ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ – ಮುಷ್ಕರ ಅಂತ್ಯಗೊಳಿಸಿದ ಅಂಗನವಾಡಿ ಕಾರ್ಯಕರ್ತೆಯರು

ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ – ಮುಷ್ಕರ ಅಂತ್ಯಗೊಳಿಸಿದ ಅಂಗನವಾಡಿ ಕಾರ್ಯಕರ್ತೆಯರು

ಬೆಂಗಳೂರು: ನಗರದ ಫ್ರೀಡಂ ಪಾರ್ಕ್ ನಲ್ಲಿ ಕಳೆದ 10 ದಿನಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದರು. ಕಾರ್ಯಕರ್ತೆಯರ ಗ್ರಾಚ್ಯುಟಿ ಸೇರಿ ವಿವಿಧ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕ ಸ್ಪಂದನೆ ನೀಡಿದ ಹಿನ್ನೆಲೆ ಅನಿರ್ಧಿಷ್ಟಾವಧಿ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ.

ಸುಪ್ರೀಂಕೋರ್ಟ್ ಆದೇಶದಂತೆ ಗ್ರಾಚ್ಯುಟಿ ನೀಡಬೇಕು. ಮಕ್ಕಳಿಗೆ ಶೂ, ಸಮವಸ್ತ್ರ ಹಾಗೂ ಮೂಲಸೌಕರ್ಯ ಒದಗಿಸಬೇಕು. ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಪೂರ್ಣ ಆರೋಗ್ಯ ತಪಾಸಣೆ, ಪದೋನ್ನತಿ ಕುರಿತು ಆದೇಶ ವಾಪಸ್ ಸೇರಿ ಬಹುತೇಕ ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಜ.23ರಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಿಂಪಡೆಯಲಾಗಿದೆ ಎಂದು ಅಂಗನವಾಡಿ  ನೌಕರರ ಸಂಘ ಘೋಷಿಸಿದೆ.

ಇದನ್ನೂ ಓದಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ‘ಕ್ಯಾಪ್ಸುಲ್’ ಕೊನೆಗೂ ಪತ್ತೆ – ಹೇಗಿತ್ತು ಗೊತ್ತಾ 6 ದಿನಗಳ ಹುಡುಕಾಟ..!?

ರಾಜ್ಯ ಸರ್ಕಾರದ ಪರವಾಗಿ ಸಚಿವ ಹಾಲಪ್ಪ ಅವರು, ಧರಣಿ ನಿರತ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಂಧಾನ ಸಭೆ ನಡೆಸಿದ್ದು, ಈ ಸಭೆ ಇದೀಗ ಯಶಸ್ವಿಯಾಗಿದೆ. ಈ ಹಿನ್ನೆಲೆ ಅಂಗನವಾಡಿ ಕಾರ್ಯಕರ್ತೆಯರು ಧರಣಿ ವಾಪಸ್ ಪಡೆದಿದ್ದಾರೆ.

ಈ ಬಗ್ಗೆ ಸಚಿವ ಹಾಲಪ್ಪ ಮಾತನಾಡಿದ್ದು, ಅಂಗನವಾಡಿ ಕಾರ್ಯಕರ್ತೆಯರ ಬಹುತೇಕ ಬೇಡಿಕೆ ಈಡೇರಿಸುವುದಕ್ಕೆ ಒಪ್ಪಿಗೆ ಕೊಟ್ಟಿದ್ದೇವೆ. 10 ರಿಂದ 1 ಗಂಟೆವರೆಗೆ ಕಾರ್ಯಕರ್ತರನ್ನು ಇತರೆ ಯಾವುದೇ ಕೆಲಸಕ್ಕೆ ನಿಯೋಜನೆ ಮಾಡೋ ಹಾಗಿಲ್ಲ ಎನ್ನುವ ಬೇಡಿಕೆಗೂ ನಾವು ಒಪ್ಪಿದ್ದೇವೆ. ಸಿಎಂ ಕೂಡ ಗ್ರಾಚ್ಯುಟಿ ನೀಡಲು ಒಪ್ಪಿಗೆ ಕೊಟ್ಟಿದ್ದು, ಎಲ್ಲವನ್ನೂ ಹಂತ ಹಂತವಾಗಿ ಜಾರಿ ಮಾಡುತ್ತೇವೆ. ಪ್ರತಿಭಟನೆ ಕೈ ಬಿಡುವುದಾಗಿ ಕಾರ್ಯಕರ್ತರು ಕೂಡ ಒಪ್ಪಿದ್ದು ಇಂದು ರಾತ್ರಿ ಮತ್ತೆ ಗ್ರಾಚ್ಯುಟಿ ವಿಚಾರವಾಗಿ ಸಭೆ ನಡೆಸಿ ನಿರ್ಧಾರವನ್ನು ಕಾರ್ಯರೂಪಕ್ಕೆ ತರುತ್ತೇವೆ. ಪಿಯುಸಿ ಅರ್ಹತೆ ಇಲ್ಲದೇ ಇರುವ ಕಾರ್ಯಕರ್ತೆಯರಿಗೂ ಒಂದು ಬಾರಿ ಬಡ್ತಿ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ’ ಎಂದು ಸಚಿವ ಹಾಲಪ್ಪ ಹೇಳಿದ್ದಾರೆ.

ಅಂಗನವಾಡಿ ನೌಕರರು ಗ್ರಾಚ್ಯುಟಿ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶದಂತೆ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿತ್ತು. ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆಯಂತೆ ಸಂಘದ ಪದಾಧಿಕಾರಿಗಳು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಅನುಮೋದನೆ ಮೇರೆಗೆ ಹಣಕಾಸು ಇಲಾಖೆ ಗ್ರಾಚ್ಯುಟಿ ನೀಡಲು ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಸರ್ಕಾರ ಶೀಘ್ರದಲ್ಲೇ ಆದೇಶ ಹೊರಡಿಸಲಿದೆ. ಇನ್ನುಳಿದ ಕೆಲ ಬೇಡಿಕೆಗಳ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

suddiyaana