ವಿರೂಪಾಕ್ಷಪ್ಪ ಪತ್ತೆಗೆ ಅಧಿಕಾರಿಗಳ ತಲಾಶ್ – ಇಂದು ಅಥವಾ ನಾಳೆ ಆಪ್ತನ ಬಂಧನವಾಗುತ್ತೆಂದ ಬಿಎಸ್ವೈ!
ಕೋಟಿ ಕೋಟಿ ಹಣದ ಸಮೇತ ಲೋಕಾಯುಕ್ತ ಬಲೆಗೆ ಬಿದ್ದು ಮಗ ಜೈಲುಪಾಲಾಗಿದ್ರೆ ಅತ್ತ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಳೆದ 5 ದಿನಗಳಿಂದಲೂ ತಲೆಮರೆಸಿಕೊಂಡಿದ್ದಾರೆ. ಅಜ್ಞಾತಸ್ಥಳದಿಂದಲೇ ನಿರೀಕ್ಷಣಾ ಜಾಮೀನು ಪಡೆಯಲು ವಕೀಲರ ಮೂಲಕ ಹೈಕೋರ್ಟ್ ಕದ ತಟ್ಟಿದ್ದಾರೆ.
ಲಂಚ ಪಡೆಯುವಾಗ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ. ಬಳಿಕ ನಿವಾಸ ಹಾಗೂ ಕಚೇರಿಯಲ್ಲಿ ಪರಿಶೀಲನೆ ವೇಳೆ 8.12 ಕೋಟಿ ಕ್ಯಾಶ್, 1.6 ಕೆಜಿ ಚಿನ್ನಾರಭರಣ ಸಿಕ್ಕಿತ್ತು. ಹೀಗಾಗಿ ಪ್ರಶಾಂತ್ ಸೇರಿದಂತೆ ಐವರನ್ನ ಲೋಕಾಯುಕ್ತ ಪೊಲೀಸರು ಬಂಧಿಸಿದ್ದು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ : ವಿದೇಶಕ್ಕೆ ಹಾರಲು ಮಾಡಾಳ್ ವಿರೂಪಾಕ್ಷಪ್ಪ ಸ್ಕೆಚ್ – ಬಿಜೆಪಿ ಶಾಸಕನ ಬಿಲ ಬಗೆಯಲು ಅಧಿಕಾರಿಗಳ ಮಾಸ್ಟರ್ ಪ್ಲ್ಯಾನ್!
ಮಗ ಅರೆಸ್ಟ್ ಆಗ್ತಿದ್ದಂತೆ ಮಾಡಾಳ್ ವಿರೂಪಾಕ್ಷಪ್ಪ ತಲೆಮರೆಸಿಕೊಂಡಿದ್ದು ನಿರೀಕ್ಷಣಾ ಜಾಮೀನು ಪಡೆಯಲು ಅಜ್ಞಾತಸ್ಥಳದಿಂದಲೇ ಕರಸತ್ತು ನಡೆಸ್ತಿದ್ದಾರೆ. ವಕೀಲರ ಮೂಲಕ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ತುರ್ತು ಪರಿಸ್ಥಿತಿಯ ಆಧಾರದ ಮೇಲೆ ಪ್ರಕರಣದ ವಿಚಾರಣೆ ನಡೆಸುವಂತೆ ಶಾಸಕರ ಪರ ವಕೀಲ ಸಂದೀಪ್ ಮನವಿ ಮಾಡಿದ್ದಾರೆ. ಅರ್ಜಿ ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೆ. ನಟರಾಜನ್ ನೇತೃತ್ವದ ಪೀಠ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಒಂದು ವೇಳೆ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರೆ, ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಅವರ ಬಂಧನ ಖಚಿತವಾಗಲಿದೆ.
ಲೋಕಾಯುಕ್ತ ಟ್ರ್ಯಾಪ್ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಎ1 ಆಗಿದ್ದಾರೆ. ಹೀಗಾಗಿ ಲೋಕಾಯುಕ್ತ ಪೊಲೀಸರು ವಿಶೇಷ ತಂಡ ರಚನೆ ಮಾಡಿಕೊಂಡು ತಲಾಶ್ ನಡೆಸಿದ್ದಾರೆ. ಇನ್ನು ತಮ್ಮ ಆಪ್ತನ ನಾಪತ್ತೆ ಸಂಬಂಧ ಮಾತನಾಡಿರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಇಂದು ಅಥವಾ ನಾಳೆ ವಿರೂಪಾಕ್ಷಪ್ಪ ಬಂಧನವಾಗಬಹುದು ಎಂದಿದ್ದಾರೆ. ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಮಾತನಾಡಿದ ಯಡಿಯೂರಪ್ಪ, ಇಂದು ಅಥವಾ ನಾಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನವಾಗುತ್ತೆ. ಭ್ರಷ್ಟಾಚಾರ ಯಾರೇ ಮಾಡಿದ್ದರೂ ಅದು ಅಕ್ಷಮ್ಯ ಅಪರಾಧ. ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು. ನಮ್ಮ ಪಕ್ಷ ಪ್ರಕರಣ ಮುಚ್ಚಿ ಹಾಕುವ ಕೆಲಸ ಮಾಡಿಲ್ಲ. ವಿರೂಪಾಕ್ಷಪ್ಪರನ್ನು ಬಂಧಿಸಿ ಕ್ರಮಕೈಗೊಳ್ಳಬೇಕು. ಭ್ರಷ್ಟಾಚಾರ ಮಾಡಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.