ಅತ್ಯಾಚಾರ ಕೇಸ್‌ನಲ್ಲಿ ಪ್ರಜ್ವಲ್ ರೇವಣ್ಣ ಅಪರಾಧಿ – ಮಹತ್ವದ ತೀರ್ಪು ಪ್ರಕಟಿಸಿದ ಕೋರ್ಟ್

ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡಿದೆ.
ಇದನ್ನೂ ಓದಿ: ಡಾ ರಾಜ್ಕುಮಾರ್ ಸಹೋದರಿ ವಿಧಿವಶ! – ಅಪ್ಪು ಇಲ್ಲ ಅನ್ನೋ ಸುದ್ದಿ ಸಾಯೋವರೆಗೂ ಗೊತ್ತಾಗಲೇ ಇಲ್ಲ!
ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಹಿನ್ನಡೆಯಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಪರಾಧಿ ಎಂದು ತೀರ್ಪು ನೀಡಿದೆ.
ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದ ಜಡ್ಜ್ ಸಂತೋಷ್ ಗಜಾನನ ಭಟ್, ಜುಲೈ 29 ರಂದು ವಿಚಾರಣೆ ಪೂರ್ಣಗೊಳಿಸಿದ್ದರು. ಜುಲೈ 30 ರಂದೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಬೇಕಿತ್ತು. ಆದರೆ, ಕೆಲವೊಂದು ಸ್ಪಷ್ಟೀಕರಣ ಬೇಕಿದ್ದರಿಂದ ತೀರ್ಪನ್ನು ಕಾಯ್ದಿರಿಸುತ್ತಿರುವುದಾಗಿ ಜಡ್ಜ್ ತಿಳಿಸಿದ್ದರು. ಇದೀಗ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿದ್ದಾರೆ. ನಾಳೆ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಪ್ರಮಾಣವನ್ನ ಕೋರ್ಟ್ ಪ್ರಕಟಿಸಲಿದೆ.
ಪ್ರಾಸಿಕ್ಯೂಷನ್ ಹಾಗೂ ಆರೋಪಿಗಳ ಪರ ವಕೀಲರು ಗೂಗಲ್ ಮ್ಯಾಪ್ ಅನ್ನು ಕೂಡಾ ಸಾಕ್ಷ್ಯವನ್ನಾಗಿಸಿ ವಾದ ಮಂಡಿಸಿದ್ದಾರೆ. ಗೂಗಲ್ ಕಂಪನಿಯ ದೃಢೀಕರಣವಿಲ್ಲದೇ ಸಲ್ಲಿಸಿರುವ ಮ್ಯಾಪ್ ಅನ್ನು ಸಾಕ್ಷಿಯನ್ನಾಗಿ ಪರಿಗಣಿಸಬಹುದೇ ಎಂದು ನ್ಯಾಯಾಲಯ ಸ್ಪಷ್ಟನೆ ಕೇಳಿತ್ತು. ಇದಕ್ಕೆ ಉತ್ತರ ನೀಡಿದ್ದ ಎಸ್ಪಿ, ಅತ್ಯಾಚಾರ ನಡೆದ ಹೊಳೆನರಸೀಪುರ ಫಾರ್ಮ್ ಹೌಸ್ನ ಅಕ್ಷಾಂಶ ಹಾಗೂ ರೇಖಾಂಶವನ್ನು ಮಹಜರು ದಾಖಲೆಯಲ್ಲಿ ನಮೂದಿಸಿ ಸಲ್ಲಿಸಲಾಗಿದೆ. ಈ ಅಕ್ಷಾಂಶ ರೇಖಾಂಶಗಳನ್ನು ಕ್ಲಿಕ್ ಮಾಡಿದರೆ ಗೂಗಲ್ ಮ್ಯಾಪ್ನಲ್ಲಿ ಫಾರ್ಮ್ ಹೌಸ್ ಲೊಕೇಷನ್ ಹಾಗೂ 2021ರ ಫೋಟೋ ಸಿಗಲಿದೆ. ಹೀಗಾಗಿ ಇದನ್ನೂ ದಾಖಲೆಯ ಭಾಗವೆಂದು ಪರಿಗಣಿಸಬೇಕು ಎಂದು ಮನವಿ ಮಾಡಿದರು.
ವಶಕ್ಕೆ ಪಡೆಯಲಾದ ಸ್ಯಾಮ್ಸಂಗ್ ಜೆ 4 ಮೊಬೈಲ್ ಫೋನ್ ಅನ್ನು ತನಿಖಾಧಿಕಾರಿ ಈ ಕೇಸಿನಲ್ಲಿ ಜಪ್ತಿ ಮಾಡಿರುವ ಬಗ್ಗೆ ಸ್ಪಷ್ಟೀಕರಣ ಬೇಕಿದೆ ಎಂದು ಕೋರ್ಟ್ ಕೇಳಿತ್ತು. ಇದಕ್ಕೆ ಪ್ರಜ್ವಲ್ ಪರ ವಕೀಲ ವಿಪಿನ್ ಕುಮಾರ್ ಜೈನ್ ಉತ್ತರಿಸಿ, ಬೇರೊಂದು ಕೇಸ್‌ನಲ್ಲಿ ವಶಕ್ಕೆ ಪಡೆದ ಮೊಬೈಲ್ ಅನ್ನು ತನಿಖಾಧಿಕಾರಿ ಈ ಕೇಸಿನಲ್ಲಿ ವಶಕ್ಕೆ ಪಡೆದಿಲ್ಲ. ಎಫ್ಎಸ್ಎಲ್ನಿಂದ ಅವರು ಸ್ವೀಕರಿಸುವ ಬಗ್ಗೆಯಾಗಲೀ ದಾಖಲೆಯಿಲ್ಲ. ಹೀಗಾಗಿ ಮೊಬೈಲ್ ತನಿಖಾಧಿಕಾರಿ ಬಳಿಯಲ್ಲಿರಲೇ ಇಲ್ಲ. ಹೀಗಾಗಿ ಈ ಸಾಕ್ಷ್ಯಕ್ಕೆ ಬೆಲೆಯಿಲ್ಲ ಎಂದು ವಾದ ಮಂಡಿಸಿದ್ದರು.

ನೋಡಿರಿ

