ಕಾಂಗ್ರೆಸ್ & ಬಿಜೆಪಿ ನಡುವೆ ಚುನಾವಣೋತ್ತರ ಸಮೀಕ್ಷೆ ಸಮರ – ನಮ್ಮದೇ ಸರ್ಕಾರವೆಂದು ಕಿತ್ತಾಟ!

ಮತದಾನ ಮುಗಿದಿದೆ. ಅಭ್ಯರ್ಥಿಗಳ ಭವಿಷ್ಯ ಮತಗಟ್ಟೆಗಳಲ್ಲಿ ಭದ್ರವಾಗಿದೆ. ಚುನಾವಣೋತ್ತರ ಸಮೀಕ್ಷೆಯೂ ಹೊರಬಿದ್ದಿದ್ದು, ಅಸಲಿ ಆಟ ಈಗ ಶುರುವಾಗಿದೆ. 6 ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗೆಲ್ಲಲಿದೆ ಹಾಗೂ 2 ಸಮೀಕ್ಷೆಗಳ ಪ್ರಕಾರ ಬಿಜೆಪಿಗೆ ಬಹುಮತ ಸಿಗಲಿದೆ ಎನ್ನುವ ವಿಚಾರವೇ ರಾಜ್ಯಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತಾ..? ಕಾಂಗ್ರೆಸ್ ಸರ್ಕಾರ ರಚನೆ ಆದ್ರೆ ಯಾರು ಸಿಎಂ ಆಗ್ತಾರೆ..? ಅತಂತ್ರ ಫಲಿತಾಂಶ ಬಂದು ಮತ್ತೆ ಕುಮಾರಣ್ಣ ಕಿಂಗ್ ಮೇಕರ್ ಆಗ್ತಾರಾ ಅನ್ನೋ ಚರ್ಚೆಗಳು ನಡೀತಿವೆ.
ಇದನ್ನೂ ಓದಿ : ‘ಅವನೊಬ್ಬ ಮೋಸಗಾರ.. ಮೊದಲೇ ಗೊತ್ತಿದ್ದರೆ ಟಿಕೆಟ್ ಕೊಡ್ತಿರಲಿಲ್ಲ’ – ಚಾಮುಂಡೇಶ್ವರಿ ಕ್ಷೇತ್ರದ ‘ಕೈ’ ಅಭ್ಯರ್ಥಿ ವಿರುದ್ಧ ಸಿದ್ದು ಕಿಡಿ!
ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶವನ್ನ ಸಿಎಂ ಬಸವರಾಜ ಬೊಮ್ಮಾಯಿ ತಳ್ಳಿ ಹಾಕಿದ್ದಾರೆ. ಕಳೆದ ಬಾರಿ ಮತದಾನೋತ್ತರ ಸಮೀಕ್ಷೆಗಳು ಕಾಂಗ್ರೆಸ್ 107ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದ್ದವು. ಆದ್ರೆ ಫಲಿತಾಂಶದ ಬಳಿಕ ಅದು ಉಲ್ಟಾ ಆಯ್ತು. ನಾನು 150 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಬಹುಮತ ಬರುತ್ತದೆ ಎಂದಿದ್ದೇನೆ. ಆ ಹೇಳಿಕೆಗೆ ಈಗಲೂ ನಾನು ಬದ್ಧ. ಬಿಜೆಪಿಯೇ ಸಂಪೂರ್ಣ ಬಹುಮತ ಪಡೆಯುತ್ತದೆ ಎಂದಿದ್ದಾರೆ.
ಸಮೀಕ್ಷೆಗಳ ಬಗ್ಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಬಿಜೆಪಿಯವ್ರಿಗೆ ಸಮೀಕ್ಷೆಗಳು ಸುಳ್ಳಾಗುತ್ತವೆ ಅನ್ನೋದು ಬಿಟ್ಟು ಬೇರೆ ದಾರಿ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಎಲ್ಲಾ ವರ್ಗದ ಜನ ನಮ್ಮ ಕೈ ಹಿಡಿದಿದ್ದಾರೆ. ನಮಗೆ ಅತಂತ್ರ ಸ್ಥಿತಿ ಬರೋದಿಲ್ಲ. ಸರ್ಕಾರ ರಚನೆ ಬಗ್ಗೆ ಕೌಂಟಿಂಗ್ ದಿನ ತೀರ್ಮಾನ ಮಾಡ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 141 ಸ್ಥಾನಗಳಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಪಕ್ಷನಾಯಕ ಸಿದ್ದರಾಮಯ್ಯ ಕೂಡ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಈ ಹಿಂದೆಯೇ ನಾನು ಹೇಳಿದ್ದೆ. ನಮ್ಮ ಪಕ್ಷಕ್ಕೆ 130 ರಿಂದ 150 ಸೀಟ್ ಬರುತ್ತೆ ಅಂದಿದ್ದೆ. ಅಲ್ಲದೇ ವರುಣಾದಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ. ನಾನು ಜನರ ನಾಡಿಮಿಡಿತ ಅರ್ಥ ಮಾಡಿಕೊಂಡಿರುವುದು ಸರಿಯಾಗಿದೆಂದು ನನಗೆ ಅನಿಸುತ್ತಿದೆ ಎಂದಿದ್ದಾರೆ. ಮಾಜಿ ಡಿಸಿಎಂ ಜಿ.ಪರಮೇಶ್ವರ್ ಕೂಡ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.