ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟು ಹಬ್ಬದ ದಿನ ಇನ್ನುಮುಂದೆ ಸ್ಪೂರ್ತಿ ದಿನ – ಸಿಎಂ ಸಿದ್ದರಾಮಯ್ಯ ಘೋಷಣೆ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಂದ್ರೆ ಅಭಿಮಾನಿಗಳ ಆರಾಧ್ಯ ದೈವ. ಕೋಟ್ಯಂತರ ಜನರು ತಮ್ಮ ಹೃದಯಾಳದಲ್ಲಿ ನಟನನ್ನು ಇಂದಿಗೂ ಪೂಜಿಸುತ್ತಾರೆ. ಪ್ರೀತಿಯ ಅಪ್ಪು ನಮ್ಮನ್ನ ಅಗಲಿ 2 ವರ್ಷವಾಯ್ತು. ಆದರೂ ಅಪ್ಪು ನೆನಪು ಮಾತ್ರ ಮಾಸಿಲ್ಲ. ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅನೇಕರ ಬಾಳಿಗೆ ಸ್ಪೂರ್ತಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಹುಟ್ಟು ಹಬ್ಬದ ದಿನವನ್ನು ಸ್ಪೂರ್ತಿ ದಿನ ಹೆಸರಿನಲ್ಲಿ ಆಚರಿಸಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಪಿಆರ್ಕೆ ಸ್ಟುಡಿಯೋಸ್ ಹಾಗೂ N3K ಡಿಸೈನ್ ಸ್ಟುಡಿಯೋ ವತಿಯಿಂದ ಪ್ಯಾಲೇಸ್ ರಸ್ತೆಯ ರಾಡಿಸನ್ ಬ್ಲ್ಯೂ – ಏಟ್ರಿಯಾನಲ್ಲಿ ಆಯೋಜಿಸಲಾದ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಸಂಗ್ರಹಣೀಯ ಶಿಲ್ಪಗಳನ್ನು ಅನಾವರಣಗೊಳಿಸಿದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಹುಟ್ಟು ಹಬ್ಬದ ದಿನವನ್ನು ಸ್ಪೂರ್ತಿ ದಿನ ಹೆಸರಿನಲ್ಲಿ ಆಚರಿಸಲಾಗುವುದು ಎಂದು ಹೇಳಿದ್ದಾರೆ. ಈ ಹಿಂದಿನ ಸರಕಾರ ಘೋಷಣೆ ಮಾಡಿತ್ತು. ಆದರೆ, ಚುನಾವಣೆ ಕಾರಣದಿಂದಾಗಿ ಆಚರಿಸಲು ಆಗಿಲ್ಲ. ಆದರೆ, ನಮ್ಮ ಸರಕಾರ ಆ ದಿನವನ್ನು ಸ್ಫೂರ್ತಿ ದಿನ ಎಂದು ಆಚರಿಸಲಾಗುವುದು ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ! – ತಲಕಾವೇರಿಯಲ್ಲಿ ವಿಸ್ಮಯ ಕ್ಷಣ ಕಣ್ತುತುಂಬಿಕೊಳ್ಳಲು ಜನ ಕಾತುರ!
ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ಇಂದು ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಅವರ ಪ್ರತಿಮೆ ಅನಾವರಣ ಮಾಡಿದ್ದೇವೆ. ಈ ಪ್ರತಿಮೆಯನ್ನ N3K ಸ್ಟುಡಿಯೋಸ್- ಪಿಆರ್ಕೆ ಸ್ಟುಡಿಯೋಸ್ ಸಹಯೋಗದಲ್ಲಿ ಮಾಡಿದ್ದಾರೆ. ಕರ್ನಾಟಕ ಕಂಡಂತಹ ಸರಳ, ಸೌಜನ್ಯ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಪುನೀತ್ ಅವರಾಗಿದ್ದರು. ಇಡೀ ಕರ್ನಾಟಕದಲ್ಲಿ ಬಹುಶಃ ಇವರಷ್ಟು ಅಭಿಮಾನಿಗಳನ್ನ ಯಾರೂ ಪಡೆದುಕೊಂಡಿರಲಿಲ್ಲ ಎಂದು ಸಿಎಂ ಮಾತನಾಡಿದ್ದಾರೆ.
ಬಳಿಕ ಮತ್ತೆ ಮಾತು ಮುಂದುವರಿಸಿ, ಪುನೀತ್ ಅಕಾಲಿಕ ಮರಣಕ್ಕೆ ತುತ್ತಾದಾಗ ಪ್ರತಿಯೊಂದು ಕುಟುಂಬ ತಮ್ಮ ಮನೆಯಲ್ಲೇ ಸಾವಾಗಿದೆ ಅನ್ನೋ ತರಹ ನೋವು ಅನುಭವಿಸಿದರು. ಇಂದು ಪ್ರತೀ ಮನೆಯಲ್ಲಿ ಪುನೀತ್ ಅವರ ಭಾವಚಿತ್ರಗಳಿವೆ. ಬಹುಶಃ ನಾವು ಮತ್ತೊಬ್ಬ ಪುನೀತ್ ಅಂತಹ ವ್ಯಕ್ತಿಯನ್ನ ನೋಡೋದು ಕಷ್ಟ ಎಂದಿದ್ದಾರೆ. ನನಗೆ ಡಾ.ರಾಜ್ಕುಮಾರ್ ಅವರ ಜೊತೆ ಉತ್ತಮ ಒಡನಾಟವಿದೆ. ಪುನೀತ್ ಅವರ ಜನಪ್ರಿಯತೆ ರಾಜ್ಕುಮಾರ್ ಅವರನ್ನ ಮೀರಿಸಿದೆ ಎಂದು ಸಿಎಂ ಹಾಡಿಹೊಗಳಿದ್ದಾರೆ.
ಅಪ್ಪು ಪ್ರತಿಮೆಗೆ ಮುತ್ತು ನೀಡಿ ಮಾತು ಶುರು ಮಾಡಿದ ರಾಘಣ್ಣ, ಈ ತಿಂಗಳ 29ಕ್ಕೆ ಅಪ್ಪು ಅಗಲಿ ಎರಡು ವರ್ಷ ಆಗಲಿದೆ. ಇಂದು ಈ ಪ್ರತಿಮೆ ಪ್ರೀತಿಯಿಂದ ತಯಾರಾಗಿದೆ. ಈ ಪ್ರತಿಮೆಯನ್ನು ಕಷ್ಟ ಪಟ್ಟು ಮಾಡಿಲ್ಲ, ಇಷ್ಟ ಪಟ್ಟು ಮಾಡಿದ್ದಾರೆ. ಅಪ್ಪು ಕೈಯಲ್ಲಿ ಯಾವಾಗಲೂ ಗನ್ ಅಥವಾ ಕ್ಯಾಮೆರಾ ಇರುತ್ತಿತ್ತು. ಅಪ್ಪ ಅವನಿಗಾಗಿ ಫಾರಿನ್ನಿಂದ ಕ್ಯಾಮೆರಾ ತರಿಸಿಕೊಟ್ಟಿದ್ದರು ಎಂದು ಹಿಂದಿನ ದಿನಗಳನ್ನ ಮೆಲುಕು ಹಾಕಿದರು. ಅಪ್ಪು ಅಣ್ಣನಾಗಿ ಹುಟ್ಟಿದ್ದು ನನ್ನ ಪುಣ್ಯ ಎಂದಿದ್ದಾರೆ. ಈ ವೇಳೆ, ಪುನೀತ್ ಹುಟ್ಟಿದ ಮಾರ್ಚ್ 17 ದಿನಾಂಕ ಸ್ಫೂರ್ತಿ ದಿನ ಅಂತ ಅನೌನ್ಸ್ ಮಾಡಿ ಮುನ್ನೆಲೆಗೆ ತನ್ನಿ ಎಂದು ಸಿಎಂಗೆ ರಾಘಣ್ಣ ಮನವಿ ಮಾಡಿದ್ದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಿಎಂ ಸಿದ್ದರಾಮಯ್ಯ, ಅಶ್ವಿನಿ ಪುನೀತ್, ರಾಘವೇಂದ್ರ ರಾಜ್ಕುಮಾರ್, ಯುವ, ಧನ್ಯಾ ರಾಮ್ಕುಮಾರ್, ಭೈರತಿ ಸುರೇಶ್ ಕೂಡ ಭಾಗಿಯಾಗಿದ್ದರು.