ನನಗೂ ಪ್ರಕರಣಕ್ಕೂ ಸಂಬಂಧವಿಲ್ಲ.. ಏನಿದ್ರೂ ಲಾಯರ್ ಬಳಿ ಮಾತನಾಡಿ! – ಎಸ್‌ಐಟಿ ಪ್ರಶ್ನೆಗಳಿಗೆ ಪ್ರಜ್ವಲ್ ಉತ್ತರ ನೀಡದೇ ಅಸಹಕಾರ

ಹಾಸನ ಪೆನ್‌ಡ್ರೈವ್ ಪ್ರಕರಣ ಆರೋಪಿ ಪ್ರಜ್ವಲ್ ರೇವಣ್ಣ ಎಸ್‌ಐಟಿ ಕಸ್ಟಡಿಯಲ್ಲಿದ್ದಾರೆ. ಪ್ರಜ್ವಲ್‌ನನ್ನು ಎಸ್‌ಐಟಿ ಅಧಿಕಾರಿಗಳು ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ಅಧಿಕಾರಿಗಳ ಯಾವುದೇ ಪ್ರಶ್ನೆಗೂ ಸೂಕ್ತ ಉತ್ತರ ನೀಡದೇ ಅಸಹಕಾರ ತೋರಿದ್ದಾರೆ ಎಂದು ಹೇಳಾಗುತ್ತಿದೆ.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಅಧಿಕಾರಿ ಆತ್ಮಹತ್ಯೆ ಪ್ರಕರಣ- ನಾಗೇಂದ್ರ ರಾಜಿನಾಮೆಗೆ ಸಿಎಂ ಸೂಚನೆ
ಕಳೆದ ಎರಡು ದಿನಗಳಿಂದ ಪ್ರಜ್ವಲ್ ರೇವಣ್ಣ ಎಸ್‌ಐಟಿ ವಶದಲ್ಲಿದ್ದಾರೆ. ವಿಚಾರಣೆ ವೇಳೆ ಈ ಪ್ರಕರಣ ಬಗ್ಗೆ ಪ್ರಜ್ವಲ್ ರೇವಣ್ಣ ಅಧಿಕಾರಿಗಳಿಗೆ ಯಾವುದೇ ಸೂಕ್ತ ಉತ್ತರ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಇದು ರಾಜಕೀಯ ಪಿತೂರಿ. ಸುಖಾಸುಮ್ಮನೆ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಿಮ್ಮ ಕೆಲಸ ನೀವು ಮಾಡಿ. ನಾನೇನು ಹೇಳಲ್ಲ ಎಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಶುಕ್ರವಾರ ಇಡೀ ದಿನದ ವಿಚಾರಣೆಯಲ್ಲಿ ಪ್ರಜ್ವಲ್ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ತನಿಖಾಧಿಕಾರಿ ಎಷ್ಟೇ ಪ್ರಶ್ನೆ ಮಾಡಿದರೂ ನಮ್ಮ ಲಾಯರ್ ಕೇಳಬೇಕು ಎಂದು ಹೇಳಿದ್ದಾರೆ. ನನಗೂ ಪ್ರಕರಣಕ್ಕೂ ಸಂಬಂಧವಿಲ್ಲ. ನೀವು ಏನೇ ಪ್ರಶ್ನೆ ಕೇಳಿದರೂ ನಮ್ಮ ಲಾಯರ್ ಬಳಿ ಮಾತನಾಡಿ ಹೇಳುತ್ತೇನೆ. ಏನೇ ಉತ್ತರ ಕೊಡುವುದಿದ್ದರೂ ಲಾಯರ್ ಬಳಿ ಮಾತನಾಡಿ ಆ ನಂತರ ಉತ್ತರಿಸುತ್ತೇನೆ ಎಂದಿದ್ದಾರೆ ಎನ್ನಲಾಗಿದೆ.
ಪ್ರಜ್ವಲ್ ರೇವಣ್ಣನನ್ನು ಶುಕ್ರವಾರ ಕೋರ್ಟ್ ಮುಂದೆ ಹಾಜರುಪಡಿಸಿದ್ದ ಎಸ್‌ಐಟಿ ಅಧಿಕಾರಿಗಳು ಆರು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ರಾತ್ರಿ 9 ಗಂಟೆ ತನಕ ವಿಚಾರಣೆ ನಡೆಸಿದ ಅಧಿಕಾರಿಗಳು, ನಂತರ ಊಟ ನೀಡಿದರು. ರಾತ್ರಿ 11:30 ತನಕ ಕೂತಿದ್ದ ಪ್ರಜ್ವಲ್ ನಂತರ ನಿದ್ದೆಗೆ ಜಾರಿದ್ದಾರೆ ಎನ್ನಲಾಗಿದೆ. ಇಂದು ಕೂಡ ವಿಚಾರಣೆ ನಡೆಸಲಿರುವ ಅಧಿಕಾರಿಗಳು ಭಾನುವಾರ ಅಥವಾ ಸೋಮವಾರ ಸ್ಥಳ ಮಹಜರು ಪ್ರಕ್ರಿಯೆಗೆ ಹಾಸನದ ಹೊಳೆನರಸೀಪುರಕ್ಕೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.