ಪ್ರಜ್ವಲ್ ರೇವಣ್ಣ ಪ್ರಕರಣ – ಎಸ್‌ಐಟಿ ಮುಂದೆ ಡಿಕೆಶಿ ಹೆಸರು ಹೇಳದಂತೆ ಒತ್ತಡ ಹಾಕಿದ್ಯಾರು? – ಹೊಸ ಆಡಿಯೋ ಬಾಂಬ್!

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ಮಾಡಿದ್ದು ಯಾರು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಎಸ್‌ಐಟಿ ಅಧಿಕಾರಿಗಳು ಈಗಾಗಲೇ ತನಿಖೆ ಚುರುಕುಗೊಳಿಸಿದ್ದಾರೆ. ಇದೀಗ ಮತ್ತೊಂದು ಆಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರೋ ದಳಪತಿಗಳನ್ನು ಕೇಸರಿ ಕಲಿಗಳು ನಡುನೀರಲ್ಲಿ ಕೈಬಿಡ್ತಾರಾ? – ಬಿಜೆಪಿ ಸಭೆ ಕರೆದಿದ್ದು ಯಾಕೆ?
ಈ ಕುರಿತು ತಮ್ಮ ಜತೆ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಮಾತನಾಡಿದ್ದಾರೆ ಎನ್ನಲಾದ 1.08 ನಿಮಿಷದ ಆಡಿಯೋವೊಂದನ್ನು ಅಜ್ಞಾತ ಸ್ಥಳದಿಂದ ಶುಕ್ರವಾರ ದೇವರಾಜೇಗೌಡ ಬಿಡುಗಡೆಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪೆನ್‌ಡ್ರೈವ್ ಪ್ರಕರಣ ಸಂಬಂಧ ವಿಶೇಷ ತನಿಖಾ ದಳದ ಮುಂದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಸರು ಹೇಳದಂತೆ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಅವರಿಗೆ ಕಾಂಗ್ರೆಸ್ ಮುಖಂಡರೊಬ್ಬರು ತಾಕೀತು ಮಾಡಿರುವ ಬಗ್ಗೆ ಈ ಆಡಿಯೋದಲ್ಲಿದೆ. ಆದರೆ ಇದರಲ್ಲಿರುವ ಧ್ವನಿ ನಿಜಕ್ಕೂ ಯಾರದು ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ.
ಆಡಿಯೋದಲ್ಲೇನಿದೆ?
‘ನಾನು ಡಿಕೆ ಅವರಿಗೆ ಕರೆ ಮಾಡಿದ್ದೆ. ನಾನು ಪೋನ್ ಮಾಡಿದ್ದೆ, ಭೇಟಿಯಾಗಿದ್ದೆ ಅಂತ ಎಲ್ಲೋ ದೇವರಾಜೇಗೌಡ ಹೇಳಿದ್ದಾನೆ ಅಂದ್ರು. ನಿನಗೆ ಪ್ರಕರಣದ ವಿಚಾರಣೆಗೆ ಎಸ್‌ಐಟಿ ನೋಟಿಸ್ ನೀಡುತ್ತದೆ. ಆಗ ನೀನು (ದೇವರಾಜೇಗೌಡ) ಎಸ್ ಐಟಿ ಮುಂದೆ ಡಿಕೆ ಹೆಸರು ಪ್ರಸ್ತಾಪಿಸಬಾರದು. ನಾನು ಹಲವು ವರ್ಷಗಳಿಂದ ಅವರ ಕುಟುಂಬದ (ಮಾಜಿ ಸಚಿವ ಎಚ್.ಡಿ.ರೇವಣ್ಣ) ವಿರುದ್ಧ ಹೋರಾಟ ಮಾಡಿ ಕೊಂಡು ಬಂದಿದ್ದೇನೆ ಎಂದು ಹೇಳಿಕೆ ಕೊಡುವಂತೆ ಸೂಚಿಸಿದ್ದಾರೆ’ ಎಂದು ಶಿವರಾಮೇಗೌಡ ಸೂಚನೆ ನೀಡಿದ್ದಾರೆ ಎನ್ನಲಾದ ಧ್ವನಿ ಆಡಿಯೋದಲ್ಲಿದೆ.