ಚೀನಾವನ್ನು ಕಾಡ್ತಿದೆ ನಿಗೂಢ ನ್ಯುಮೋನಿಯಾ ಮಾದರಿ ವೈರಸ್ – ಶಾಲಾ ಮಕ್ಕಳೇ ಟಾರ್ಗೆಟ್!

ಚೀನಾವನ್ನು ಕಾಡ್ತಿದೆ ನಿಗೂಢ ನ್ಯುಮೋನಿಯಾ ಮಾದರಿ ವೈರಸ್ – ಶಾಲಾ ಮಕ್ಕಳೇ ಟಾರ್ಗೆಟ್!

ಜಗತ್ತಿಗೆ ಕೊರೊನಾ ಸೋಂಕು ಹಬ್ಬಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಚೀನಾದಲ್ಲಿ ಈಗ ಹೊಸ ಸಾಂಕ್ರಾಮಿಕ ರೋಗ ಸುನಾಮಿ ಎಬ್ಬಿಸಿದೆ. ಕೊರೊನಾದಿಂದ ಇನ್ನೂ ಚೇತರಿಸಿಕೊಳ್ಳದ ಚೀನಾದಲ್ಲಿ ಮತ್ತೆ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ನಿಗೂಢ ನ್ಯುಮೋನಿಯಾ ಮಾದರಿ ಸೋಂಕು ಚೀನಾ ಶಾಲೆಗಳಿಗೆ ವಕ್ಕರಿಸಿದ್ದು ಮಕ್ಕಳು ವಿಲವಿಲ ಒದ್ದಾಡುತ್ತಿದ್ದಾರೆ. ಉಸಿರಾಟದ ಸಮಸ್ಯೆ ಹೆಚ್ಚಆಗುತ್ತಿದ್ದು ಆಸ್ಪತ್ರೆಗಳಲ್ಲಿ ಸೋಂಕಿತರು ತುಂಬಿ ತುಳುಕುತ್ತಿದ್ದಾರೆ. ಪ್ರತಿನಿತ್ಯ ಅಂದಾಜು 7 ಸಾವಿರ ಮಕ್ಕಳಲ್ಲಿ ಸೋಂಕು ಪತ್ತೆಯಾಗುತ್ತಿದೆ. ಪುಟ್ಟ ಪುಟ್ಟ ಮಕ್ಕಳ ದೇಹ ಹೊಕ್ಕುತ್ತಿರುವ ಈ ವೈರಸ್ ಜಗತ್ತಿನೆಲ್ಲೆಡೆ ಮತ್ತೆ ಆತಂಕ ಮೂಡಿಸಿದೆ.

ಇದನ್ನೂ ಓದಿ : ಮದುವೆಗೆ ನಾಲ್ಕು ದಿನವಿರುವಾಗಲೇ ವರನಿಗೆ ಡೆಂಘೀ ಜ್ವರ – ಆಸ್ಪತ್ರೆಯಲ್ಲೇ ಮದುವೆಯಾದ ಜೋಡಿ!

ಕೊರೊನಾ ಸೋಂಕು ಜನ್ಮ ತಾಳಿದ್ದ ಚೀನಾ ನೆಲದಲ್ಲೇ ಮತ್ತೊಂದು ಭಯಾನಕ ವೈರಸ್ ಹುಟ್ಟಿಕೊಂಡಿದೆ. 2019ರ ಡಿಸೆಂಬರ್ ತಿಂಗಳು. ಅಂದ್ರೆ ಸರಿಯಾಗಿ 4 ವರ್ಷಗಳ ಹಿಂದೆ ಚೀನಾದಲ್ಲಿ ಕೊವಿಡ್ ಅನ್ನೋ ಮಹಾಮಾರಿ ಜನ್ಮ ತಾಳಿತ್ತು. ಇದೀಗ ಅದೇ ರೀತಿಯ ನಿಗೂಢ ಸೋಂಕು ಚೀನಾ ದೇಶವನ್ನ ಕಾಡುತ್ತಿದೆ. ಅದರಲ್ಲೂ ಈ ಸೋಂಕು ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದೆ. ಆದರೆ ಈ ಸೋಂಕಿನ ಲಕ್ಷಣಗಳು ಮಾತ್ರ ಕೊರೊನಾ ಸೋಂಕಿನಂತಿಲ್ಲ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ಕೂಡ ಆತಂಕ ವ್ಯಕ್ತಪಡಿಸಿದೆ. ಚೀನಾದಲ್ಲಿ ಹರಡುತ್ತಿರೋ ಸೋಂಕು ಯಾವುದು? ಇದು ನ್ಯುಮೋನಿಯಾ ಇರಬಹುದೇ? ಅಥವಾ ಕೋವಿಡ್ ರೀತಿಯ ಬೇರೆ ಯಾವುದಾದ್ರೂ ವೈರಾಣು ಕಾಡುತ್ತಿದೆಯೇ? ಅನ್ನೋ ಪ್ರಶ್ನೆಗೆ ಮಾತ್ರ ಉತ್ತರವೇ ಸಿಗ್ತಿಲ್ಲ. ಚೀನಾ ರಾಜಧಾನಿ ಬೀಜಿಂಗ್ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ಈ ಸೋಂಕು ಆರ್ಭಟಿಸ್ತಿದೆ. ಆಸ್ಪತ್ರೆಯ ಬೆಡ್‌ಗಳೆಲ್ಲಾ ಭರ್ತಿಯಾಗಿವೆ. ಮಕ್ಕಳನ್ನು ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಗ್ತಿದೆ. ಅಲ್ಲದೆ ಈ ಸೋಂಕಿನ ಲಕ್ಷಣಗಳೇ ವಿಚಿತ್ರವಾಗಿದೆ.

ಚೀನಾದಲ್ಲಿ ಮಕ್ಕಳನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಿರುವ ನಿಗೂಢ ಸೋಂಕು ಆರಂಭದಲ್ಲಿ ಶ್ವಾಸಕೋಶದಲ್ಲಿ ಉರಿ ಸಮಸ್ಯೆ ಮೂಲಕ ಕಾಣಿಸಿಕೊಳ್ಳುತ್ತಿದೆ. ಎದೆ ಉರಿಯ ರೂಪದಲ್ಲಿ ಶುರುವಾಗಿ ನಂತರ ತೀವ್ರ ಸ್ವರೂಪದ ಜ್ವರ ಬರ್ತಿದೆ. ಕೆಲವು ಮಕ್ಕಳಿಗೆ ಸಾಮಾನ್ಯ ಜ್ವರ ಇದ್ದರೂ ಕೂಡಾ ಉಸಿರಾಟದ ಸಮಸ್ಯೆ ಕಾಡುತ್ತಿದ್ದು ಬಾರೀ ಆತಂಕಕ್ಕೆ ಕಾರಣವಾಗಿದೆ. ಕೊವಿಡ್ ಸೋಂಕು ತಗುಲಿದಾಗ ಕಂಡು ಬರುತ್ತಿದ್ದ ಲಕ್ಷಣಗಳು ಮಕ್ಕಳಲ್ಲಿ ಕಾಣ್ತಿಲ್ಲ. ನಿಗೂಢ ಸೋಂಕಿನ ಲಕ್ಷಣಗಳು ನ್ಯುಮೋನಿಯಾ ರೀತಿ ಕಂಡು ಬರ್ತಿದೆ. ಆದರೂ ಈ ಸೋಂಕು ನ್ಯುಮೋನಿಯಾ ಅಲ್ಲ ಅಂತಾ ವೈದ್ಯರು ಹೇಳ್ತಿದ್ದಾರೆ. ಕೆಮ್ಮು, ಜ್ವರದ ಜೊತೆಗೆ ಮಕ್ಕಳಿಗೆ ತೀವ್ರ ಉಸಿರಾಟದ ಸಮಸ್ಯೆ, ಉಬ್ಬಸ, ಆಯಾಸ, ಹಸಿವಿನ ಕೊರತೆ ಮತ್ತು ವಾಂತಿ ಕಾಣಿಸಿಕೊಳ್ತಿದೆ.

ಅಷ್ಟಕ್ಕೂ ಮಕ್ಕಳನ್ನ ಕಾಡುತ್ತಿರುವ ಸೋಂಕು ಯಾವುದು ಅನ್ನೋದ್ರ ಬಗ್ಗೆ ಸ್ಪಷ್ಟತೆ ಸಿಗ್ತಿಲ್ಲ. ಚೀನಾ ಸರ್ಕಾರವು ದೇಶದಲ್ಲಿ ಇನ್‌ಫ್ಲುಯೆಂಜಾ, ಮೈಕೋ ಪ್ಲಾಸ್ಮಾ ನ್ಯುಮೋನಿಯಾದಂಥಾ ಬ್ಯಾಕ್ಟೀರಿಯಾಗಳು ಹರಡುತ್ತಿವೆ ಎಂದಷ್ಟೇ ಸ್ಪಷ್ಟನೆ ಕೊಡ್ತಿದೆ. ಆದರೆ, ಯಾವುದೇ ನಿರ್ದಿಷ್ಟ ಸೋಂಕಿನ ಹೆಸರನ್ನ ಹೇಳ್ತಿಲ್ಲ. ಇದರಿಂದಾಗಿ ಅಲ್ಲಿನ ಜನ ಕೂಡ ಆತಂಕದಲ್ಲಿದ್ದಾರೆ.

Shantha Kumari