಡಿಸುವ ಹೊಣೆಗಾರಿಕೆ ಸಂತ್ರಸ್ತರು, ಎಸ್‌ಐಟಿ ಮೇಲಿರುತ್ತೆ. ದೂರು ನೀಡಿದ ದೂರುದಾರರು ಕೋರ್ಟ್ ನಲ್ಲಿ ಆರೋಪಿ ವಿರುದ್ಧ ಸಾಕ್ಷ್ಯ ನೀಡಿ, ಹೇಳಿಕೆಗೆ ಬದ್ದವಾಗಿರಬೇಕು. ಎಸ್‌ಐಟಿ, ಆರೋಪಿ ವಿರುದ್ಧ ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಿ ಕೋರ್ಟ್ ಗೆ ಹಾಜರುಪಡಿಸಬೇಕು. ಕೆಲವೊಮ್ಮೆ ಕಾನೂನಾತ್ಮಕ, ತಾಂತ್ರಿಕ ಅಂಶಗಳ ಆಧಾರದ ಮೇಲೂ ಕೋರ್ಟ್ ನಲ್ಲಿ ಸಾಬೀತಾಗಿಲ್ಲ. ಹೀಗಾಗಿ ಕೇಸ್ ತನಿಖೆ, ಚಾರ್ಜ್ ಶೀಟ್ ಸಲ್ಲಿಸುವಾಗ, ತಾಂತ್ರಿಕ ಅಂಶಗಳತ್ತಲೂ ಪೊಲೀಸರು ಗಮನಹರಿಸಬೇಕು. ಕೋರ್ಟ್ ನಲ್ಲಿ ಆರೋಪ ಸಾಬೀತಾದರೇ ಮಗ ಮತ್ತು ತಂದೆಗೆ ಗರಿಷ್ಠ 7 ವರ್ಷ ಜೀವಾವಧಿ ಶಿಕ್ಷೆ ವಿಧಿಸಬಹುದು.
ಇನ್ನು ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣವನ್ನ ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿದೆ. ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಎಸ್ಐಟಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ. ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದ ತಂಡ ಪ್ರಕರಣದ ತನಿಖೆಯನ್ನು ಕೈಗೊಂಡಿದೆ. ಪೆನ್‌ಡ್ರೈವ್‌ಗಳನ್ನು ವಶಪಡಿಸಿಕೊಂಡು ವೈಜ್ಞಾನಿಕ ವರದಿಗಾಗಿ ಎಫ್‌ಎಸ್‌ಎಲ್‌ಗೆ ರವಾನಿಸಿದ್ದು, ಸಾಕ್ಷಿಗಳ ಹೇಳಿಕೆಯನ್ನು ಪಡೆಯಲಿದ್ದಾರೆ. ಸಂತ್ರಸ್ತೆಯರಿಗೆ ಜೀವ ಭಯವಿದ್ದರೆ ಪೊಲೀಸ್ ಭದ್ರತೆ ನೀಡಲಾಗುವುದು ಎಂದು ತಿಳಿಸಿದ್ದಾರೆ. 16 ವರ್ಷದಿಂದ 50 ವರ್ಷದವರೆಗಿನ 300ರಿಂದ 400 ಹೆಣ್ಣು ಮಕ್ಕಳ ಮೇಲೆ ವಿಕೃತಿ ಮೆರೆದಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಬಿಜೆಪಿ ನಾಯಕರು ಇದರ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ರು. ಪ್ರಜ್ವಲ್ ರೇವಣ್ಣದ ಪ್ರಕರಣದಿಂದ ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ. ಮಾಧ್ಯಮಗಳ ಮುಂದೆ ಪ್ರತಿಕ್ರಿಯೆಗೆ ನಿರಾಕರಿಸಿದ್ದು, ಅದು ಅವ್ರ ಕುಟುಂಬದ ವಿಷ್ಯ ಎಂದಿದ್ದಾರೆ. ಸದ್ಯ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡ್ತಿರೋ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದಾರೆ. ಮತ್ತೊಂದೆಡೆ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ದಿನಕ್ಕೊಂದು ವಿಚಾರಗಳು ಹೊರ ಬರುತ್ತಲೇ ಇವೆ.