ಪೊಲೀಸರಿಗೆ ರಕ್ಷಣೆಯೂ ಇಲ್ಲ, ಲಂಚವಿಲ್ಲದೆ ರಜೆಯೂ ಇಲ್ಲ.. ರಾಜ್ಯ ಸರ್ಕಾರದಲ್ಲಿ ನಡೆಯುವುದು ಕಲೆಕ್ಷನ್ ವ್ಯವಹಾರ ಮಾತ್ರ – ಬಿಜೆಪಿ ಟೀಕೆ

ಪೊಲೀಸರಿಗೆ ರಕ್ಷಣೆಯೂ ಇಲ್ಲ, ಲಂಚವಿಲ್ಲದೆ ರಜೆಯೂ ಇಲ್ಲ.. ರಾಜ್ಯ ಸರ್ಕಾರದಲ್ಲಿ ನಡೆಯುವುದು ಕಲೆಕ್ಷನ್ ವ್ಯವಹಾರ ಮಾತ್ರ – ಬಿಜೆಪಿ ಟೀಕೆ

ಬೆಂಗಳೂರು: ಕಾಂಗ್ರೆಸ್‌, ಬಿಜೆಪಿ ನಡುವಿನ ಟ್ವೀಟ್‌ ಸಮರ ನಿಲ್ಲುವಂತೆ ಕಾಣುತ್ತಿಲ್ಲ. ಪರಸ್ಪರ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಇದೀಗ ರಾಜ್ಯ ಬಿಜೆಪಿ, ಕಾಂಗ್ರೆಸ್ ಸರ್ಕಾರದಲ್ಲಿ ಅನ್‌ಕಂಡೀಷನಲ್ ಆಗಿ ನಿತ್ಯವೂ ನಡೆಯುವುದು ಕಲೆಕ್ಷನ್ ವ್ಯವಹಾರ ಮಾತ್ರ ಎಂದು ರಾಜ್ಯ ಸರ್ಕಾರದ ವಿರುದ್ಧ ಅನ್ನಭಾಗ್ಯ ಯೋಜನೆ ವಿಚಾರವಾಗಿ ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಹತ್ತು ಕೆಜಿ ಅಕ್ಕಿಯ ಗ್ಯಾರಂಟಿ ನೀಡಿ, ಮೋಸದಿಂದ ಅದನ್ನು ಐದು ಕೆಜಿಗೆ ಇಳಿಸಿ, ಅದನ್ನೂ ಕೊಡದೆ ಕೇವಲ ₹170 ಕೊಟ್ಟು ಕೈ ತೊಳೆದುಕೊಳ್ಳುತ್ತೇವೆ ಎಂದ ಸಿದ್ದರಾಮಯ್ಯ ಸರ್ಕಾರ ಅದನ್ನೂ ನೀಡದೆ ಕೈ ಎತ್ತಿದೆ ಎಂದು ಆರೋಪ ಮಾಡಿದೆ.‌

ಇದನ್ನೂ ಓದಿ: ‘ಹನಿಟ್ರ್ಯಾಪ್ ಮಾಡಲೆಂದೇ ಸ್ಟುಡಿಯೋ.. ಸುತ್ತಮುತ್ತ ಬರೀ ಆಂಟಿಗಳೇ ಇರ್ತಾರೆ’ – ಶಾಸಕ ಮುನಿರತ್ನ ವಿರುದ್ಧ ಗಂಭೀರ ಆರೋಪ

ಹಣ ವರ್ಗಾಯಿಸಲೂ ಕಂಡೀಷನ್ಸ್ ಹಾಕುವ ಕಾಂಗ್ರೆಸ್ ಸರ್ಕಾರದಲ್ಲಿ ಅನ್‌ಕಂಡೀಷನಲ್ ಆಗಿ ನಿತ್ಯವೂ ನಡೆಯುವುದು ಕಲೆಕ್ಷನ್ ವ್ಯವಹಾರ ಮಾತ್ರ. ಬಹುಶಃ, 12 ಜಿಲ್ಲೆಯವರ ಕಮಿಷನ್ ಸಂದಾಯ ಬಾಕಿ ಇರುವ ಕಾರಣ ಬಡಜನರ ಖಾತೆಗೆ ಎಟಿಎಂ ಸರ್ಕಾರ ಹಣ ಹಾಕುತ್ತಿಲ್ಲವೇನೋ! ಎಂದು ಬಿಜೆಪಿ ಟ್ವೀಟ್‌ ಮುಖಾಂತರ ಟೀಕಿಸಿದೆ.

ಇನ್ನು ಬಿಜೆಪಿ, ರಜೆ ವಿಚಾರವಾಗಿ, ಕೆಎಸ್ಆರ್‌ಪಿ ಲಂಚಾವತಾರ ವಿಚಾರವಾಗಿ ಸರ್ಕಾರದ ವಿರುದ್ಧ ಕಿಡಿಕಾರಿದೆ. ಬಿಜೆಪಿ ರಾಜ್ಯದಲ್ಲಿ ವರ್ಗಾವಣೆಯನ್ನೇ ದಂಧೆ ಮಾಡಿಕೊಂಡಿರುವ ಎಟಿಎಂ ಸರ್ಕಾರ, ಇದೀಗ ‘ರಜೆಯ’ ವ್ಯಾಪಾರಕ್ಕಿಳಿದಿದೆ. ಮುಖ್ಯಮಂತ್ರಿಗಳ ಕಚೇರಿಯನ್ನು ಆದಾಯ ಮೂಲವನ್ನಾಗಿ ಮಾಡಿಕೊಂಡಿರುವ ಸಿದ್ದರಾಮಯ್ಯರವರ ಸರ್ಕಾರದಲ್ಲಿ ಈಗ ಪೊಲೀಸರು ರಜಾ ಹಾಕಲೂ ಲಂಚ ಕೊಡುವ‌ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸರಿಗೆ ರಕ್ಷಣೆಯೂ ಇಲ್ಲ, ಲಂಚವಿಲ್ಲದೆ ರಜೆಯೂ ಇಲ್ಲ ಎಂದು ಟ್ವೀಟ್ ಮೂಲಕ ಕಿಡಿಕಾರಿದೆ.

ಪ್ರಯಾಣಿಕರ ಬಾಡಿಗೆ ವಾಹನಗಳ ಮೇಲೆ ಒಂದೇ ಬಾರಿ ಜೀವಿತಾವಧಿ ತೆರಿಗೆ ಹೇರಿ ಚಾಲಕರು ಜೀವಿಸುವುದಕ್ಕೇ ಕಷ್ಟವೆಂಬಂತೆ ಮಾಡಲಾಗಿದೆ. ಸರಕು ಸಾಗಾಣಿಕೆ ವಾಹನಗಳ ಮೇಲೆ ದುಪ್ಪಟ್ಟು ತೆರಿಗೆ ವಿಧಿಸುವ ಮೂಲಕ ಇನ್ನಷ್ಟು ಬೆಲೆ ಏರಿಕೆಗೆ ಸಿದ್ದರಾಮಯ್ಯರವರ ಸರ್ಕಾರ ಮುನ್ನುಡಿ ಬರೆದಿದೆ. ಇವೆಲ್ಲದರ ಬಿಸಿ ಜನಜೀವನ ಮಾತ್ರವಲ್ಲ ಪ್ರವಾಸೋದ್ಯಮಕ್ಕೂ‌ ತಾಗಲಿದೆ ಎಂದು ಆಕ್ರೋಶ ಹೊರಹಾಕಿದೆ.

ಬಿಜೆಪಿ ಟ್ವೀಟ್‌ ಗೆ ಕಾಂಗ್ರೆಸ್‌ ತಿರುಗೇಟು ನೀಡಿದೆ.. ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬಲ ಸಿಕ್ಕಿದೆ. ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ಶೀಘ್ರವೇ 4000 ಹೊಸ ಬಸ್ಸುಗಳನ್ನು ಖರೀದಿಸಿ ಸಾರಿಗೆ ಸಂಸ್ಥೆಗಳಿಗೆ ಹೊಸ ಶಕ್ತಿ ನೀಡಲು ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ. ಬಿಜೆಪಿಯ ಖಾಸಗೀಕರಣದ ಹುನ್ನಾರಕ್ಕೆ ಸಾರಿಗೆ ಸಂಸ್ಥೆಗಳು ನಷ್ಟದ ಕೂಪಕ್ಕೆ ಬಿದ್ದಿದ್ದವು. ಈಗ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಮತ್ತೊಮ್ಮೆ ವೈಭವದ ದಿನಗಳನ್ನು ಕಾಣಲಿದೆ ಎಂದು ಟಾಂಗ್ ನೀಡಿದೆ.

suddiyaana