ಪಾರ್ಲಿಮೆಂಟ್ ಮೆಟ್ಟಿಲು ಹತ್ತೋಕೆ ಬಿಡಲ್ಲ! – ಸುಧಾಕರ್ ಸೋಲಿಗಾಗಿ ಪ್ರದೀಪ್ ಸವಾಲ್

ಪಾರ್ಲಿಮೆಂಟ್ ಮೆಟ್ಟಿಲು ಹತ್ತೋಕೆ ಬಿಡಲ್ಲ! – ಸುಧಾಕರ್ ಸೋಲಿಗಾಗಿ ಪ್ರದೀಪ್ ಸವಾಲ್

ವಿಧಾನಸಭಾ ಚುನಾವಣೆಯಲ್ಲೇ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ಕರ್ನಾಟಕದ ಚಿಕ್ಕಬಳ್ಳಾಪುರ ಕ್ಷೇತ್ರ ಇದೀಗ ಲೋಕಸಭೆಗೂ ರಣರಂಗವಾಗುವ ಎಲ್ಲಾ ಲಕ್ಷಣಗಳಿವೆ. ವಿಧಾನಸಭೆಯಲ್ಲಿ ಸೋಲು ಕಂಡಿದ್ದ ಮಾಜಿ ಸಚಿವ ಡಾ.ಕೆ ಸುಧಾಕರ್ ಈ ಬಾರಿ ಎಂಪಿ ಎಲೆಕ್ಷನ್​ಗೆ ಧುಮುಕಿದ್ದಾರೆ. ಆದ್ರೆ ಸುಧಾಕರ್​ಗೆ ವಿಧಾನಸಭೆಯಲ್ಲೇ ನೀರು ಕುಡಿಸಿದ್ದ ಪ್ರದೀಪ್ ಈಶ್ವರ್ ಈಗ ಮತ್ತೊಮ್ಮೆ ಸಿಡಿದು ನಿಂತಿದ್ದಾರೆ. ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದ್ರೂ ಸುಧಾಕರ್​ರನ್ನ ಗೆಲ್ಲೋಕೆ ಬಿಡಲ್ಲ ಎಂದು ಚಾಲೆಂಜ್ ಮಾಡಿದ್ದಾರೆ. ಅಷ್ಟಕ್ಕೂ ಸುಧಾಕರ್​ಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದೇಕೆ..? ಅಸಮಾಧಾನಿತ ನಾಯಕರು ಸಾಥ್ ಕೊಡ್ತಾರಾ..? ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸ್ವಪ್ರತಿಷ್ಠೆಯಾಗಿ ತೆಗೆದುಕೊಂಡ್ರಾ? ಈ ಕುರಿತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸಕ್ಕರೆ ನಾಡಿನಿಂದ ಹೆಚ್‌ಡಿಕೆ ಸ್ಪರ್ಧೆ ಫಿಕ್ಸ್? – ಮಂಗಳವಾರ ಮಂಡ್ಯ‌ ಮೈತ್ರಿ ಅಭ್ಯರ್ಥಿ ಘೋಷಣೆ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್​ಗಾಗಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಪುತ್ರ ಅಲೋಕ್ ಮತ್ತು ಡಾ.ಕೆ.ಸುಧಾಕರ್ ಅವರ ನಡುವೆ ಟಿಕೆಟ್‌ಗೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದ್ರೆ ತೀವ್ರ ಪೈಪೋಟಿಯ ನಡುವೆಯೇ ಮಾಜಿ ಸಚಿವ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ. ಇದೇ ಮೊದಲ ಬಾರಿಗೆ ಡಾ.ಕೆ.ಸುಧಾಕರ್ ಲೋಕಸಭಾ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಸೋಲಿನ ನಂತ್ರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗುವರು ಎನ್ನುವ ಚರ್ಚೆ ಜೋರಾಗಿತ್ತು. ಈಗ ಅಧಿಕೃತ ಮುದ್ರೆ ಬಿದ್ದಿದೆ. ಆದ್ರೆ ಚಿಕ್ಕಬಳ್ಳಾಪುರ ಬಿಜೆಪಿ ಟಿಕೆಟ್ ಡಾ.ಕೆ ಸುಧಾಕರ್​ಗೆ ಘೋಷಣೆಯಾಗುತ್ತಿದ್ದಂತೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪ್ರೆಸ್ ಮಾಡಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.

ಸುಧಾಕರ್​ ಗೆ ಈಶ್ವರ್ ಸವಾಲ್! 

ಡಾ.ಕೆ ಸುಧಾಕರ್ ಅವ್ರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಿರುವುದಕ್ಕೆ ಶಾಸಕ ಪ್ರದೀಪ್ ಈಶ್ವರ್ ಆಕ್ರೋಶ ಹೊರಹಾಕಿದ್ದಾರೆ. ಸುಧಾಕರ್​ಗೆ ಟಿಕೆಟ್ ಕೊಟ್ಟಿರೋದು ಪ್ರಜಾಪ್ರಭುತ್ವದ ಅವಸಾನಕ್ಕೆ ಮುನ್ನುಡಿ ಬರೆದಂತಿದೆ. ಕೋವಿಡ್ ಸಮಯದಲ್ಲಿ ಸುಧಾಕರ್ ವಿರುದ್ಧ ಅವರದ್ದೇ ಪಕ್ಷದ ಬಸನಗೌಡ ಪಾಟೀಲ್ ಯತ್ನಾಳ್ 40,000 ಕೋಟಿ ರೂಪಾಯಿ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಅಷ್ಟು ದೊಡ್ಡ ಪ್ರಮಾಣದ ಆರೋಪ ಎದುರಿಸುತ್ತಿದ್ದ ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತನ್ನಂಥ ಒಬ್ಬ ಸಾಮಾನ್ಯ ವ್ಯಕ್ತಿಯ ವಿರುದ್ಧ ಸೋಲು ಅನುಭವಿಸಿದ ವ್ಯಕ್ತಿಗೆ ಟಿಕೆಟ್ ನೀಡಿರುವುದು ಸೋಜಿಗವುಂಟು ಮಾಡಿದೆ. ಟಿಕೆಟ್ ಗಿಟ್ಟಿಸಲು ಸುಧಾಕರ್ ರಾಜ್ಯದ ಕೆಲ ಬಿಜೆಪಿ ನಾಯಕರಿಗೆ ಸೂರ್ಯ ನಮಸ್ಕಾರ, ದೀರ್ಘದಂಡ ನಮಸ್ಕಾರಗಳನ್ನು ಮಾಡಿದ್ದಾರೆ ಎಂದು ಒಗಟಿನಲ್ಲಿ ಮಾತಾಡಿದರು. ರಾಜಕಾರಣದಲ್ಲಿ ಕೊಕ್ಕೆ ಅಥವಾ ವಕ್ರ ಆಗಿರುವ ಡಾ.ಕೆ. ಸುಧಾಕರ್ ಅವರನ್ನು ಪವಿತ್ರವಾದ ಪಾರ್ಲಿಮೆಂಟ್‌ ಮೆಟ್ಟಿಲು ಹತ್ತುವುದಕ್ಕೂ ಕೂಡ ಬಿಡುವುದಿಲ್ಲ. ಬೇಕಿದ್ದರೆ ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದು ನಿಂತುಕೊಳ್ಳಲಿ. ಸುಧಾಕರ್‌ಗೆ ಪಾರ್ಲಿಮೆಂಟ್ ಹೋಗಲು ಬಿಡುವುದಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ. ಹಾಗೇ ನಾನು ನನ್ನ ಎಲ್ಲ ಆದಾಯದ ದಾಖಲೆಗಳನ್ನು ಡಿಕ್ಲೇರ್ ಮಾಡುವುದಕ್ಕೆ ರೆಡಿ. ಸುಧಾಕರ್ ಪ್ರಾಮಾಣಿಕರಾಗಿದ್ರೆ ಅವರ ಆದಾಯದ ಮೂಲ ಬಿಡುಗಡೆ ಮಾಡುವುದಕ್ಕೆ ಸಿದ್ದ ಇದ್ದಾರಾ? ಎಂದು ಪ್ರಶ್ನಿಸಿದ್ದಾರೆ.

2019ರ ಚುನಾವಣೆಯಲ್ಲಿ ಬಿಜೆಪಿಯ ಬಿ.ಎನ್.ಬಚ್ಚೇಗೌಡ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಆ ಮೂಲಕ ಬಿಜೆಪಿಯು ಈ ಕ್ಷೇತ್ರದಲ್ಲಿ ಗೆಲುವಿನ ಖಾತೆ ತೆರೆದಿತ್ತು. ಪ್ರಬಲ ಒಕ್ಕಲಿಗ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು ಮತ್ತು ಈ ಸಮುದಾಯದ ಮತಗಳ ಧ್ರುವೀಕರಣವು ಬಚ್ಚೇಗೌಡ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು. ಇದೀಗ ಮತ್ತೊಮ್ಮೆ ಬಿಜೆಪಿಯು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಒಕ್ಕಲಿಗ ಸಮುದಾಯದ ಡಾ.ಕೆ.ಸುಧಾಕರ್ ಅವರನ್ನು ಕಣಕ್ಕೆ ಇಳಿಸಿದೆ. ಸುಧಾಕರ್ ಹಿನ್ನೆಲೆ ಮತ್ತು ಕ್ಷೇತ್ರದ ಲೆಕ್ಕಾಚಾರವನ್ನ ನೋಡೋದಾದ್ರೆ..

ಸುಧಾಕರ್ ರಾಜಕೀಯ ಹಾದಿ! 

2013 ಮತ್ತು 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸುಧಾಕರ್ ಗೆಲುವು ಸಾಧಿಸಿದ್ದರು. 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರು. ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದ ಅವರು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದರು. ಆದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ವಿರುದ್ಧ ಸೋಲು ಅನುಭವಿಸಿದ್ರು. ಮತ್ತೊಂದೆಡೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ವಿಶೇಷತೆ ಮೆರೆದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು 1967 ರಿಂದ ಇದುವರೆಗೆ 14 ಲೋಕಸಭಾ ಚುನಾವಣೆಗಳನ್ನು ಕಂಡಿದೆ. ಬಹುತೇಕ ಬಾರಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮಣೆ ಹಾಕಿರುವುದು ಈ ಕ್ಷೇತ್ರದ ವಿಶೇಷತೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು ಈಗ ಯಲಹಂಕ, ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ನೆಲಮಂಗಲ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. 2019 ರಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಎನ್. ಬಚ್ಚೇಗೌಡ ಮೋದಿ ಅಲೆಯಲ್ಲಿ ಜಯಶೀಲರರಾದರೂ 5 ವರ್ಷಗಳ ಅವಧಿಯಲ್ಲಿ ಹೇಳಿಕೊಳ್ಳುವಂತೆ ಸಾಧನೆ ಮಾಡಲಿಲ್ಲ ಎಂಬ ಆರೋಪವಿದೆ. ಸರಿಸುಮಾರು 19 ಲಕ್ಷ ಮತದಾರರನ್ನು ಹೊಂದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಪ್ರಸ್ತುತ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ, ಮತ್ತು ಕಾಂಗ್ರೆಸ್ ಅಭ್ಯರ್ಥಿ ನಡುವೆ ನೇರ ಹಣಾಹಣಿ ನಡೆಯಲಿದೆ. ಆದ್ರೀಗ ಬಿಜೆಪಿ ಅಭ್ಯರ್ಥಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೊಮ್ಮೆ ಸಿಡಿದು ನಿಂತಿದ್ದಾರೆ. ಪ್ರದೀಪ್ ಹೇಳಿಕೆಗೆ ತಿರುಗೇಟು ಕೊಟ್ಟಿರೋ ಸುಧಾಕರ್,  ಅಂಥವ್ರ ಹೇಳಿಕೆಗೆ ನಾಣು ಉತ್ತರ ಕೊಡಲ್ಲ ಎಂದಿದ್ದಾರೆ.

Shwetha M