3 ದಶಕಗಳ ಹಿಂದಿನ ಗಲಭೆಗೆ ಮರುಜೀವ – ರಾಮನ ಹೆಸರಲ್ಲಿ ದ್ವೇಷ ಸಾಧಿಸ್ತಿದ್ಯಾ ಕಾಂಗ್ರೆಸ್?
ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ. ಈ ಮೂಲಕ ರಾಮಮಂದಿರ ಲೋಕಾರ್ಪಣೆಯಾಗಲಿದೆ. ಈ ಮೂಲಕ ಮೂರು ದಶಕಗಳ ಹೋರಾಟದ ಪ್ರತೀಕವಾಗಿ ಕೋಟ್ಯಂತರ ಜನರ ಕನಸು ನನಸಾಗುವ ಸಮಯ ಹತ್ತಿರವಾಗ್ತಿದೆ. ಇದಕ್ಕಾಗಿ ಭರ್ಜರಿ ಸಿದ್ಧತೆಯೂ ನಡೆಯುತ್ತಿದ್ದು ಉತ್ತರ ಪ್ರದೇಶದ ಅಯೋಧ್ಯೆ ಮಧುವಣಗಿತ್ತಿಯಂತೆ ಸಿದ್ಧವಾಗ್ತಿದೆ. ಆದ್ರೆ ಇಂಥಾ ಟೈಮಲ್ಲೇ ಕರ್ನಾಟಕ ಸರ್ಕಾರದ ನಡೆ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. 31 ವರ್ಷಗಳ ಹಳೇ ಪ್ರಕರಣಕ್ಕೆ ಹುಬ್ಬಳ್ಳಿ ಪೊಲೀಸರು ಮರುಜೀವ ನೀಡ್ತಿದ್ದಾರೆ. ಈಗಾಗಲೇ ಒಬ್ಬರನ್ನು ಬಂಧಿಸಿದ್ದು ಇನ್ನೂ ಹಲವರ ಬಂಧನಕ್ಕೆ ತಪಾಸಣೆ ನಡೆಸುತ್ತಿದ್ದಾರೆ. ರಾಮಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗಬೇಕಾಗಿದ್ದವರು ಈಗ ತಲೆಮರೆಸಿಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿ ಬೆಂಗಳೂರು ಮಾತ್ರ ಅಲ್ಲ.. ಈ ನಗರಗಳಿಗೂ ಬರುತ್ತಂತೆ ನಮ್ಮ ಮೆಟ್ರೋ!
ಭಾರತದಲ್ಲಿ 31 ವರ್ಷಗಳ ಹಿಂದೆ ರಾಮಜನ್ಮಭೂಮಿ ಹೋರಾಟದ ಕಾವು ಜೋರಾಗಿತ್ತು. 1990 ರ ದಶಕದಲ್ಲಿ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ರಾಮ ಜನ್ಮಭೂಮಿ ರಥ ಯಾತ್ರೆಯ ಚಳವಳಿ ಪ್ರಾರಂಭಿಸಿದ್ದರು. ಈ ಚಳವಳಿಯು ಕರ್ನಾಟಕದಲ್ಲಿ ದೊಡ್ಡ ಹಿಂಸಾಚಾರಕ್ಕೆ ಸಾಕ್ಷಿಯಾಯಿತ್ತು. ಹುಬ್ಬಳ್ಳಿಯಲ್ಲಿ ಗಲಭೆ ಸಂಭವಿಸಿತ್ತು. ಕರಸೇವೆಗೂ ಮುನ್ನ ಅಂದರೆ 1992ರ ಡಿಸೆಂಬರ್ 5 ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ ನಡೆದಿತ್ತು. ಗಲಭೆಯಲ್ಲಿ ಒಂದು ಮಳಿಗೆಗೆ ಬೆಂಕಿ ಹಚ್ಚಲಾಗಿತ್ತು. ಹುಬ್ಬಳ್ಳಿಯ ಶಹರ ಠಾಣೆಯಲ್ಲಿ 9 ಜನರ ವಿರುದ್ಧ FIR ದಾಖಲಾಗಿತ್ತು. ಇದೀಗ ಇದೇ ಪ್ರಕರಣದಲ್ಲಿ 31 ವರ್ಷಗಳ ಬಳಿಕ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ. ಪ್ರಕರಣದ 3ನೇ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಪ್ರಕರಣ ದಾಖಲಾದಾಗ ಆರೋಪಿಗಳು 30 ರಿಂದ 35 ವರ್ಷದ ಒಳಗಿನ ಯುವಕರಾಗಿದ್ದರು. ಇದೀಗ ಅವರಿಗೆಲ್ಲಾ 60-70 ವರ್ಷ ವಯಸ್ಸು. ಇದು ಬಿಜೆಪಿ ಹಾಗು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಸರ್ಕಾರದ ಈ ಕ್ರಮದ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರ ಸಹಿಸದ ಕಾಂಗ್ರೆಸ್ ಸರ್ಕಾರ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲು ಇಂತಹ ಕ್ರಮಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಆದ್ರೆ ಕಾಂಗ್ರೆಸ್ ನಾಯಕರು ಮಾತ್ರ ಆರೋಪವನ್ನ ತಳ್ಳಿ ಹಾಕಿದ್ದಾರೆ. ರಾಜಕೀಯ ಬಣ್ಣ ಬಳಿಯೋದು ಬೇಡ. ಹಳೆ ಕೇಸ್ ಆಗಿರುವುದರಿಂದ ಕ್ಲೋಸ್ ಮಾಡಬೇಕು ಅಂತಾ ಅದರ ಪ್ರಕ್ರಿಯೆ ನಡೆಯುತ್ತಿದೆ ಅಷ್ಟೇ ಅಂತಿದ್ದಾರೆ. ಈ ಸಂಬಂಧ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಹಿಂದಿನ ಕೇಸ್ ಗಳನ್ನು ವಿಲೇವಾರಿ ಮಾಡಲು ತಿಳಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ತಪ್ಪು ಮಾಡಿದವರನ್ನು ಬಿಟ್ಟು ಬಿಡಬೇಕಾ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಎಷ್ಟೇ ಸಮರ್ಥನೆ ಮಾಡಿಕೊಂಡ್ರೂ ಹಲವಾರು ಪ್ರಶ್ನೆಗಳು ಎದುರಾಗಿವೆ.
ಗಲಾಟೆ ನಡೆದು 30 ವರ್ಷಗಳು ಕಳೆದ್ರೂ ಇಷ್ಟು ವರ್ಷ ಬಂಧಿಸಿಲ್ಲ ಏಕೆ ಎನ್ನುವ ಪ್ರಶ್ನೆ ಮೂಡುವುದು ಸಹಜವೇ. ಆದ್ರೆ ಪೊಲೀಸರು ಮಾತ್ರ ಹಳೆಯ ಕೇಸ್‌ನಲ್ಲಿ ದಾಖಲಾಗಿದ್ದ ಆರೋಪಿಗಳು ತಲೆಮರೆಸಿಕೊಂಡಿದ್ದರು ಎನ್ನುತ್ತಿದ್ದಾರೆ. ಆದ್ರೆ ಪ್ರಕರಣದ ಆರೋಪಿಗಳ ಹೆಸರಲ್ಲಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಪಡಿತರ ಚೀಟಿಗಳಿವೆ. ತಲೆಮರೆಸಿಕೊಂಡಿದ್ದರೆ, ಇವೆಲ್ಲವೂ ಹೇಗೆ ಹೊರಬಂದವು? ಇವರು ಇಷ್ಟು ದಿನ ಎಲ್ಲಿದ್ದರು? ತಮಗೆ ಬೇಕಿದ್ದಾಗ ಹೊರಬಿಡುವ, ಬೇಡವಾದಾಗ ನ್ಯಾಯಾಂಗ ವಶಕ್ಕೆ ನೀಡುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ ಅನ್ನೋದು ಗೊತ್ತಾಗುತ್ತೆ. ಇದೆಲ್ಲಕ್ಕಿಂತ ಹೆಚ್ಚಾಗಿ 2013ರಿಂದ 2018ರವರೆಗೆ ಕಾಂಗ್ರೆಸ್ ಸರ್ಕಾರವೇ ಕರ್ನಾಟಕದಲ್ಲಿತ್ತು. ಆಗಲೂ ಕೂಡ ಯಾರನ್ನೂ ಬಂಧಿಸಿರಲಿಲ್ಲ. ಈಗ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿರುವ ಹೊತ್ತಲ್ಲಿ ಸರ್ಕಾರದ ಈ ನಡೆ ಪ್ರಶ್ನೆ ಮೂಡುವಂತೆ ಮಾಡಿದೆ.
ಇದೇ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನಾಳೆ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ. ರಾಜ್ಯದಲ್ಲಿರೋದು ಹಿಂದೂ ವಿರೋಧಿ ಸರ್ಕಾರ. ಇದು 5 ಅಥವಾ 10 ವರ್ಷದ ಹಳೆಯ ಪ್ರಕರಣ ಇದಲ್ಲ. 31 ವರ್ಷದ ಹಳೆಯ ಪ್ರಕರಣಕ್ಕೆ ಮರು ಜೀವ ಕೊಟ್ಟಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕರೆ ಕೊಟ್ಟಿದ್ದಾರೆ. ಒಟ್ಟಾರೆ ರಾಮಮಂದಿರ ಲೋಕಾರ್ಪಣೆ ವೇಳೆ ಸರ್ಕಾರ ಕೈಗೊಂಡು ಒಂದು ನಿರ್ಧಾರ ರಾಜ್ಯ ರಾಜಕೀಯದಲ್ಲಿ ಸುನಾಮಿ ಎಬ್ಬಿಸಿದೆ. ಬಿಜೆಪಿ ನಾಯಕರು ಪ್ರತಿಭಟನೆಯ ಹಾದಿ ಹಿಡಿದಿದ್ದು ಮುಂದೇನಾಗುತ್ತೋ ಕಾದು ನೋಡ್ಬೇಕು.