ವ್ಹೀಲಿಂಗ್ ಮಾಡಿದ್ರೆ ಜೈಲು ಸೇರ್ತೀರಾ ಹುಷಾರ್ – ಒಂದೇ ತಿಂಗಳಲ್ಲಿ 398 ಕೇಸ್, 324 ಪುಂಡರು ಅರೆಸ್ಟ್

ಬೆಂಗಳೂರಿನಲ್ಲಿ ವ್ಹೀಲಿಂಗ್ ಹುಚ್ಚಾಟ ಜನರನ್ನ ಆತಂಕಕ್ಕೆ ತಳ್ಳಿದೆ. ಕೊನೆಗೂ ವ್ಹೀಲಿಂಗ್ ಮಾಡುವ ಪುಂಡರ ವಿರುದ್ಧ ಸಮರ ಸಾರಿದ್ದಾರೆ. ವ್ಹೀಲಿಂಗ್ ತಡೆಗಟ್ಟಲು ಬೆಂಗಳೂರು ಸಂಚಾರ ಪೊಲೀಸರು ಕಠಿಣ ಕ್ರಮ ಹಾಗೂ ಕಾರ್ಯಾಚರಣೆ ಆರಂಭಿಸಿದ್ದಾರೆ. ಕೇವಲ ಒಂದು ತಿಂಗಳ ಅವಧಿಯಲ್ಲಿ 300ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ – 10 ದಿನಗಳಲ್ಲಿ 300 ಮಕ್ಕಳು ಸಾವು
ಕೆಲವು ದಿನಗಳ ಹಿಂದಷ್ಟೇ ಕೆಲವು ಮಂದಿ ಪುಂಡರು ಲಾಂಗ್ ಹಿಡಿದುಕೊಂಡು ವ್ಹೀಲಿಂಗ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಅದರ ಬೆನ್ನಲ್ಲೇ, ವ್ಹೀಲಿಂಗ್ ತಡೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಸೂಚನೆ ನೀಡಿದ್ದರು. ಗೃಹ ಸಚಿವರ ಸೂಚನೆ ಬೆನ್ನಲ್ಲೇ ಬೆಂಗಳೂರು ಸಂಚಾರ ಪೊಲೀಸರು ಕಠಿಣ ಕ್ರಮ ಆರಂಭಿಸಿದ್ದಾರೆ. ಒಂದೇ ತಿಂಗಳಲ್ಲಿ 398 ಪ್ರಕರಣಗಳು ದಾಖಲಾಗಿವೆ. 324 ಮಂದಿ ಪುಂಡರನ್ನು ಬಂಧಿಸಲಾಗಿದೆ. 397 ಬೈಕ್ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಅಲ್ಲದೆ, ವ್ಹೀಲಿಂಗ್ ವಿರುದ್ಧದ ಕಾರ್ಯಾಚರಣೆ ಮುಂದುವರಿಸಿದ್ದಾರೆ.
40 ಮಂದಿ ಪುಂಡರ ಚಾಲನಾ ಪರವಾನಗಿ (ಡಿಎಲ್) ತಾತ್ಕಾಲಿಕ ರದ್ದುಗೊಳಿಸಲಾಗಿದೆ. 197 ಆರ್ಸಿ ರದ್ದತಿಗೆ ಪತ್ರ ಬರೆಯಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಅಪ್ರಾಪ್ತರ ಕೈಗೆ ಬೈಕ್ ಕೊಟ್ಟ 62 ಮಂದಿ ಪೋಷಕರ ವಿರುದ್ಧ ಕೇಸ್ ದಾಖಲಿಸಲಾಗಿದೆ. 82 ಮಂದಿ ಅಪ್ರಾಪ್ತರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. ಬಾಲ ನ್ಯಾಯ ಕಾಯ್ದೆ (ಜುವೈನಲ್ ಆ್ಯಕ್ಟ್) ಅಡಿ 32 ಪ್ರಕರಣ ದಾಖಲಿಸಲಾಗಿದೆ. ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ನೀಡುವ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಬೆಂಗಳೂರು ಮಾತ್ರವಲ್ಲದೆ, ರಾಜ್ಯಾದ್ಯಂತ ಜಾರಿಯಲ್ಲಿದೆ.