ಚಾಡಿ ಮಾತು ಕೇಳಿ ಸೊಸೆ ಸಾಯುವಂತೆ ಮಾಡಿದ ಪಾಪಿಗಳು..! – ಐಶ್ವರ್ಯಾ ಸಾವಿಗೆ ಕಾರಣರಾದವರನ್ನು ಬಂಧಿಸಿದ ಪೊಲೀಸರು

ಚಾಡಿ ಮಾತು ಕೇಳಿ ಸೊಸೆ ಸಾಯುವಂತೆ ಮಾಡಿದ ಪಾಪಿಗಳು..! – ಐಶ್ವರ್ಯಾ ಸಾವಿಗೆ ಕಾರಣರಾದವರನ್ನು ಬಂಧಿಸಿದ ಪೊಲೀಸರು

ಆಕೆ ನೋಡಲು ಸೌಂದರ್ಯವತಿ. ಜೊತೆಗೆ ವಿದ್ಯಾವಂತೆ. ಯುಎಸ್ಎ ನಲ್ಲಿ ಎಂಬಿಎ ಮಾಡಿದ್ದ ಪ್ರತಿಭಾವಂತೆ. ಒಳ್ಳೆಯ ಕೆಲಸ, ಕೈತುಂಬಾ ಸಂಬಳ. ಮದುವೆಯಾದ ಮೇಲೂ ಗಂಡನ ಜೊತೆ ಅನ್ಯೋನ್ಯವಾಗಿದ್ದಳು. ಆದರೆ, ಗಂಡನ ಮನೆಯವರು ಯಾರದೋ ಚಾಡಿ ಮಾತು ಕೇಳಿ ಸೊಸೆಗೆ ಕೊಟ್ಟ ಕಾಟ ಒಂದೆರೆಡಲ್ಲ. ಗಂಡನಿಗೋಸ್ಕರ ಎಲ್ಲಾ ಸಹಿಸಿಕೊಂಡಿದ್ದರೂ ನಂತರ ಗಂಡನೂ ಟಾರ್ಚರ್ ಕೊಡಲು ಶುರುಮಾಡಿದ್ದ. ಕೊನೆಗೆ ಬೇರೆ ದಾರಿ ಕಾಣದೇ ಆ ಅಮೂಲ್ಯ ಜೀವ ಶರಣಾಗಿದ್ದು ನೇಣಿಗೆ. ಕೊನೆಗೂ ಪೊಲೀಸರು ಈ ಪ್ರಕರಣದಲ್ಲಿ ಐವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಬಾ.. ಔಟಿಂಗ್‌ ಹೋಗೋಣ ಅಂದ್ದಿದ್ದಕ್ಕೆ ಒಲ್ಲೆ ಎಂದ ಪ್ರೇಯಸಿ.. – ಸಿಟ್ಟಿಗೆದ್ದ ಪಾಗಲ್‌ ಪ್ರೇಮಿ ಮಾಡಿದ್ದೇನು ಗೊತ್ತಾ?

ಅಕ್ಟೋಬರ್ 26ರಂದು ಐಶ್ವರ್ಯಾ ಎಂಬಾಕೆ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಈ ಸಂಬಂಧ ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ, ಮೃತಳ ಪತಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಐಶ್ವರ್ಯಾ ಸತ್ತು ವಾರದ ಬಳಿಕ ಪ್ರಕರಣದ ಹಿಂದಿನ ಅಸಲಿಯತ್ತನ್ನು ಪೊಲೀಸರೇ ಹೊರಗೆಳೆದಿದ್ದಾರೆ. ಹೀಗಾಗಿ ಐಶ್ವರ್ಯ ಪತಿ ರಾಜೇಶ್, ಮಾವ ಗಿರಿಯಪ್ಪ, ಅತ್ತೆ ಸೀತಾ, ಮೈದುನ ವಿಜಯ್, ಮೈದುನನ ಪತ್ನಿ ತಸ್ಮಿನ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕಳೆದ 5 ವರ್ಷಗಳ ಹಿಂದೆ ರಾಜೇಶ್ ಎಂಬಾತನನ್ನ ಐಶ್ವರ್ಯ ಮದುವೆಯಾಗಿದ್ದಳು. ಕುಟುಂಬಸ್ಥರ ನಿಶ್ಚಯದಂತೆ ಇವರಿಬ್ಬರ ಮದುವೆಯಾಗಿತ್ತು. ಐಶ್ವರ್ಯ ಯುಎಸ್ಎ ನಲ್ಲಿ ಎಂಬಿಎ ಮಾಡಿದ್ದ ಪ್ರತಿಭಾವಂತೆಯಾಗಿದ್ದಳು. ಪತಿ ರಾಜೇಶ್, ಪ್ರತಿಷ್ಠಿತ ಐಸ್ ಕ್ರೀಮ್ ಕಂಪನಿ ಮಾಲೀಕರು. ಇದೇ ಕಂಪನಿಯಲ್ಲಿ ಐಶ್ವರ್ಯ ತಂದೆ ಸುಬ್ರಮಣಿಯ ತಂಗಿ ಗಂಡ ರವೀಂದ್ರ ಆಡಿಟರ್ ಆಗಿ ಕೆಲಸ ಮಾಡಿಕೊಂಡಿದ್ದ. ಈತನೇ ಮುಂದೆ ನಿಂತು ರಾಜೇಶ್ ಹಾಗೂ ಐಶ್ವರ್ಯ ಮದುವೆ ಮಾಡಿಸಿದ್ದ. ಆದರೆ ಆಸ್ತಿ ವಿಚಾರವಾಗಿ ರವೀಂದ್ರ ಮತ್ತು ಸುಬ್ರಮಣಿ ಕುಟುಂಬದಲ್ಲಿ ಕಲಹ ಇದ್ದಿದ್ದರಿಂದ ತಂದೆ ಮೇಲಿನ ದ್ವೇಷಕ್ಕೆ ಮಗಳ ಸಂಸಾರದಲ್ಲಿ ದಾಯಾದಿಗಳು ಹುಳಿ ಹಿಂಡಿದ್ದಾರೆ. ರವೀಂದ್ರ ಕುಟುಂಬ ಐಶ್ಯರ್ಯ ಚಾರಿತ್ರ್ಯ ವಧೆ ಮಾಡಿ ಪತಿ ರಾಜೇಶ್ ಕುಟುಂಬಕ್ಕೆ ಇಲ್ಲಸಲ್ಲದ ಕಟ್ಟುಕಥೆ ಹೇಳುತ್ತಿತ್ತು. ಅಷ್ಟೇ ಅಲ್ಲದೇ ಐಶ್ವರ್ಯಳ ಪೋಟೋಗಳನ್ನ ಕಳುಹಿಸಿ ನಿಮ್ಮ ಸೊಸೆ ಸರಿಯಿಲ್ಲ ಎಂದು ಕೆಟ್ಟದಾಗಿ ಬಿಂಬಿಸಿದ್ದರಂತೆ. ಇದರಿಂದಾಗಿ ರಾಜೇಶ್ ಕುಟುಂಬದ ಸದಸ್ಯರು ಪ್ರತಿನಿತ್ಯ ಐಶ್ವರ್ಯಳಿಗೆ ಕಿರುಕುಳ ನೀಡುತ್ತಿದ್ದರಂತೆ. ಐಶ್ವರ್ಯ ಮಾವ ಗಿರಿಯಪ್ಪ, ಅತ್ತೆ ಸೀತ ಹಾಗೂ ಮೈದುನ ವಿಜಯ್ ಹಾಗೂ ಆತನ ಪತ್ನಿ ತಸ್ಮಿನ್ ಕಿರುಕುಳ ನೀಡುತ್ತಿದ್ದರಂತೆ. ವರದಕ್ಷಿಣೆ ತರುವಂತೆಯೂ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಎಷ್ಟೇ ಕಿರುಕುಳ ನೀಡುತ್ತಿದ್ದರೂ ಗಂಡನಿಗಾಗಿ ಐಶ್ವರ್ಯ ಸುಮ್ಮನಿದ್ದಳು. ತಾನು ದುಡಿದ ಹಣದಲ್ಲಿ ಗಂಡನಿಗೆ ಐಷಾರಾಮಿ ಸೂಪರ್ ಬೈಕ್ ಹಾಗೂ ಚಿನ್ನದ ಒಡವೆ ಸಹ ಕೊಡಿಸಿದ್ದಳಂತೆ. ಆದರೆ ಕುಟುಂಬಸ್ಥರ ಮಾತನ್ನ ಕೇಳಿ ಪತಿ ರಾಜೇಶ್ ಕೂಡ ಐಶ್ವರ್ಯಳನ್ನು ನಿಂದಿಸುತ್ತಿದ್ದನಂತೆ. ಇದರಿಂದ ಮನನೊಂದ ಐಶ್ವರ್ಯ, 20 ದಿನಗಳ ಹಿಂದೆ ತವರು ಸೇರಿದ್ದಳು. ಅಲ್ಲದೆ, ಅ. 26 ರಂದು ಮನನೊಂದು ಮರಣಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಳು. ಘಟನೆ ಸಂಬಂಧ ಐಶ್ವರ್ಯಾಳ ತಾಯಿ, ರಾಜೇಶ್ ಮತ್ತು ಅವರ ಕುಟುಂಬಸ್ಥರ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜೊತೆಗೆ, ಸಂಸಾರ ಒಡೆಯಲು ಹುಳಿ ಹಿಂಡಿದ ರವೀಂದ್ರ, ಗೀತಾ, ಶಾಲಿನಿ, ಓಂಪ್ರಕಾಶ್ ಎಂಬುವವರ ಮೇಲೂ ದೂರು ದಾಖಲಿಸಿದ್ದರು.

ವಿಪರ್ಯಾಸವೆಂದರೆ, ಯಾರದೋ ಮಾತು ಕೇಳಿ ಒಂದು ಅಮೂಲ್ಯ ಜೀವವನ್ನು ಬಲಿ ಪಡೆದ ಪಾಪಿಗಳು ಗೋವಾ ಹಾಗೂ ಮುಂಬೈನಲ್ಲಿ ಪಾರ್ಟಿ ಮಾಡುತ್ತಿದ್ದರು.

Sulekha