15 ದಿನಗಳ ಬಳಿಕ ಅಖಾಡಕ್ಕೆ – ಪ್ರತಿಭಟನೆ ಸ್ಥಳದಲ್ಲೇ ಕುಸ್ತಿ ಪಟುಗಳ ಅಭ್ಯಾಸ

15 ದಿನಗಳ ಬಳಿಕ ಅಖಾಡಕ್ಕೆ – ಪ್ರತಿಭಟನೆ ಸ್ಥಳದಲ್ಲೇ ಕುಸ್ತಿ ಪಟುಗಳ ಅಭ್ಯಾಸ

ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತದ ಕುಸ್ತಿಪಟುಗಳು ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲೇ ಕುಸ್ತಿಪಟುಗಳು ಅಭ್ಯಾಸ ನಡೆಸುತ್ತಿದ್ದಾರೆ. ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗಾಗಿ ಜೂನ್‌ನಲ್ಲಿ ಡಬ್ಲ್ಯುಎಫ್ಐ ಆಯ್ಕೆ ಟ್ರಯಲ್ಸ್ ನಡೆಸಲಿದ್ದು, ಇದಕ್ಕಾಗಿ ಕುಸ್ತಿಪಟುಗಳು ಅಭ್ಯಾಸ ಶುರುಮಾಡಿದ್ದಾರೆ.

ಇದನ್ನೂ ಓದಿ:  ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧಿಸಲು ಡೆಡ್‌ಲೈನ್ – ಇಲ್ಲದಿದ್ದರೆ ಮಹತ್ವದ ತೀರ್ಮಾನ ಕೈಗೊಳ್ಳುವುದಾಗಿ ಕುಸ್ತಿಪಟುಗಳ ಎಚ್ಚರಿಕೆ

ಸೋಮವಾರದಿಂದ ಜಂತರ್‌ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಕುಸ್ತಿಪಟುಗಳು ತರಬೇತಿ ನಡೆಸಿದರು. ಭಜರಂಗ್, ವಿನೇಶ್ ಫೋಗಾಟ್ ಜನವರಿಯಿಂದ ಯಾವುದೇ ಅಂತಾರಾಷ್ಟ್ರೀಯ ಕೂಟಗಳಲ್ಲಿ ಪಾಲ್ಗೊಂಡಿಲ್ಲ. ಬ್ರಿಜ್ ಭೂಷಣ್ ಸಿಂಗ್ ಬಂಧಿಸುವವರೆಗೆ ಯಾವುದೇ ಕೂಟ, ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ಆದರೆ ತಮ್ಮ ಪಟ್ಟು ಸಡಿಲಿಸಿದಂತಿರುವ ಕುಸ್ತಿಪಟುಗಳು ಮುಂದಿನ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಡಬ್ಲ್ಯುಎಫ್ಐ ಮೇಲ್ವಿಚಾರಣೆಗೆ ನೇಮಿಸಲಾಗಿರುವ ಸಮಿತಿಯು ಆಯ್ಕೆ ಟ್ರಯಲ್ಸ್‌ಗಳಲ್ಲಿ ಪಾಲ್ಗೊಳ್ಳಲು ಬೇಕಾಗಿರುವ ಮಾನದಂಡಗಳನ್ನು ಬದಲಾಯಿಸುವ ಸಾಧ್ಯತೆ ಇದೆ. ಈ ಮೊದಲು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೂಟ, ಫೆಡರೇಶನ್ ಕಪ್ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಪದಕ ಗೆದ್ದ ಕುಸ್ತಿಪಟುಗಳಿಗೆ ಮಾತ್ರ ಟ್ರಯಲ್ಸ್ನಲ್ಲಿ ಪಾಲ್ಗೊಳ್ಳುವ ಅವಕಾಶವಿತ್ತು. ಆದರೆ ಈ ಬಾರಿ ಆಯಾಯಾ ರಾಜ್ಯ ಸಂಸ್ಥೆಗಳೇ ಕುಸ್ತಿಪಟುಗಳನ್ನು ಆಯ್ಕೆಮಾಡಿ ಟ್ರಯಲ್ಸ್ಗೆ ಕಳುಹಿಸುವ ಅವಕಾಶ ನೀಡಬಹುದು ಎನ್ನಲಾಗುತ್ತಿದೆ.

suddiyaana