ಕಿಡ್ನ್ಯಾಪ್‌ ಆಗಿದ್ದ ಬಾಲಕನನ್ನು ಕೇವಲ 90 ನಿಮಿಷಗಳಲ್ಲಿ ಪತ್ತೆಹಚ್ಚಿದ  ಪೊಲೀಸ್‌ ಶ್ವಾನ!

ಕಿಡ್ನ್ಯಾಪ್‌ ಆಗಿದ್ದ ಬಾಲಕನನ್ನು ಕೇವಲ 90 ನಿಮಿಷಗಳಲ್ಲಿ ಪತ್ತೆಹಚ್ಚಿದ  ಪೊಲೀಸ್‌ ಶ್ವಾನ!

ಮಕ್ಕಳು ಮನೆ ಮುಂದೆ ಆಟವಾಡುತ್ತಿದ್ದಾಗ ಅವರನ್ನು ಅಪಹರಣ ಮಾಡುವುದು, ಕಳ್ಳತನ ಮಾಡುತ್ತಿರುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಇದೀಗ ಮುಂಬೈನಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಅಪಹರಣವಾಗಿತ್ತು. ಪೊಲೀಸ್ ಶ್ವಾನವೊಂದು ಕೇವಲ 90 ನಿಮಿಷದಲ್ಲಿ ಬಾಲಕನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

ಹೌದು, ಅಶೋಕ್ ನಗರದ ಸ್ಲಮ್ ನಲ್ಲಿ ಈ ಘಟನೆ ನಡೆದಿದೆ. ಬಾಲಕ ಮನೆ ಮುಂದೆ ಆಟವಾಡುತ್ತಿದ್ದಾಗ ವ್ಯಕ್ತಿಯೊಬ್ಬ 6 ವರ್ಷದ ಬಾಲಕನನ್ನು ಅಪಹರಣ ಮಾಡಿದ್ದಾನೆ. ಕೂಡಲೇ ಬಾಲಕನ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಘಟನೆಯ ವಿವರವನ್ನು ಬಾಲಕನ ಮನೆಯವರಿಂದ ಪಡೆದಿದ್ದಾರೆ. ಮನೆಯಿಂದ ಹೊರಗೆ ಕಾಲಿಡುವ ಮುನ್ನ ಬಾಲಕ ಬಟ್ಟೆ ಬದಲಿಸಿದ್ದ ಎಂದು ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಮಕ್ಕಳ ಮಾರಾಟದ ಹಿಂದಿರುವ ಮಹಾಲಕ್ಷ್ಮಿಯ ಕಥೆಯೇ ರೋಚಕ – ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದವಳು ನಂತರ ಆಗಿದ್ದು ಕೋಟ್ಯಾಧಿಪತಿ…!

ಕೂಡಲೇ ಪೊಲೀಸರು ಶ್ವಾನದಳವನ್ನು ಸ್ಥಳಕ್ಕೆ ಕರೆಸಿದ್ದಾರೆ. ಅಧಿಕಾರಿಗಳು ಲಿಯೋ ಎಂಬ ಶ್ವಾನವನ್ನು ಕರೆತಂದು ಕಾರ್ಯಾಚರಣೆ ಆರಂಭಿಸಿದ್ದಾರೆ. ಕೇವಲ 90 ನಿಮಿಷಗಳಲ್ಲಿ ಲಿಯೋ ಶ್ವಾನ ಪೊಲೀಸ್ ತಂಡವನ್ನು ಹುಡುಗನ ಬಳಿಗೆ ಕರೆದೊಯ್ದಿದೆ. ಅಪಹರಣಕ್ಕೆ ಒಳಗಾಗಿದ್ದ ಬಾಲಕನನ್ನು ಆತನ ಮನೆಯಿಂದ 500 ಮೀಟರ್ ದೂರವಿದ್ದ ಅಶೋಕ್ ನಗರದ ಸ್ಲಮ್ ನಲ್ಲಿ ಪತ್ತೆ ಮಾಡಿದೆ.

ಲಿಯೋ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳುತ್ತಿದ್ದಂತೆಯೇ ಅಪರಿಚಿತ ಅಪಹರಣಕಾರರು ಭಯಭೀತರಾಗಿ ಬಾಲಕನನ್ನು ಬಿಟ್ಟು ಓಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಬಾಲಕನನ್ನು ಅಪಹರಿಸಲು ಕಾರಣವೇನು ಅಂತಾ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Shwetha M