ಪ್ರದೀಪ್ ಈಶ್ವರ್ ದ್ವೇಷಕ್ಕೆ ಸೋಲ್ತಾರಾ ಡಾ.ಕೆ ಸುಧಾಕರ್?

 ಪ್ರದೀಪ್ ಈಶ್ವರ್ ದ್ವೇಷಕ್ಕೆ ಸೋಲ್ತಾರಾ ಡಾ.ಕೆ ಸುಧಾಕರ್?

ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್​ನಲ್ಲಿ ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೀತಿದ್ರೆ ಅತ್ತ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಪ್ರತೀ ಕ್ಷೇತ್ರದ ಮುಖಂಡರನ್ನು ಭೇಟಿಯಾಗಿ ಬೆಂಬಲ ಕೋರುತ್ತಿದ್ದಾರೆ. ಬಿಜೆಪಿ ಮಾತ್ರವಲ್ದೇ, ಜೆಡಿಎಸ್‌ ಮುಖಂಡರ ಜತೆಯೂ ಸಮಾಲೋಚನೆ ನಡೆಸುತ್ತಿದ್ದು, ಚುನಾವಣೆಯಲ್ಲಿ ಕೈ ಹಿಡಿಯುವಂತೆ ಮನವಿ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಯಲಹಂಕ, ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವಿನ ತಂತ್ರಗಾರಿಕೆ ನಡೆಸಲಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಸಚಿವರಾಗಿ ಕೆಲಸ ಮಾಡಿದ್ದ ಸುಧಾಕರ್ ಈ ಸಲ ಲೋಕಸಭೆ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದಾರೆ. ಆದ್ರೆ ಸುಧಾಕರ್ ಗೆಲುವು ಅಷ್ಟು ಸುಲಭವಾಗಿಲ್ಲ.

ಇದನ್ನೂ ಓದಿ:ಕಂಗನಾ ಬಗ್ಗೆ ಪೋಸ್ಟ್ ಮಾಡಿದ ಸುಪ್ರಿಯಾ ಯಾರು? – 2012ರಲ್ಲಿ ಮಂಡಿಯಲ್ಲಿ ಮೋದಿ ಏನಂದಿದ್ರು ಗೊತ್ತಾ?

ಸುಧಾಕರ್ ಗೆ ಸಾಲು ಸಾಲು ಸವಾಲು! 

ಲೋಕಸಭಾ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿರೋದ್ರಿಂದ ಟಿಕೆಟ್ ಹಂಚಿಕೆ ವಿಚಾರವಾಗಿ ಮೊದ್ಲಿಂದಲೂ ಅಸಮಾಧಾನ ಇದ್ದೇ ಇದೆ. ಅದ್ರಲ್ಲೂ ಚಿಕ್ಕಬಳ್ಳಾಪುರದ ಬಿಜೆಪಿಯಲ್ಲೇ ಭಿನ್ನಮತ ಸ್ಫೋಟಗೊಂಡಿತ್ತು. ಎಸ್​ಆರ್ ವಿಶ್ವನಾಥ್ ಪುತ್ರನಿಗೆ ಟಿಕೆಟ್ ಮಿಸ್ ಆಗಿದ್ದಕ್ಕೆ ಕೆಲ ಬಿಜೆಪಿಗರು ಸುಧಾಕರ್ ವಿರುದ್ಧ ಸಿಟ್ಟುಕೊಂಡಿದ್ದಾರೆ. ಹೀಗಾಗಿ ಅವ್ರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸವಾಲು ಸುಧಾಕರ್​ಗೆ ಇದೆ. ಹಾಗೇ ಜೆಡಿಎಸ್ ಮತಗಳನ್ನ ಸೆಳೆಯಬೇಕಾದ ಅನಿವಾರ್ಯತೆ ಇದೆ. ಇದೇ ಕಾರಣಕ್ಕೆ ಈಗಾಗ್ಲೇ ಡಾ.ಕೆ. ಸುಧಾಕರ್‌ ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಸಹಕಾರ ಕೋರಿದ್ದಾರೆ. ಅವರು ಕೂಡಾ ಪಕ್ಷದ ಮುಖಂಡರಿಗೆ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಲು ಸೂಚನೆ ನೀಡಿದ್ದಾರೆ. ಆದರೆ ಟಿಕೆಟ್‌ ಪಡೆಯುವ ವಿಷಯದಲ್ಲಿ ಬಿಜೆಪಿಯ ಮುಖಂಡರಲ್ಲೇ ವಾಕ್ಸಮರಗಳು ನಡೆದು ಗೊಂದಲಕ್ಕೆ ಕಾರಣವಾಗಿತ್ತು. ಈಗ ಟಿಕೆಟ್‌ ಘೋಷಣೆಯಾಗಿದೆ. ಎಲ್ಲರೂ ಪಕ್ಷದ ತೀರ್ಮಾನಕ್ಕೆ ಎಂದು ಹೇಳುತ್ತಿದ್ದಾರೆ. ಆದರೆ ಅಸಮಾಧಾನಿತರನ್ನು ಅಧಿಕೃತ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಹೇಗೆ ಮನವೊಲಿಸುತ್ತಾರೆ ಎನ್ನುವುದು ಈಗ ಇರುವ ಸವಾಲು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿಯಲ್ಲಿ ಜೆಡಿಎಸ್‌ ಪಕ್ಷ ಸಿಪಿಎಂ ಅಭ್ಯರ್ಥಿಯನ್ನು ಬೆಂಬಲಿಸಿತ್ತು. ಹೊಸಕೋಟೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಸ್ಪರ್ಧಿಸಿರಲಿಲ್ಲ. ಹೀಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅಷ್ಟೂ ಜೆಡಿಎಸ್‌ ಮತಗಳು ಬಿಜೆಪಿಗೆ ಸಿಕ್ಕರೆ ಮೈತ್ರಿ ಅಭ್ಯರ್ಥಿ ಗೆಲುವಿಗೆ ಪೂರಕವಾಗಲಿದೆ ಎಂಬ ಲೆಕ್ಕಾಚಾರವೂ ಇದೆ. ಕಳೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಆಧರಿಸಿ ಮತಗಣನೆ ಮಾಡಿದರೆ, ಜೆಡಿಎಸ್‌-ಬಿಜೆಪಿ ಮೈತ್ರಿ ಪಕ್ಷದ ಪರ 8 ಕ್ಷೇತ್ರಗಳಿಂದ 7,75,825 ಮತಗಳಿದ್ದರೆ, ಕಾಂಗ್ರೆಸ್‌ಗೆ 6,10,229 ಮತಗಳು ಸಿಕ್ಕಿವೆ. ಹೀಗಾಗಿ 1,65,596 ಮತಗಳ ಅಂತರವಿದೆ. ಆದ್ರೆ ಸುಧಾಕರ್​ಗೆ ಪ್ರದೀಪ್ ಈಶ್ವರ್ ದೊಡ್ಡ ತಲೆನೋವಾಗಿ ಕಾಡ್ತಿದ್ದಾರೆ.

ಸುಧಾಕರ್ ಗೆ ಪ್ರದೀಪ್ ಕಾಟ! 

2023ರ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿ ಎನ್ನುವಂತೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಗೆಲುವು ಸಾಧಿಸಿದ್ದರು. ಅದೂ ಕೂಡ ಅಂದಿನ ಹಾಲಿ ಆರೋಗ್ಯ ಸಚಿವ ಹಾಗೂ ಪ್ರಭಾವಿ ನಾಯಕ ಡಾ.ಕೆ ಸುಧಾಕರ್​ ಅವ್ರೇ ಪ್ರದೀಪ್ ಈಶ್ವರ್ ವಿರುದ್ಧ ಸೋಲು ಅನುಭವಿಸಿದ್ರು. ಪರಿಶ್ರಮ ನೀಟ್ ಅಕಾಡೆಮಿ ನಡೆಸುತ್ತಾ ಸ್ಟೂಡೆಂಟ್ಸ್ ಗೆ ಪಾಠ ಮಾಡ್ತಿದ್ದ ಪ್ರದೀಪ್ ಈಶ್ವರ್ ಬಳಿಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಬಯಾಲಜಿ ಬ್ರಹ್ಮ ಅಂತಾನೇ ಕರೆಸಿಕೊಳ್ಳುತ್ತಿದ್ದ ಪ್ರದೀಪ್ ಕ್ಷೇತ್ರದಲ್ಲಿ ಖಡಕ್ ಭಾಷಣ ಮಾಡಿ ಜನ ಮನ ಗೆದ್ದಿದ್ದರು. ಪ್ರದೀಪ್ ಈಶ್ವರ್ ಶಾಸಕರಾದ ಮೇಲಂತೂ ಸುಧಾಕರ್ ವಿರುದ್ಧ ಬೆಂಕಿ ಉಗುಳುತ್ತಲೇ ಇದ್ದಾರೆ. ಚಾನ್ಸ್ ಸಿಕ್ಕಾಗಲೆಲ್ಲಾ ವಾಗ್ದಾಳಿ ನಡೆಸುತ್ತಿದ್ದಾರೆ. ಅದ್ರಲ್ಲೂ ಸುಧಾಕರ್​ಗೆ ಬಿಜೆಪಿ ಟಿಕೆಟ್ ಘೋಷಣೆಯಾದ ಮೇಲೂ ಪ್ರೆಸ್​ಮೀಟ್ ಮಾಡಿ ಚಾಲೆಂಜ್ ಮಾಡಿದ್ದಾರೆ. ಖುದ್ದು ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದ್ರೂ ಸುಧಾಕರ್​​ರನ್ನ ಗೆಲ್ಲೋಕೆ ಬಿಡಲ್ಲ. ಪಾರ್ಲಿಮೆಂಟ್ ಹತ್ತೀಕೆ ಬಿಡಲ್ಲ ಅಂತಾ ಚಾಲೆಂಜ್ ಮಾಡಿದ್ದಾರೆ.

ಹೀಗೆ ಪ್ರದೀಪ್ ಈಶ್ವರ್ ಎಷ್ಟೇ ವಾಗ್ದಾಳಿ ನಡೆಸಿದ್ರೂ ಸುಧಾಕರ್ ಕೂಲಾಗೇ ತಿರುಗೇಟು ಕೊಡ್ತಿದ್ದಾರೆ. ಈಶ್ವರ್ ವಾಗ್ದಾಳಿಯಿಂದ ವಿಚಲಿತರಾಗದೆ, ತಲೆಕೆಡಿಸಿಕೊಳ್ಳದೆ  ಕ್ಷೇತ್ರದಲ್ಲಿ ಸುತ್ತಾಡಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ವಿಶ್ವಾಸ ಗೆಲ್ಲುವ ಕೆಲಸ ಮಾಡುತ್ತಿದ್ದಾರೆ. ಯೋಗ್ಯರು ಯಾರಾದರೂ ಕಾಮೆಂಟ್ ಮಾಡಿದ್ದರೆ ಪ್ರತಿಕ್ರಿಯೆ ನೀಡುತ್ತೇನೆ, ಒಳ್ಳೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ, ಒಳ್ಳೆಯ ಮಾತಾಡೋಣ ಎಂದು ಪ್ರದೀಪ್ ಈಶ್ವರ್​ರನ್ನ ಪರೋಕ್ಷವಾಗಿ ಅಯೋಗ್ಯ ಎಂದಿದ್ದರು. ಆದರೆ ಸುಧಾಕರ್ ಗೆ ಇರುವ ಪ್ರಮುಖ ಸಮಸ್ಯೆ ಎಂದರೆ ಅವರದ್ದೇ ಪಕ್ಷದ ಕಾರ್ಯಕರ್ತರು. ಹಲವಾರು ಕಡೆ ಕಾರ್ಯಕರ್ತರು ಗೋ ಬ್ಯಾಕ್ ಸುಧಾಕರ್ ಅಭಿಯಾನ ಶುರುಮಾಡಿದ್ದಾರೆ. ಅವರನ್ನು ಸಮಾಧಾನಪಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸುಧಾಕರ್ ಮುಂದಿರುವ ದೊಡ್ಡ ಸವಾಲಾಗಿದೆ. ಹೀಗಾಗಿ ಸಿನಿಮಾದಂತೆ ಡೈಲಾಗ್ ಹೊಡೆಯೋ ಪ್ರದೀಪ್ ಈಶ್ವರ್​ಗೆ ತಿರುಗೇಟು ಕೊಟ್ಟು ಪಕ್ಷದ ಕಾರ್ಯಕರ್ತರನ್ನ ತಮ್ಮ ಜೊತೆ ಕೊಂಡೊತ್ತುವ ಚಾಲೆಂಜ್ ಸುಧಾಕರ್ ಮುಂದಿದೆ. ಹೀಗಾಗಿ ಈ ಎಲ್ಲವನ್ನ ಹೇಗೆ ನಿಭಾಯಿಸ್ತಾರೆ ಅಥವಾ ಕಾಂಗ್ರೆಸ್ ಅಭ್ಯರ್ಥಿ ಮುಂದೆ ಶರಣಾಗ್ತಾರಾ ಅನ್ನೋದನ್ನ ಕಾದು ನೋಡ್ಬೇಕು.

Shwetha M