ಮತ್ತಷ್ಟು ಕಳಪೆಯಾದ ರಾಷ್ಟ್ರ ರಾಜಧಾನಿ ವಾಯುಗುಣಮಟ್ಟ – ಕಾದಿದೆಯಾ ಗಂಡಾಂತರ?

ಮತ್ತಷ್ಟು ಕಳಪೆಯಾದ ರಾಷ್ಟ್ರ ರಾಜಧಾನಿ ವಾಯುಗುಣಮಟ್ಟ – ಕಾದಿದೆಯಾ ಗಂಡಾಂತರ?

ದೆಹಲಿ ವಾತಾವರಣ ಸ್ವಚ್ಛವಾಗಲಿ, ವಾಯುಗುಣಮಟ್ಟ ಸುಧಾರಣೆಯಾಗಲಿ ಎಂದು ಕಾಯುತ್ತಿರುವ ಅಲ್ಲಿನ ಜನರಿಗೆ ಮತ್ತೆ ನಿರಾಸೆ ಉಂಟಾಗಿದೆ. ಚಳಿಗಾಲ ಆರಂಭವಾಗುತ್ತಿದ್ದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ ಪ್ರಮಾಣದಲ್ಲಿ ಕುಸಿಯಲು ಆರಂಭಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ವಾಯು ಗುಣಮಟ್ಟ ಸೂಚ್ಯಂಕದಲ್ಲಿ 400 ದಾಖಲಾಗಿದೆ ಎಂದು ವರದಿಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚುತ್ತಿದೆ. ಕೆಲವು ದಿನಗಳಿಂದ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕವು ಅತ್ಯಂತ ಕಳಪೆಯಾಗಿದೆ. ದೆಹಲಿಯಲ್ಲಿನ ಗಾಳಿಯ ಗುಣಮಟ್ಟವು ತೀವ್ರವಾಗಿ ಹದಗೆಟ್ಟಿದೆ ಮತ್ತು AQI (ವಾಯು ಗುಣಮಟ್ಟ ಸೂಚ್ಯಂಕ) 400ಕ್ಕೆ ಕುಸಿದಿದ್ದು, ತಾಪಮಾನದಲ್ಲಿಯು ಏರಿಳಿತಗಳು ಕಂಡು ಬಂದಿದೆ. ಈ ಕಾರಣದಿಂದಾಗಿ, CAQM (ವಾಯು ಗುಣಮಟ್ಟ ನಿರ್ವಹಣೆಗಾಗಿ ಆಯೋಗ) ಮತ್ತೊಮ್ಮೆ GRAP III (ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ) ಅಡಿಯಲ್ಲಿ ನಿರ್ಬಂಧಗಳನ್ನು ಜಾರಿಗೆ ತಂದಿದೆ ಎಂದು ಸಚಿವ ಗೋಪಾಲ್ ರೈ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಟ ಮಟ ಮಧ್ಯಾಹ್ನವೂ ಮೈಕೊರೆಯುವ ಚಳಿ! – ಹಿಂದೆಂದೂ ಕಂಡು ಕೇಳರಿಯದ ಚಳಿಗೆ ತತ್ತರಿಸಿದ ಜನ!

ಈ ಬಗ್ಗೆ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಗೋಪಾಲ ರೈ, ಶೂನ್ಯ ಮತ್ತು 50ರ ನಡುವಿನ ವಾಯು ಗುಣಮಟ್ಟ ಸೂಚ್ಯಂಕವನ್ನು (AQI) ‘ಉತ್ತಮ’, 51 ಮತ್ತು 100 ‘ತೃಪ್ತಿದಾಯಕ’, 101 ಮತ್ತು 200 ‘ಮಧ್ಯಮ’, 201 ಮತ್ತು 300 ‘ಕಳಪೆ’, 301 ಮತ್ತು 400 ‘ಅತ್ಯಂತ ಕಳಪೆ’, 401 ಮತ್ತು 450 ಎಂದು ಪರಿಗಣಿಸಲಾಗುತ್ತದೆ. ಇದೀಗ ತೀವ್ರ’ ಮತ್ತು 450 ಕ್ಕಿಂತ ಹೆಚ್ಚು ವಾಯುಮಾಲಿನ್ಯವನ್ನು ಹೊಂದಿದೆ. ಈ ಕಾರಣಕ್ಕೆ ವಾಯುಮಾಲಿನ್ಯ ಹೊಂದಿರುವ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯ ಮತ್ತು BS-III ಪೆಟ್ರೋಲ್ ಮತ್ತು BS-IV ಡೀಸೆಲ್ ನಾಲ್ಕು ಚಕ್ರಗಳ ವಾಹನಗಳ ಓಡಾಟವನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ಮಂಜು ಮತ್ತು ಗಾಳಿಯ ವೇಗ ಕಡಿಮೆಯಾಗಿರುವ ಕಾರಣ ವಾಯುಮಾಲಿನ್ಯ ಹಠಾತ್ ಏರಿಕೆಗೆ ಕಾರಣವಾಗಿದೆ. ವಾಯುಮಾಲಿನ್ಯ ಮತ್ತು ವಾಯು ಗುಣಮಟ್ಟ ಕಳಪೆ ಇರುವ ಪ್ರದೇಶದಲ್ಲಿ ಕಾನೂನುಬದ್ಧ ಕ್ರಮಗಳನ್ನು ತರಲಾಗುವುದು ಎಂದು CAQM ಹೇಳಿದೆ.

ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಯ ಹಂತ-III ಅಡಿಯಲ್ಲಿ ಹಲವು ನಿರ್ಬಂಧಗಳನ್ನು ತರಲಾಗುವುದು. ದೆಹಲಿ-ಎನ್‌ಸಿಆರ್‌ನಲ್ಲಿ ಅನಿವಾರ್ಯವಲ್ಲದ ನಿರ್ಮಾಣ ಕಾರ್ಯ, ಕಲ್ಲು ಪುಡಿಮಾಡುವಿಕೆ ಮತ್ತು ಗಣಿಗಾರಿಕೆಯನ್ನು ನಿಷೇಧಿಸಲು ಆದೇಶ ನೀಡಲಾಗಿದೆ. GRAP ಹಂತ-III ಅಡಿಯಲ್ಲಿ, ದೆಹಲಿ, ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್ ಮತ್ತು ಗೌತಮ್ ಬುಧ್ ನಗರದಲ್ಲಿ BS-III ಪೆಟ್ರೋಲ್ ಮತ್ತು BS-IV ಡೀಸೆಲ್ ನಾಲ್ಕು-ಚಕ್ರಗಳ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ನಗರವು 9.6 ಡಿಗ್ರಿ ಸೆಲ್ಸಿಯಸ್‌ನ ಕನಿಷ್ಠ ತಾಪಮಾನವನ್ನು ಹೊಂದಿದೆ. ಇದು ಈ ಕಾಲದಲ್ಲಿ ಉಂಟಾಗುವ ತಾಪಮಾನಕ್ಕಿಂತ ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಹಗಲಿನಲ್ಲಿ ಸಾಧಾರಣ ಮಂಜು ಇರುತ್ತದೆ. ಹಾಗೂ ಗರಿಷ್ಠ ತಾಪಮಾನವು ಸುಮಾರು 23 ಡಿಗ್ರಿ ಸೆಲ್ಸಿಯಸ್‌ನಲ್ಲಿರುವ ಸಾಧ್ಯತೆಗಳು ಇದೆ ಎಂದು ಹೇಳಿದೆ.

Shwetha M