ಇ-ಮೇಲ್ ಮೂಲಕ ಬಂದಿದ್ದ ಜಾಮೀನು ಪಿಡಿಎಫ್ ಓಪನ್‌ ಮಾಡಲು ಪೊಲೀಸರು ವಿಫಲ! – 3 ವರ್ಷ ಜೈಲಿನಲ್ಲೇ ಉಳಿದ ವ್ಯಕ್ತಿ!

ಇ-ಮೇಲ್ ಮೂಲಕ ಬಂದಿದ್ದ ಜಾಮೀನು ಪಿಡಿಎಫ್ ಓಪನ್‌ ಮಾಡಲು ಪೊಲೀಸರು ವಿಫಲ! – 3 ವರ್ಷ ಜೈಲಿನಲ್ಲೇ ಉಳಿದ ವ್ಯಕ್ತಿ!

ಯಾವುದಾದರೂ ಅಪರಾಧಗಳ ಮೂಲಕ ಜೈಲು ಸೇರಿದ್ದರೆ ಜಾಮೀನು ಪಡೆದು ಹೊರಬರುತ್ತಾರೆ. ಜಾಮೀನು ಸಿಗದೇ ಇದ್ದರೆ ನ್ಯಾಯಾಲಯ ಶಿಕ್ಷೆ ವಿಧಿಸಿರುವಷ್ಟು ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ತನ್ನ ಕೇಸ್‌ನಲ್ಲಿ ಜಾಮೀನು ಸಿಕ್ಕಿದೆ. ಆತನ ಗ್ರಹಚಾರವೋ ಏನೋ.. ಜಾಮೀನು ಸಿಕ್ಕಿದ್ದರೂ ಆತ ಮೂರು ವರ್ಷಗಳ ಕಾಲ ಜೈಲಿನಲ್ಲೇ ಉಳಿಯುವಂತೆ ಆಗಿದೆ.

ಏನಿದು ಪ್ರಕರಣ?

ಅಪರಾಧಿಯಾಗಿದ್ದ ವ್ಯಕ್ತಿಯೊಬ್ಬ ತನ್ನ ಕೇಸ್‌ನಲ್ಲಿ 2020ರಲ್ಲಿಯೇ ಗುಜರಾತ್‌ ಹೈಕೋರ್ಟ್‌ನಲ್ಲಿ ಜಾಮೀನು ಪಡೆದುಕೊಂಡಿದ್ದ. ಆತನಿಗೆ ಜಾಮೀನು ಸಿಕ್ಕಿರುವ ವಿಚಾರ ಹೈಕೋರ್ಟ್‌ ರಿಜಿಸ್ಟ್ರೀಯಿಂದ ಜೈಲಿನ ಇಮೇಲ್‌ಗೂ ರವಾನೆಯಾಗಿತ್ತು. ಆದರೆ, ಜೈಲಿನ ಅಧಿಕಾರಿಗಳು ಈ ಜಾಮೀನಿನ ಆರ್ಡರ್‌ನ ಪಿಡಿಎಫ್‌ ಕಾಪಿಯನ್ನು ಓಪನ್‌ ಮಾಡಲು ಸಾಧ್ಯವಾಗಿರಲಿಲ್ಲ. ಎಷ್ಟು ಬಾರಿ ಪ್ರಯತ್ನಪಟ್ಟರೂ ಅದರಲ್ಲಿ ವಿಫಲವಾಗಿದ್ದರು. ದಿನಗಳು ಕಳೆಯುತ್ತಾ ಹೋದವು. ಬರೋಬ್ಬರಿ ಮೂರು ವರ್ಷಗಳು ಕಳೆದ ಬಳಿಕ ತನ್ನ ಜಾಮೀನಿಗಾಗಿ ಅಪರಾಧಿ ಮತ್ತೆ ಕೋರ್ಟ್‌ನ ಮೊರೆ ಹೋಗಿದ್ದ, ಆಗ ಈ ಪ್ರಕರಣ ಮತ್ತೆ ಕೋರ್ಟ್‌ನ ಗಮನಕ್ಕೆ ಬಂದಿದೆ. ಈ ವೇಳೆ ಅಧಿಕಾರಿಗಳು ತಮ್ಮ ಉತ್ತರವನ್ನು ನೀಡಿದ್ದಾರೆ. ಜೈಲಿನ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಛೀಮಾರಿ ಹಾಕಿದ ಕೋರ್ಟ್‌, ಅಪರಾಧಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಸೂಚನೆ ನೀಡಿದೆ. ನ್ಯಾಯಮೂರ್ತಿ ಎಎಸ್ ಸುಪೇಹಿಯಾ ಮತ್ತು ನ್ಯಾಯಮೂರ್ತಿ ಎಂಆರ್ ಮೆಂಗ್ಡೆ ಅವರ ವಿಭಾಗೀಯ ಪೀಠವು 27 ವರ್ಷದ ಅಪರಾಧಿ ಚಂದನ್‌ಜಿ ಠಾಕೋರ್‌ನಿಂದ ಹೊಸ ಅರ್ಜಿಯನ್ನು ಸಲ್ಲಿಸಿದ ನಂತರ ಅಪರಾಧಿಗೆ ಪರಿಹಾರವನ್ನು ನೀಡುವಂತೆ ಆದೇಶ ನೀಡಿದೆ.

ಇದನ್ನೂ ಓದಿ: ಕೇರಳದ ಲಾಟರಿ ಗೆದ್ದ ಮೇಸ್ತ್ರಿ – ಉಪ್ಪಿನಂಗಡಿ ನಿವಾಸಿಗೆ ಒಲಿಯಿತು ಅದೃಷ್ಟ!

ಪೊಲೀಸರಿಗೆ ಇಮೇಲ್ ಬಂದಿದ್ದರೂ ಓಪನ್‌ ಆಗಿಲ್ಲ!

“ಈ ಪ್ರಕರಣದಲ್ಲಿ, ನ್ಯಾಯಾಲಯವು ಅರ್ಜಿದಾರರನ್ನು ಸಾಮಾನ್ಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ ಆದೇಶದ ಬಗ್ಗೆ ಈ ನ್ಯಾಯಾಲಯದ ರಿಜಿಸ್ಟ್ರಿಯಿಂದ ಜೈಲು ಅಧಿಕಾರಿಗಳಿಗೆ ಸ್ಪಷ್ಟವಾಗಿ ಮಾಹಿತಿ ನೀಡಿತ್ತು. ಆದರೆ, ತಮಗೆ ಇ-ಮೇಲ್ ಬಂದಿಲ್ಲ. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಇ-ಮೇಲ್ ಸ್ವೀಕರಿಸಿದ್ದರೂ, ಲಗತ್ತನ್ನು ತೆರೆಯಲು ಅವರಿಗೆ ಸಾಧ್ಯವಾಗಲಿಲ್ಲ ಎಂಬುದು ಜೈಲು ಅಧಿಕಾರಿಗಳ ವಾದವಾಗಿದೆ, ”ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಈ ಘಟನೆಗೆ ಜೈಲು ಅಧಿಕಾರಿಗಳೇ ನೇರ ಹೊಣೆ!

ಈ ಪರಿಸ್ಥಿತಿಗೆ ಜೈಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದು, ‘ಗಂಭೀರ ಲೋಪ’ಕ್ಕೆ 14 ದಿನಗಳ ಅವಧಿಯಲ್ಲಿ ₹1 ಲಕ್ಷ ಪರಿಹಾರ ನೀಡುವಂತೆ ರಾಜ್ಯಕ್ಕೆ ಸೂಚಿಸಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಜಾಮೀನು ಪಡೆದಿರುವ ಆದರೆ ಇನ್ನೂ ಬಿಡುಗಡೆಯಾಗದಿರುವ ಎಲ್ಲ ಕೈದಿಗಳ ಡೇಟಾವನ್ನು ಸಂಗ್ರಹಿಸಲು ಎಲ್ಲಾ ಡಿಎಲ್‌ಎಸ್‌ಎಗಳಿಗೆ ನ್ಯಾಯಾಲಯ ಸೂಚಿಸಿದೆ ಎಂದು ವರದಿಯಾಗಿದೆ.

Shwetha M