ದರ್ಶನ್‌ಗೆ ಮತ್ತಷ್ಟು ಸಂಕಷ್ಟ ತಂದ ಮಾಫಿ ಸಾಕ್ಷಿ – ರೇಣುಕಾಸ್ವಾಮಿಯ ಕೊನೇ ಕ್ಷಣಗಳನ್ನು ಇಂಚಿಂಚೂ ವಿವರಿಸಿದ ಪ್ರದೂಷ್

ನಟ ದರ್ಶನ್ ತನ್ನ ಜೊತೆಯಲ್ಲಿದ್ದವರೇ ಮಾಪಿ ಸಾಕ್ಷಿಯಾಗುತ್ತಾರೆ ಎಂದು ಕನಸು ಮನಸಲ್ಲೂ ಎಣಿಸಿರಲಿಲ್ಲ. ಇದೀಗ ಮಾಫಿ ಸಾಕ್ಷಿಯಾಗಿರುವ ಪ್ರದೂಷ್ ರೇಣುಕಾಸ್ವಾಮಿಯ ಹತ್ಯೆಯ ಸತ್ಯವನ್ನು ಇಂಚಿಂಚಾಗಿ ವಿವರಿಸಿದ್ದಾರೆ. ಒಂದೆಡೆ ಆ ಭಯಾನಕ ಕೃತ್ಯದ ವಿವರಣೆ.. ಮತ್ತೊಂದೆಡೆ ದರ್ಶನ್ ಮತ್ತು ಪವಿತ್ರ ಕ್ರೂರತ್ವ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ.
ಇದನ್ನೂ ಓದಿ:ರೇಣುಕಾಸ್ವಾಮಿ ಕೇಸ್‌ನಲ್ಲಿ ಮತ್ತಿಬ್ಬರು ಮಾಫಿ ಸಾಕ್ಷಿಗೆ ರೆಡಿ – ದರ್ಶನ್‌ಗೆ ಮತ್ತಷ್ಟು ಸಂಕಷ್ಟ ಶುರುವಾಯ್ತಾ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗ ಒಟ್ಟು 11 ಪುಟಗಳ ವಿಸ್ತೃತ ಅಂಶಗಳನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿಯಲ್ಲಿ ಪ್ರಕರಣದ ಇಂಚಿಂಚು ಘಟನೆಯನ್ನು ಆರೋಪಿ 14 ಪ್ರದೂಷ್ ವಿವರಿಸಿದ್ದಾರೆ. ಮಾಫಿ ಸಾಕ್ಷಿ ಅರ್ಜಿ ಸಲ್ಲಿಸಿರೋ ಆರೋಪಿ ಪ್ರದೂಷ್ ಪ್ರಕರಣದಲ್ಲಿ ತನ್ನ ಪಾತ್ರದ ಬಗ್ಗೆಯೂ ವಿವರಿಸಿದ್ದಾರೆ. ಕೊಲೆ ನಡೆಯುತ್ತಿದ್ದ ವೇಳೆ ರೇಣುಕಾಸ್ವಾಮಿಯನ್ನು ರಕ್ಷಿಸಲು ಯತ್ನಿಸಿದ್ದೆ ಎಂದು ಕೂಡಾ ಮಾಫಿ ಸಾಕ್ಷಿ ಪ್ರದೂಷ್ ಹೇಳಿದ್ದಾರೆ. ಹಲ್ಲೆ ನಿಲ್ಲಿಸುವಂತೆ ಸಹ ಆರೋಪಿಗಳಿಗೆ ತಾನು ಮನವಿ ಮಾಡಿದ್ದಾಗಿಯೂ ಅರ್ಜಿಯಲ್ಲಿ ತಿಳಿಸಿದ್ದಾರೆ.
2003ರಿಂದ ದರ್ಶನ್ ಪ್ರದೂಷ್ ಗೆ ಪರಿಚಯವಿದ್ದರು. ಜಯನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ಪರಿಚಯವಾಗಿತ್ತು. 08 ಜೂನ್ 2024ರಂದು ಆರೋಪಿ ದರ್ಶನ್ ನಿವಾಸಕ್ಕೆ ಹೋಗಿದ್ದಾಗಿ ಪ್ರದೂಷ್ ಹೇಳಿಕೆ ಕೊಟ್ಟಿದ್ದಾನೆ. ಬಳಿಕ ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್‌ಗೆ ದರ್ಶನ್ ಕರೆದೊಯ್ದರು. ಜೂನ್ 8 ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಪವನ್ ರೆಸ್ಟೋರೆಂಟ್‌ಗೆ ಬಂದಿದ್ದ. ದರ್ಶನ್‌ಗೆ ಮೊಬೈಲ್‌ನಲ್ಲಿ ಏನೋ ತೋರಿಸಿದ್ದಾಗಿ ಅರ್ಜಿಯಲ್ಲಿ ವಿವರಿಸಲಾಗಿದೆ. ಬಳಿಕ ದರ್ಶನ್ ಪವಿತ್ರಾ ಗೌಡಗೆ ಕರೆ ಮಾಡಿ ಮಾತನಾಡಿದ್ದನ್ನು ತಾನು ಕೇಳಿಸಿಕೊಂಡಿದ್ದಾಗಿ ಪ್ರದೂಷ್ ಹೇಳಿಕೆ ಕೊಟ್ಟಿದ್ದಾನೆ. ಬಳಿಕ ಪವಿತ್ರಾ ಗೌಡ ನಿವಾಸದ ಕಡೆಗೆ ಕಾರು ಚಲಾಯಿಸುವಂತೆ ದರ್ಶನ್ ಸೂಚಿಸಿದ್ದರು. ಸಂಜೆ 4.30ಕ್ಕೆ ಪವಿತ್ರಾ ಗೌಡ ನಿವಾಸ ತಲುಪಿದ್ದು, ದರ್ಶನ್ ಹಾಗೂ ಪವಿತ್ರ ಒಂದೇ ಕಾರಿನಲ್ಲಿ ಶೆಡ್ ಗೆ ಬಂದಿದ್ದರು. ವಿನಯ್ ಸೂಚನೆಯಂತೆ ಕಾರು ರಾಜರಾಜೇಶ್ವರಿ ದೇವಸ್ಥಾನದ ಮೂಲಕ ಶೆಡ್ ಗೆ ಬಂದಿತ್ತು. ಶೆಡ್‌ಗೆ ಪ್ರವೇಶಿಸಿದಾಗ ಸುಮಾರು 30 ವರ್ಷದ ವ್ಯಕ್ತಿಯೊಬ್ಬ ತಲೆಬಾಗಿಸಿಕೊಂಡು ಕುಳಿತಿದ್ದ. ಆತನ ಸುತ್ತ ರಾಘವೇಂದ್ರ, ಪವನ್, ನಾಗರಾಜ್, ನಂದೀಶ್ ಹಾಗೂ ಇತರರು ಸ್ಥಳದಲ್ಲಿದ್ದರು. ದರ್ಶನ್ ರೇಣುಕಾಸ್ವಾಮಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಮತ್ತು ಖಾಸಗಿ ಅಂಗಗಳ ಫೋಟೋ ಕಳುಸ್ತೀಯಾ ಅಂತ ದರ್ಶನ್ ರೇಣುಕಾಸ್ವಾಮಿಗೆ ಹೊಡೆದಿದ್ದನ್ನು ತಾನು ನೋಡಿದ್ದಾಗಿ ಪ್ರದೂಷ್ ತಿಳಿಸಿದ್ದಾನೆ. ರೇಣುಕಾಸ್ವಾಮಿಯ ತಲೆಯಿಂದ ರಕ್ತ ಬರುತ್ತಿರುವುದನ್ನು ಗಮನಿಸಿದ್ದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ದರ್ಶನ್ ಸೂಚನೆಯಂತೆ ಪವಿತ್ರಾ ಗೌಡರನ್ನು ರೇಣುಕಾಸ್ವಾಮಿ ಬಳಿಗೆ ಕರೆದುಕೊಂಡು ಹೋಗಿದ್ದೆ ಎಂದು ಪ್ರದೂಶ್ ಅರ್ಜಿಯಲ್ಲಿ ಹೇಳಿದ್ದಾನೆ. ದರ್ಶನ್ ಪವಿತ್ರಾ ಗೌಡರಿಂದ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆಸಿದ್ದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಬಳಿಕ ಪವಿತ್ರಾ ಗೌಡರನ್ನು ಮತ್ತೆ ಕಾರಿನಲ್ಲಿ ಕೂರಿಸಲಾಗಿತ್ತು. ಈ ವೇಳೆ ರೇಣುಕಾಸ್ವಾಮಿಯ ಬಟ್ಟೆಗಳನ್ನು ತೆಗೆದು ಕೇವಲ ಒಳಉಡುಪಿನಲ್ಲಿ ಇರಿಸಲಾಗಿತ್ತು. ಆರೋಪಿ ನಂದೀಶ್ ರೇಣುಕಾಸ್ವಾಮಿಯನ್ನು ಎತ್ತಿ ಟಾಟಾ ಏಸ್ ವಾಹನಕ್ಕೆ ನೇಣು ಹಾಕಲು ಪ್ರಯತ್ನಿಸಿದ್ದ. ಬಳಿಕ ನಾಗರಾಜ್ ನೈಲಾನ್ ಹಗ್ಗದಿಂದ ಹಲ್ಲೆ ನಡೆಸಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ನಂದೀಶ್ ಮತ್ತು ಪವನ್ ಮರದ ಕೋಲಿನಿಂದ ಹಲ್ಲೆ ಮಾಡಿದ್ದು ದರ್ಶನ್ ಕೂಡ ನೈಲಾನ್ ಹಗ್ಗದಿಂದ ರೇಣುಕಾಸ್ವಾಮಿಗೆ ಮೂರರಿಂದ ನಾಲ್ಕು ಬಾರಿ ಹೊಡೆದಿದ್ದಾರೆ. ಈ ವೇಳೆ ಪವನ್ ರೇಣುಕಾಸ್ವಾಮಿಯ ಮೊಬೈಲ್‌ನಲ್ಲಿದ್ದ ಸಂದೇಶಗಳನ್ನು ಓದುತ್ತಿದ್ದ. ಸಂದೇಶಗಳ ಆಧಾರದ ಮೇಲೆ ದರ್ಶನ್ ಮತ್ತೆ ರೇಣುಕಾಸ್ವಾಮಿಗೆ ಮತ್ತೆ ಹಲ್ಲೆ ಮಾಡಿದ್ದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಮೊಬೈಲ್ ಪರಿಶೀಲಿಸಿದಾಗ ಇನ್‌ಸ್ಟಾಗ್ರಾಂನಲ್ಲಿ ಪ್ರೊಫೈಲ್ ಹೆಸರು ಗೌತಮ್ ಎಂದು ಕಾಣಿಸಿಕೊಂಡಿತ್ತು. ರೇಣುಕಾಸ್ವಾಮಿ ಹಲವು ಮಹಿಳೆಯರಿಗೆ ಅಶ್ಲೀಲ ಮತ್ತು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದ. ಬಳಿಕ ರೇಣುಕಾಸ್ವಾಮಿಯ ಒಳಉಡುಪನ್ನೂ ತೆಗೆದುಹಾಕಲಾಗಿತ್ತು. ದರ್ಶನ್ ರೇಣುಕಾಸ್ವಾಮಿಯ ಖಾಸಗಿ ಅಂಗಕ್ಕೆ ಹಲವು ಬಾರಿ ಒದ್ದಿದ್ದಾಗಿ ಪ್ರದೂಷ್ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಬಳಿಕ ದರ್ಶನ್ ಎರಡೂ ಕಾಲುಗಳಿಂದ ರೇಣುಕಾಸ್ವಾಮಿಯ ಎದೆ ತುಳಿದಿದ್ದಾರೆ. ಸಂಜೆ ಸುಮಾರು 5.30ಕ್ಕೆ ದರ್ಶನ್ ಮತ್ತು ವಿನಯ್ ಸ್ಥಳದಿಂದ ತೆರಳಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ರೇಣುಕಾಸ್ವಾಮಿಯನ್ನು ನೋಡಿಕೊಳ್ಳಲು ರಾಘವೇಂದ್ರ, ನಂದೀಶ್, ದೀಪಕ್, ಲಕ್ಷ್ಮಣ್ ಮತ್ತಿತರರು ಸ್ಥಳದಲ್ಲೇ ಉಳಿದಿದ್ದರು. ಕೂಡಲೇ ದರ್ಶನ್‌ಗೆ ಈ ವಿಚಾರ ತಿಳಿಸಲು ಅವರ ಮನೆಗೆ ಹಿಂದಿರುಗಿದ್ದೆ ಎಂದು ಪ್ರದೋಶ್ ಹೇಳಿದ್ದಾನೆ. ರೇಣುಕಾಸ್ವಾಮಿ ಮೃತಪಟ್ಟಿರುವ ವಿಚಾರವನ್ನು ದರ್ಶನ್‌ಗೆ ತಿಳಿಸಿದ್ದೆ. ಈ ವಿಚಾರ ಕೇಳಿ ದರ್ಶನ್ ಕೂಡ ಆಘಾತಕ್ಕೊಳಗಾಗಿದ್ದರು. ದರ್ಶನ್ ತನ್ನ ಬಳಿ ಇದ್ದ ಗನ್‌ನಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾಗಿ ಆರೋಪ ಮಾಡಿದ್ದು, ತನಗೆ ಸಹಾಯ ಮಾಡುವಂತೆ ದರ್ಶನ್ ಕೇಳಿಕೊಂಡಿದ್ದರು ಎಂದು ಪ್ರದೋಶ್ ಹೇಳಿದ್ದಾನೆ.
ರಾಘವೇಂದ್ರ, ನಂದೀಶ್ ಮತ್ತು ಪವನ್ ಪೊಲೀಸರ ಮುಂದೆ ಶರಣಾಗುವಂತೆ ಪ್ರದೋಶ್ ಸೂಚಿಸಿದ್ದ. ಶೆಡ್‌ನ ಹೆಸರು ಬಹಿರಂಗಪಡಿಸದಂತೆ ವಿನಯ್ ತನ್ನನ್ನು ಬೆದರಿಸಿದ್ದಾಗಿ ಪ್ರದೋಶ್ ಆರೋಪಿಸಿದ್ದಾರೆ. ತಾನು ಇನ್ಸ್‌ಪೆಕ್ಟರ್ ವಿನಯ್‌ಗೆ ಕರೆ ಮಾಡಿ ಒಬ್ಬ ವ್ಯಕ್ತಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಿದ್ದಾಗಿ ಪ್ರದೋಶ್ ಹೇಳಿದ್ದಾನೆ. ಪ್ರಕರಣ ಗಂಭೀರವಾಗಿರುವುದರಿಂದ ಆರೋಪಿಗಳನ್ನು ಶರಣಾಗುವಂತೆ ಮಾಡಬೇಕು ಎಂದು ಇನ್ಸ್‌ಪೆಕ್ಟರ್ ಸೂಚಿಸಿದ್ದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ನಂತರ ರಾಘವೇಂದ್ರ ಮತ್ತು ಇತರರೊಂದಿಗೆ ದರ್ಶನ್ ಅವರನ್ನು ಭೇಟಿಯಾಗಲು ತೆರಳಿದ್ದೆ ಎಂದು ಪ್ರದೂಷ್ ತಿಳಿಸಿದ್ದಾನೆ. ರಾಘವೇಂದ್ರ ಶರಣಾಗಲು ಒಪ್ಪಿಕೊಂಡಾಗ ಮೃತದೇಹ ಸತ್ವ ಅಪಾರ್ಟ್ಮೆಂಟ್ ಬಳಿ ಬಿಸಾಡಿದೆವು. ಬಳಿಕ ಕಾಮಾಕ್ಷಿಪಾಳ್ಯ ಠಾಣೆಗೆ ಸರೆಂಡರ್ ಆಗಲು ಹೋದರು ಅಂತ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈಗ ತನಗೆ ಪಶ್ಚಾತ್ತಾಪ ಆಗಿದ್ದು ಸಾಕ್ಷಿ ಹೇಳುತ್ತಿದ್ದೇನೆ ಅಂತ ಪ್ರದೋಷ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.

ನೋಡಿರಿ

