ಕೊರೊನಾದಂತೆ ಹರಡುತ್ತಿದ್ಯಾ ನಿಗೂಢ ನ್ಯುಮೋನಿಯಾ ಮಾದರಿ ವೈರಸ್! – ಅಮೆರಿಕದಲ್ಲೂ ಸೋಂಕು ಸ್ಪೋಟ!

ಕೊರೊನಾದಂತೆ ಹರಡುತ್ತಿದ್ಯಾ ನಿಗೂಢ ನ್ಯುಮೋನಿಯಾ ಮಾದರಿ ವೈರಸ್! – ಅಮೆರಿಕದಲ್ಲೂ ಸೋಂಕು ಸ್ಪೋಟ!

ಜಗತ್ತಿಗೆ ಕೊರೊನಾ ಸೋಂಕು ಹಬ್ಬಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಚೀನಾದಲ್ಲಿ ಈಗ ಹೊಸ ಸಾಂಕ್ರಾಮಿಕ ರೋಗ ಸುನಾಮಿ ಎಬ್ಬಿಸಿದೆ. ಕೊರೊನಾದಿಂದ ಇನ್ನೂ ಚೇತರಿಸಿಕೊಳ್ಳದ ಚೀನಾದಲ್ಲಿ ಮತ್ತೆ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ನಿಗೂಢ ನ್ಯುಮೋನಿಯಾ ಮಾದರಿ ಸೋಂಕು ಚೀನಾ ಶಾಲೆಗಳಿಗೆ ವಕ್ಕರಿಸಿದ್ದು ಮಕ್ಕಳು ವಿಲವಿಲ ಒದ್ದಾಡುತ್ತಿದ್ದಾರೆ. ಉಸಿರಾಟದ ಸಮಸ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಸೋಂಕಿತರು ತುಂಬಿ ತುಳುಕುತ್ತಿದ್ದಾರೆ. ಪ್ರತಿನಿತ್ಯ ಅಂದಾಜು 7 ಸಾವಿರ ಮಕ್ಕಳಲ್ಲಿ ಸೋಂಕು ಪತ್ತೆಯಾಗುತ್ತಿದೆ. ಪುಟ್ಟ ಪುಟ್ಟ ಮಕ್ಕಳ ದೇಹ ಹೊಕ್ಕುತ್ತಿರುವ ಈ ವೈರಸ್ ಜಗತ್ತಿನೆಲ್ಲೆಡೆ ಮತ್ತೆ ಆತಂಕ ಮೂಡಿಸಿದೆ. ಇದೀಗ ಈ ಸಾಂಕ್ರಾಮಿಕ ರೋಗ ಕೊರೊನಾದಂತೆ ಹರಡುತ್ತಿದ್ಯಾ ಅನ್ನೋ ಪ್ರಶ್ನೆ ಎದುರಾಗಿದೆ. ಇದಕ್ಕೆ ಕಾರಣ ಅಮೆರಿಕದಲ್ಲೂ ಇದೇ ರೀತಿಯ ಸೋಂಕು ಮಕ್ಕಳಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ: ಕೊವಿಡ್ ನಂತೆಯೇ ಮತ್ತೊಂದು ವೈರಸ್ ಮುಚ್ಚಿಟ್ಟಿತಾ ಚೀನಾ – ನಿಗೂಢ ಸೋಂಕಿನ ಭೀತಿ ಹಿನ್ನೆಲೆ ಭಾರತದಲ್ಲಿ ಹೈ ಅಲರ್ಟ್

ಹೌದು, ಅಮೆರಿಕದ ಓಹಿಯೋ ಮತ್ತು ಮಸಾಚ್ಯುಸೆಟ್ಸ್‌ ರಾಜ್ಯದ 3ರಿಂದ14ರ ವಯೋಮಾನದ ಮಕ್ಕಳಲ್ಲಿ ಏಕಾಏಕಿ ಭಾರೀ ಪ್ರಮಾಣದ ನ್ಯುಮೋನಿಯಾ ಸೋಂಕು ಕಾಣಿಸಿಕೊಂಡಿದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ ಚೀನಾದಲ್ಲೂ ಎಳೆಯ ವಯಸ್ಸಿನ ಮಕ್ಕಳಲ್ಲಿ ಇದೇ ರೀತಿಯಲ್ಲಿ ನ್ಯುಮೋನಿಯಾ ಮಾದರಿಯ ನಿಗೂಢ ಸೋಂಕು ಕಾಣಿಸಿಕೊಂಡು ಜಾಗತಿಕ ಮಟ್ಟದಲ್ಲಿ ಮತ್ತೊಂದು ಸಾಂಕ್ರಾಮಿಕ ಏಳುವ ಭೀತಿ ಕಾಣಿಸಿಕೊಂಡಿತ್ತು. ಅದರ ಬೆನ್ನಲ್ಲೇ ಅಮೆರಿಕದಲ್ಲೂ ಅಂಥದ್ದೇ ಬೆಳವಣಿಗೆ ಕಾಣಿಸಿಕೊಂಡಿದ್ದು, ಜನರನ್ನು ಆತಂಕಕ್ಕೆ ದೂಡುವಂತೆ ಮಾಡಿದೆ.

ಓಹಿಯೋ ವೈದ್ಯಕೀಯ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ. ಕಳೆದ ಗುರುವಾರ ಒಂದೇ ದಿನ ರಾಜ್ಯದಲ್ಲಿ 145 ಪ್ರಕರಣ ದಾಖಲಾಗಿದೆ. ವೈದ್ಯಕೀಯ ಇಲಾಖೆ ಇದನ್ನು ಸ್ಫೋಟ ಎಂದು ಪರಿಗಣಿಸಿ ತುರ್ತು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾಮಾನ್ಯ ಜ್ವರ ಮತ್ತು ಶ್ವಾಸಕೋಶದಲ್ಲಿ ಅಲ್ಪ ಪ್ರಮಾಣದ ಉರಿ ಕಾಣಿಸಿಕೊಳ್ಳುವುದು ಇದರ ಲಕ್ಷಣಗಳಾಗಿದ್ದು, ವೈದ್ಯರು ರೋಗಿಗಳಿಗೆ ಔಷಧ ನೀಡಿ ಮನೆಯಲ್ಲೆ ಆರೈಕೆ ಮಾಡಿಕೊಳ್ಳುವಂತೆ ಸೂಚಿಸುತ್ತಿದ್ದಾರೆ ಎಂದು ವರದಿಯಾಗಿದೆ.

Shwetha M