ಪೆನ್‌ ಡ್ರೈವ್‌ ಪ್ರಜ್ವಲ್‌ ಕೊನೆಗೂ ಅರೆಸ್ಟ್‌  – ಜೆಡಿಎಸ್‌ ಗೆ ಹೊಡೆತ ಬೀಳುತ್ತಾ?

ಪೆನ್‌ ಡ್ರೈವ್‌ ಪ್ರಜ್ವಲ್‌ ಕೊನೆಗೂ ಅರೆಸ್ಟ್‌  – ಜೆಡಿಎಸ್‌ ಗೆ ಹೊಡೆತ ಬೀಳುತ್ತಾ?

ಕಡೆಗೂ ಜರ್ಮನಿಯಿಂದ ಬಂದಿಳಿಯುತ್ತಿದ್ದಂತೆ ಪ್ರಜ್ವಲ್‌ ರೇವಣ್ಣ ಎಸ್‌ಐಟಿ ಬಲೆಗೆ ಬಿದ್ದಿದ್ದಾನೆ. ಏಪ್ರಿಲ್‌ 26ರಂದು ಮಧ್ಯರಾತ್ರಿ ದೇಶಬಿಟ್ಟಿದ್ದ ಪ್ರಜ್ವಲ್‌ ರೇವಣ್ಣ ಈಗ ಮೇ 31ರ ಬೆಳಗಿನ ಜಾವಕ್ಕೂ ಮುಂಚಿತವಾಗಿಯೇ ಬೆಂಗಳೂರಿಗೆ ಬಂದಿಳಿದಿದ್ದಾನೆ.. ಪೆನ್‌ಡ್ರೈವ್‌ ಮೂಲಕ ಪ್ರಜ್ವಲ್‌ ರೇವಣ್ಣನ ನಿಜಬಣ್ಣ ಬಯಲಾಗುತ್ತಿದ್ದಂತೆ ಹಾಸನ ಸಂಸದ ದೇಶಬಿಟ್ಟು ಓಡಿದ್ದ.. ವಿದೇಶಕ್ಕೆ ಹಾರಿದ್ದ ಪೆನ್‌ಡ್ರೈವ್‌ ಪ್ರಜ್ವಲ್‌ನನ್ನು ವಾಪಸ್‌ ಕರೆಸಲು ಇನ್ನಿಲ್ಲದ ಕಸರತ್ತು ನಡೆದಿತ್ತು.. ಸರ್ಕಾರ ಒಂದು ಕಡೆ ಕೇಂದ್ರ ಸರ್ಕಾರದ ಮುಖಾಂತರ ಒತ್ತಡ ಹೇರಿತ್ತು..  ಮತ್ತೊಂದೆಡೆ ಪ್ರಜ್ವಲ್‌ ಕುಟುಂಬ ಸದಸ್ಯರು, ಚಿಕ್ಕಪ್ಪ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಮಂತ್ರಿ ಹೆಚ್‌.ಡಿ.ದೇವೇಗೌಡರು, ದೇಶಕ್ಕೆ ವಾಪಸ್‌ ಬಂದ್ಬಿಡಪ್ಪಾ ಎಂದು ಮನವಿ ಮಾಡಿಕೊಂಡಿದ್ದರು.. ಇಷ್ಟೆಲ್ಲಾ ಆದ್ಮೇಲೆ ತಾನೇನೋ ಘನಂಧಾರಿ ಸಾಧನೆ ಮಾಡಿದ್ದೇನೆ ಎಂಬಂತೆ ವಿದೇಶದಲ್ಲೇ ಕುಳಿತು ಒಂದು ವೀಡಿಯೋ ರಿಲೀಸ್‌ ಮಾಡಿದ್ದ ಪ್ರಜ್ವಲ್‌ ರೇವಣ್ಣ..

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಬೇಡವಾಗಿದ್ದೇಕೆ? – ನತಾಶಾ ಸುತ್ತಾಟ ಮೊದಲೇ ಗೊತ್ತಿತ್ತಾ?

ಹೀಗೆ ವೀಡಿಯೋದಲ್ಲಿ ತನ್ನ ವಿರುದ್ಧ ಷಡ್ಯಂತ್ರ ನಡೆದಿದೆ.. ನನಗೆ ಡಿಪ್ರೆಷನ್‌ ಆದಂಗೆ ಆಗಿತ್ತು.. ಇದೇ ಕಾರಣಕ್ಕಾಗಿ ಏಕಾಂಗಿಯಾಗಿದ್ದೆ ಅಂತೆಲ್ಲಾ ಕತೆ ಹೇಳಿದ್ದಾನೆ ಪ್ರಜ್ವಲ್‌ ರೇವಣ್ಣ.. ಆದ್ರೆ ಈತನ ವಿರುದ್ಧ ಷಡ್ಯಂತ್ರ ನಡೆಯುತ್ತದೆ ಅಂತಾದ್ರೆ, ಅಷ್ಟೆಲ್ಲಾ ವೀಡಿಯೋ ರೆಕಾರ್ಡ್‌ ಮಾಡುವಾಗ ಬುದ್ದಿ ಎಲ್ಲಿಟ್ಟುಕೊಂಡಿದ್ದ? ಅಷ್ಟೆಲ್ಲಾ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಯಾಕೆ ಕೇಳಿ ಬಂತು? ನ್ಯಾಯಾಲಯದಲ್ಲಿ ಪ್ರಜ್ವಲ್‌ ವಿರುದ್ಧದ ಆರೋಪಗಳು ಸಾಬೀತಾಗುತ್ತದೋ ಇಲ್ಲವೋ ಗೊತ್ತಿಲ್ಲ.. ಆದ್ರೆ ವೀಡಿಯೋ ವೈರಲ್‌ ಆಗುತ್ತಿದ್ದಂತೆ ದೇಶ ಬಿಟ್ಟು ಓಡಿ ಹೋಗಿ, ಯಾರ ಸಂಪರ್ಕಕ್ಕೂ ಪ್ರಜ್ವಲ್‌ ಸಿಗ್ತಿಲ್ಲ ಎಂದು ಪ್ರಜ್ವಲ್‌ ಅಪ್ಪ, ಚಿಕ್ಕಪ್ಪ, ತಾತ ಎಲ್ಲರೂ ಹೇಳುವಂತಾಗಿದ್ದನ್ನು ಕಂಡರೆ, ಸಾರ್ವಜನಿಕರ ಮನಸ್ಸಿನಲ್ಲಿ ಈತ ಹೀಗೆ ಮಾಡಿದ್ದಕ್ಕೇ ತಲೆ ಮರೆಸಿಕೊಂಡಿದ್ದಾನೆ ಎಂಬ ಅಭಿಪ್ರಾಯ ಮೂಡಿರುವುದು ಸ್ಪಷ್ಟವಾಗಿದೆ.. ಹೀಗಾಗಿ ಜನತಾ ನ್ಯಾಯಾಲಯದಲ್ಲಿ ಜಾತ್ಯತೀತ ಜನತಾದಳದ ಭವಿಷ್ಯ ಏನಾಗುತ್ತದೆ ಎನ್ನುವುದು ಕೂಡ ಪ್ರಜ್ವಲ್‌ ರೇವಣ್ಣನ ಭವಿಷ್ಯದಷ್ಟೇ ಮುಖ್ಯವಾಗಿದೆ..  ಇಷ್ಟಕ್ಕೂ ಪ್ರಜ್ವಲ್‌ ರೇವಣ್ಣ ವಿರುದ್ಧದ ಪ್ರಕರಣದ ನಂತರ ನಡೆದಿರುವ ಬೆಳವಣಿಗೆಗಳು.. ಯಾವ ಸ್ವರೂಪದಲ್ಲಿ ಜಾತ್ಯಾತೀತ ಜನತಾದಳ ಎಂಬ ರಾಜಕೀಯ ಪಕ್ಷವನ್ನು ಹಾಳುಗೆಡವುವ ಸಾಧ್ಯತೆ ಇದೆ ಅನ್ನೋ ಮಾಹಿತಿ ಇಲ್ಲಿದೆ.

ಕೈಯಲ್ಲಿ ನಿಂಬೆ ಹಣ್ಣು.. ಕೊರಳಲ್ಲಿ ಏಲಕ್ಕಿ ಸರ ಹಾಕಿದ್ರೂ ಇವೆಲ್ಲಾ ಹೆಚ್‌.ಡಿ.ರೇವಣ್ಣ ಅವರನ್ನು ಕಾಪಾಡಲಿಲ್ಲ.. ವಿಶೇಷ ದಿನಗಳಲ್ಲಿ ಮುಹೂರ್ತ ನೋಡಿ, ಬರಿಗಾಲಲ್ಲಿ ನಡೆಯುತ್ತಾ ಬರುವುದು.. ರಾಹು ಕಾಲ ನೋಡಿ ಮನೆಯಿಂದ ಹೊರಬರುವುದು.. ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ಹೋಮ ಹವನ ಮಾಡಿಸುವುದು.. ಇವ್ಯಾವು ರೇವಣ್ಣ ಅವರನ್ನು ಕಾಪಾಡಲಿಲ್ಲ.. ಕೇವಲ ದೇವರ ಮೇಲೆ ನಂಬಿಕೆ ಇಟ್ಟರೆ ಸಾಕು.. ತಾನೇನು ಮಾಡಿದರೂ ದೇವರೇ ಕಾಪಾಡ್ತಾನೆ ಎಂಬ ರೀತಿಯಲ್ಲೇ ರೇವಣ್ಣ ವರ್ತಿಸಿದಂತಿದೆ.. ಇದೊಂದು ರೀತಿಯಲ್ಲಿ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತಿದೆ.. ತಾನು ಮಾಡಿದ್ದು ದೇವರಿಗೂ ಗೊತ್ತಾಗಲಾರದು ಎಂಬ ರೀತಿಯಲ್ಲಿ ಕೆಲಸ ಮಾಡಿದರೆ, ಆಗಬಾರದ್ದು ಆಗಿಬಿಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ..

ಮಾಜಿ ಪ್ರಧಾನಮಂತ್ರಿ ಹೆಚ್‌.ಡಿ.ದೇವೇಗೌಡರು, ರಾಜಕೀಯವಾಗಿ ಇಡೀ ದೇಶದಲ್ಲಿ ಗೌರವಕ್ಕೆ ಪಾತ್ರರಾದವರು.. ದೇವೇಗೌಡರು ರಾಜಕೀಯದ ಹೊರತಾಗಿ ಬೇರೆ ಯಾವುದೇ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದವರಲ್ಲ.. ಅವರ ರಾಜಕೀಯದ ಸಹವರ್ತಿಯಾಗಿದ್ದ, ದೇವೇಗೌಡರು ಸಿಎಂ ಆಗಿದ್ದಾಗ ಡಿಸಿಎಂ ಆಗಿದ್ದ ಮತ್ತು ಗೌಡರು ಪ್ರಧಾನಮಂತ್ರಿಯಾದಾಗ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಜೆ.ಹೆಚ್‌.ಪಟೇಲರು, ತನಗೆ ಮದಿರೆ ಮತ್ತು ಮಾನಿನಿಯರು ಪ್ರಿಯ ಎಂದಿದ್ದರು.. ಅಷ್ಟರಮಟ್ಟಿಗೆ ತಾನು ಗಾಂಧಿಯಲ್ಲ ಎಂದು ಓಪನ್‌ ಆಗಿಯೇ ಹೇಳಿಕೊಂಡಿದ್ದವರು ಜೆಹೆಚ್‌ ಪಟೇಲ್‌.. ಆದರೆ ದೇವೇಗೌಡರು ಇದಕ್ಕೆ ತದ್ವಿರುದ್ಧ.. ಪತ್ನಿ ಚೆನ್ನಮ್ಮ ಜೊತೆಗಿನ ಸುಖ ಸಂಸಾರ ಗೌಡರದ್ದು.. ಅವರೆಂದೂ ಹೆಣ್ಣಿನ ವಿಚಾರದಲ್ಲಿ ಚರ್ಚೆಗೆ ಒಳಗಾದವರಲ್ಲ.. ರಾಜಕಾರಣಿಗಳ ನಡುವೆ ಇಂತವರೂ ಇರುತ್ತಾರೆ ಎಂಬ ರೀತಿಯ ಆದರ್ಶವನ್ನು ದೇವೇಗೌಡರು ತೋರಿದ್ದರು..  ಆದ್ರೆ ಗೌಡರ ಇಂತಹ ಗುಣ ರಾಜಕೀಯದಲ್ಲಿರುವ ಅವರ ಇಬ್ಬರು ಪುತ್ರರಲ್ಲಿ ಒಬ್ಬರಿಗೂ ಒಲಿದಿಲ್ಲ ಎನ್ನುವುದು ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ.. ಕುಮಾರಸ್ವಾಮಿಯವರು ಹಿಂದೆಯೇ ತಮ್ಮ ಮದುವೆಯಾಚೆಗಿನ ಸಂಬಂಧವನ್ನು ಕರ್ನಾಟಕದ ವಿಧಾನಸಭೆಯಲ್ಲೇ ಒಪ್ಪಿಕೊಂಡಿದ್ದರು.. ಆದ್ರೀಗ ಹೆಚ್‌ಡಿ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ, ಮಹಿಳೆಯ ಅಪರಹರಣದಂತ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಎಸ್‌ಐಟಿ ಪೊಲೀಸರು ಬಂಧಿಸಿ ಕಷ್ಟಡಿಯಲ್ಲಿಟ್ಟುಕೊಂಡು ಹೆಚ್‌ಡಿ ರೇವಣ್ಣ ಅವರನ್ನು ವಿಚಾರಣೆ ನಡೆಸಿದ್ದರು. ನಂತರ ಜೈಲಿಗೂ ಹೋಗಿ ಬಂದಿದ್ದರು ಮಾಜಿ ಮಂತ್ರಿ.. ಅದರಲ್ಲೂ ರೇವಣ್ಣ ಅವರ ನಿವಾಸದಲ್ಲೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಇರುವುದರಿಂದ ಅವರ ಮನೆಯಲ್ಲೇ ಸ್ಥಳ ಮಹಜರು ಮಾಡಿದ್ದಾರೆ.. ಅಂದರೆ ದೇವೇಗೌಡರ ಪುತ್ರನ ಮನೆಯಲ್ಲೇ ಮಹಿಳೆಯ ಮೇಲೆ ದೌರ್ಜನ್ಯ ನಡೆದಿದೆ ಎಂಬ ಅನುಮಾನವಿದೆ..

ಆದರೆ ಅಪ್ಪನನ್ನೂ ಮೀರಿಸುವಂತಹ ಕೆಲಸವನ್ನು ಮಗ ಮಾಡಿದ್ದಾನೆ ಎಂಬ ಆರೋಪವಿದೆ.. ಪ್ರಜ್ವಲ್‌ ರೇವಣ್ಣ ಅವರು ರೆಕಾರ್ಡ್‌ ಮಾಡಿದ್ದು ಎನ್ನಲಾಗಿರುವ ವೀಡಿಯೋಗಳು ಈಗಾಗ್ಲೇ ವೈರಲ್‌ ಆಗ್ತಿವೆ.. ಅದಕ್ಕಿಂತ ಹೆಚ್ಚಾಗಿ ಅತ್ಯಾಚಾರದ ಆರೋಪ ಕೂಡ ಪ್ರಜ್ವಲ್‌ ವಿರುದ್ಧ ದಾಖಲಾಗಿದೆ.. ಪ್ರಜ್ವಲ್‌ ರೇವಣ್ಣ ಅವರಿಗೆ ಖುದ್ದು ದೇವೇಗೌಡರೇ ತಮ್ಮ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು.. ಮೊಮ್ಮಗನಿಗೆ ಪಟ್ಟಕಟ್ಟಲು ಹೋಗಿ ತಾವು ತುಮಕೂರಿನಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು.. ಅಷ್ಟರಮಟ್ಟಿಗೆ ಮೊಮ್ಮಗ ಪ್ರಜ್ವಲ್‌ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಿ ಬೆಳೆಸುವ ವಿಶ್ವಾಸದಲ್ಲಿದ್ದರು.. ಆದ್ರೆ ಈಗ ಅದೇ ಮೊಮ್ಮಗನ ವಿರುದ್ಧದ ಆರೋಪಗಳು ತಾತ ಹೊರಗೆ ಮುಖ ತೋರಿಸದಂತಹ ಪರಿಸ್ಥಿತಿ ನಿರ್ಮಿಸಿದೆ..

ತಮ್ಮ ಮನೆಯಲ್ಲೇ ಅಧಿಕಾರ ಗೂಟ ಹೊಡ್ಕೊಂಡು ಕೂತಿರಬೇಕು ಎನ್ನುವ ರಾಜಕಾರಣಿಗಳು, ತಮ್ಮನ್ನು ಬಿಟ್ಟರೆ ತಮ್ಮ ಮಗ ಅಥವಾ ಮಗಳೇ ರಾಜಕೀಯಕ್ಕೆ ಬರಲಿ ಎಂದು ಬಯಸುತ್ತಾರೆ.. ಆದ್ರೆ ರಾಜಕೀಯ ಪಕ್ಷದ ಕಾರ್ಯಕರ್ತರು, ತಾವು ಪ್ರೀತಿಸುವ ಪಕ್ಷದ ತತ್ವ ಸಿದ್ಧಾಂತಗಳನ್ನು ಎಷ್ಟೇ ಒಪ್ಪಿಕೊಂಡಿದ್ದರೂ.. ಅದರ ಪರವಾಗಿ ಎಷ್ಟೇ ಹೋರಾಟ ನಡೆಸಿದ್ದರೂ.. ಅದಕ್ಕಾಗಿ ಎಷ್ಟೇ ಜನಪರ ಕೆಲಸ ಮಾಡಿದ್ದರೂ ಅವರಿಗೆ ರಾಜಕೀಯದಲ್ಲಿ ಅವಕಾಶ ಸಿಗುವುದು ಕಡಿಮೆಯಾಗುತ್ತಿದೆ.. ಬದಲಿಗೆ ಪ್ರಜ್ವಲ್‌ ರೇವಣ್ಣನಂತವರಿಗೆ ಮಣೆಹಾಕಿದರೆ ಮಾತ್ರ ಪಕ್ಷ ಉಳಿಯುತ್ತದೆ ಎಂಬ ಭ್ರಮೆ ಹುಟ್ಟಿಸುವ ಹಾಗೂ ರಾಜಕೀಯವನ್ನು ರಾಜಪ್ರಭುತ್ವದ ರೀತಿಯಲ್ಲಿ ಮಾಡಲು ಹೊರಟಿತ್ತು ಜೆಡಿಎಸ್‌.. ಈಗ ಅದೇ ರಾಜಕುಮಾರನ ವಿರುದ್ಧದ ಆರೋಪಗಳು ಜೆಡಿಎಸ್‌ನ ಸಾಮ್ರಾಜ್ಯದ ಬುನಾದಿಯನ್ನೇ ಅಲುಗಾಡಿಸುತ್ತಿದೆ.. ಹಾಸನದಲ್ಲೇ ಜೆಡಿಎಸ್‌ ವಿರುದ್ಧ ಅದರಲ್ಲೂ ವಿಶೇಷವಾಗಿ ರೇವಣ್ಣ ಹಾಗೂ ಪ್ರಜ್ವಲ್‌ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗುತ್ತಿದೆ. ದೇವೇಗೌಡರು ತಮ್ಮ ಇಳಿವಯಸ್ಸಿನಲ್ಲಿ ಮಗ ಜೈಲಿಗೆ ಹೋಗುವುದನ್ನು ನೋಡುವಂತಾಯಿತು… ಜೊತೆಗೆ ತಮ್ಮ ಕುಟುಂಬ ರಾಜಕಾರಣದ ವಾರಸುದಾರ ಆಗಬೇಕಿದ್ದ ಪ್ರಜ್ವಲ್‌ ರೇವಣ್ಣ ಜೈಲಿಗೆ ಹೋಗುವುದನ್ನೂ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೊಮ್ಮಗನ ವಿರುದ್ಧದ ಆರೋಪಗಳಿಗೆ ಉತ್ತರ ಕೊಡಲು ಜೆಡಿಎಸ್‌ನ ನಾಯಕರಿಗೆ ಯಾವುದೇ ಪದಗಳು ಸಿಗುವುದು ಕಷ್ಟವಿದೆ.. ಇಲ್ಲಿ ಪ್ರಜ್ವಲ್‌ ವಿರುದ್ಧದ ಆರೋಪಗಳು.. ರೇವಣ್ಣ ವಿರುದ್ಧದ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗುತ್ತವೋ ಇಲ್ಲವೋ ಗೊತ್ತಿಲ್ಲ.. ಆದರೆ, ಜನರ ನಡುವೆ ಅಷ್ಟು ಸುಲಭವಾಗಿ ಈ ವಿಷಯಗಳನ್ನು ಮರೆಮಾಚಲು ಸಾಧ್ಯವಿಲ್ಲ. ತೆನೆ ಹೊತ್ತ ಮಹಿಳೆಯ ಪಕ್ಷದ ನಾಯಕರಿಂದಲೇ ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ನಡೆಯುತ್ತದೆ ಅಂತಾದ್ರೆ ಆ ಪಕ್ಷದಲ್ಲಿ ಮುಂದುವರೆಯುವ ಬಗ್ಗೆ ಮಹಿಳೆಯರೂ ಯೋಚಿಸುವಂತಾಗಿದೆ.. ರಾಜಕೀಯವಾಗಿ ಇದನ್ನು ಎದುರಿಸುತ್ತೇವೆ.. ರಾಜಕೀಯ ಷಡ್ಯಂತ್ರ ಇದು ಅಂತೆಲ್ಲಾ ನಾನಾ ಪದಪುಂಜಗಳನ್ನು ಬಳಸಿ ಜೆಡಿಎಸ್‌ ನಾಯಕರು ಸಮರ್ಥನೆಗಳನ್ನು ಕೊಡಬಹುದು.. ಆದರೆ ಈ ಪ್ರಕರಣ ಅಷ್ಟು ಸುಲಭವಾಗಿ ಜೆಡಿಎಸ್‌ ಅರಗಿಸಿಕೊಳ್ಳುವುದು ಕಷ್ಟವಾಗಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ..

ಜನರು ಯಾವುದೇ ಪಕ್ಷವನ್ನು ಬೆಂಬಲಿಸುವುದು ಅದರ ಸಿದ್ಧಾಂತ ಮತ್ತು ಅದರ ಮೇಲಿನ ನಂಬಿಕೆಯ ಕಾರಣದಿಂದ.. ಜಾತ್ಯಾತೀತ ಜನತಾದಳದ ನಾಯಕರು ಎಷ್ಟೇ ಸಮಜಾಯಿಷಿ ಕೊಡ್ತಾ ಇದ್ದರೂ ಒಂದಲ್ಲ ಎರಡಲ್ಲ.. ಅದೆಷ್ಟೋ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಗಂಭೀರ ಆರೋಪ ಜೆಡಿಎಸ್‌ನ ರಾಜಕುಮಾರನ ತಲೆಗೆ ಅಂಟಿಕೊಂಡಿದೆ.. ಯಾರೋ ಒಂದಷ್ಟು ಮಂದಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊಂದಿದವರು ರಾಜಕೀಯವಾಗಿ ಮತ್ತೆ ಗೆದ್ದು ಬಂದಿರಬಹುದು.. ಆದರೆ ಜೆಡಿಎಸ್‌ ಎನ್ನುವುದು ಒಂದು ಕುಟುಂಬದ ಒಡೆತನದಲ್ಲಿರುವ ಪಕ್ಷ.. ಅಂತಹ ಪಕ್ಷದ ಕುಟುಂಬ ಸದಸ್ಯರೇ ಇಂತಹ ಹೀನ ಕೃತ್ಯ ಎಸಗಿದ್ದಾರೆ ಎನ್ನುವ ಅಭಿಪ್ರಾಯ ಸಾಮಾನ್ಯ ಜನರಲ್ಲಿ ಮೂಡಿದರೆ, ಅಂತಹ ರಾಜಕೀಯ ಪಕ್ಷ ಮತ್ತೆ ಜನರ ವಿಶ್ವಾಸ ಗಳಿಸುವುದು ಅಷ್ಟು ಸುಲಭವಿಲ್ಲ..

Shwetha M