ಹಾಸನ ಪೆನ್ ಡ್ರೈವ್ ಕೇಸ್ ಪ್ರಕರಣ – ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಹಲವೆಡೆ ಬೃಹತ್ ಪ್ರತಿಭಟನೆ
ಹಾಸನದಲ್ಲಿನ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ಚುರುಕುಗೊಂಡಿದೆ. ಕ್ಷಣ ಕ್ಷಣಕ್ಕೂ ಸ್ಪೋಟಕ ವಿಚಾರ ಬಯಲಾಗುತ್ತಿದೆ. ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇದೀಗ ತಂದೆ ಹೆಚ್.ಡಿ.ರೇವಣ್ಣ ವಿರುದ್ಧವೂ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣದ ಎ1 ಆರೋಪಿ ಹೆಚ್.ಡಿ.ರೇವಣ್ಣ, ಎ2 ಪ್ರಜ್ವಲ್ ರೇವಣ್ಣ ಆಗಿದ್ದು, ಈ ಹಿಂದೆ ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಮಹಿಳೆ ದೂರು ಆಧರಿಸಿ ಪೊಲೀಸರು FIR ದಾಖಲಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ವಿಧಿವಶ
ಈ ಪ್ರಕರಣ ತನಿಖೆಗೆ ಈಗಾಗಲೇ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ಮೆಂಟ್ನ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಎಸ್ಐಟಿ ತಂಡ ರಚನೆ ಮಾಡಲಾಗಿದ್ದು, ಶೀಘ್ರದಲ್ಲೇ ವರದಿ ನೀಡುವಂತೆ ಸೂಚನೆ ನೀಡಿದೆ. ಈ ಹಿಂದೆ ಗೌರಿ ಲಂಕೇಶ್ ಕೇಸ್ನಲ್ಲಿ ದೊಡ್ಡ ಪಾತ್ರ ವಹಿಸಿದ್ದ ಬಿ.ಕೆ ಸಿಂಗ್ ಜೊತೆ ಮೂವರು SP, 4 ಡಿವೈಎಸ್ಪಿ ಕೂಡ ಎಸ್ಐಟಿ ತಂಡದಲ್ಲಿದ್ದಾರೆ.
ಯಾರೇ ಇದ್ದರೂ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ
ಇನ್ನು ಈ ಪ್ರಕರಣದ ಸಂಬಂಧ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಹೆಚ್ಡಿ.ರೇವಣ್ಣ ಇರಲಿ, ಯಾರೇ ಇದ್ದರೂ ಕ್ರಮ ಕೈಗೊಳ್ಳುತ್ತೇವೆ. ದೂರುದಾರರು ಯಾರ ಹೆಸರು ಉಲ್ಲೇಖಿಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು . ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸಿದ್ದೇವೆ. ತನಿಖಾ ತಂಡದಲ್ಲಿ ಎಸ್ಪಿ ಮಟ್ಟದ ಅಧಿಕಾರಿಗಳು ಇದ್ದಾರೆ. ಎಸ್ಐಟಿ ಅಧಿಕಾರಿಗಳ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತೆ. ಅಧಿಕಾರಿಗಳು ಪೆನ್ಡ್ರೈವ್, ಸಾಕ್ಷಿ ಎಲ್ಲವನ್ನೂ ಕಲೆ ಹಾಕುತ್ತಿದ್ದಾರೆ. ವಿದೇಶದಿಂದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ. ಎಸ್ಐಟಿ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಎಲ್ಲ ವಿಡಿಯೋಗಳನ್ನು ಎಫ್ಎಸ್ಲ್ಗೆ ಕಳುಹಿಸುತ್ತೇವೆ ಎಂದು ಹೇಳಿದರು.
ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಹಾಸನ ಜಿಲ್ಲೆಯ ಹಲವು ಮಹಿಳೆಯರ ಜೊತೆಗಿನ ಅಶ್ಲೀಲ ವೀಡಿಯೋ ಚಿತ್ರೀಕರಿಸಿದ ಪ್ರಭಾವಿ ವ್ಯಕ್ತಿಯನ್ನು ಬಂಧಿಸುವಂತೆ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಆಗ್ರಹಿಸಿದೆ. ಅಲ್ಲದೆ ಪೆನ್ಡ್ರೈವ್ ಮೂಲಕ ಮಹಿಳೆಯರ ಅಶ್ಲೀಲ ವೀಡಿಯೋ ಹಂಚಿ ಅವರ ಖಾಸಗಿ ಜೀವನಕ್ಕೆ ಧಕ್ಕೆ ತಂದವರ ವಿರುದ್ಧವೂ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿವಿಧ ರೈತಪರ ಸಂಘಟನೆಗಳು, ಜನಪರ, ದಲಿತ, ಮಹಿಳಾ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಲಿವೆ.
ಜೆಡಿಎಸ್ನಿಂದಲೂ ದೂರು
ಏಪ್ರಿಲ್ 21ರಂದು ಪೆನ್ಡ್ರೈವ್, ಸಿಡಿ ಮೂಲಕ ಹಾಸನ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಜೆಡಿಎಸ್ ಚುನಾವಣಾ ಏಜೆಂಟ್, ಏಪ್ರಿಲ್ 23ರಂದು ಅರೇಹಳ್ಳಿ ನವೀನ್ ಗೌಡ ಎಂಬುವರ ವಿರುದ್ಧ ಹಾಸನದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಹಾಸನ ಎನ್ ಡಿ ಎ. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಮಣಿಸಲು ಅವರ ಮುಖವನ್ನ ಮಾರ್ಫ್ ಪೋಟೋ ವಿಡಿಯೋ ಮಾಡಿ ಮತದಾರರಿಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ನವೀನ್ ಗೌಡ ಎಂಬುವರ ವಿರುದ್ಧ FIR ದಾಖಲಾಗಿದೆ.