ಚೀನಾ ಮಕ್ಕಳಲ್ಲಿ ಕಾಣಿಸಿಕೊಂಡ ನ್ಯೂಮೋನಿಯಾ ಸೋಂಕು ಭಾರತದಲ್ಲೂ ಪತ್ತೆ!

ಚೀನಾ ಮಕ್ಕಳಲ್ಲಿ ಕಾಣಿಸಿಕೊಂಡ ನ್ಯೂಮೋನಿಯಾ ಸೋಂಕು ಭಾರತದಲ್ಲೂ ಪತ್ತೆ!

ಡ್ರ್ಯಾಗನ್‌ ರಾಷ್ಟ್ರ ಚೀನಾದಲ್ಲಿ ಹೊಸ ಹೊಸ ರೋಗಗಳು ಪತ್ತೆಯಾಗುತ್ತಲೇ ಇದೆ. ಕಳೆದ ಮೂರು ವರ್ಷಗಳ ಹಿಂದೆ ಚೀನಾದಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಈ ವಿಚಾರವನ್ನು ಅಲ್ಲಿನ ಸರ್ಕಾರ ಮುಚ್ಚಿಟ್ಟಿತ್ತು. ಇದು ಇಡೀ ವಿಶ್ವಕ್ಕೆ ವ್ಯಾಪಿಸಿತ್ತು. ಲಕ್ಷಾಂತರ ಮಂದಿ ಸಾವನ್ನಪ್ಪಿದ್ದರು. ಇದೀಗ ಇದೇ ಮಾದರಿಯಲ್ಲಿ ಹೊಸ ಸೋಂಕಿನ ವಿಚಾರವನ್ನೂ ಮುಚ್ಚಿಡುತ್ತಿದ್ಯಾ ಎಂಬ ಆತಂಕ ಶುರುವಾಗಿದೆ. ಇದಕ್ಕೆ ಕಾರಣ ಚೀನಾದಲ್ಲಿ ಪತ್ತೆಯಾದ ನ್ಯೂಮೋನಿಯಾ ರೀತಿಯ ಸೋಂಕು. ಇದೀಗ ಈ ಸೋಂಕು ಭಾರತದಲ್ಲೂ ಪತ್ತೆಯಾಗಿದೆ.

ಕೋವಿಡ್ ಬಳಿಕ ಚೀನಾದಲ್ಲಿ ನ್ಯೂಮೋನಿಯಾ ರೀತಿಯ ಸೋಂಕು ತೀವ್ರಗತಿಯಲ್ಲಿ ವೇಗವಾಗಿ ಹರಡುತ್ತಿದೆ. ಮಕ್ಕಳಲ್ಲಿ ಕಾಣಿಸಿಕೊಂಡಿರುವ ಈ ಸೋಂಕಿನಿಂದ ಚೀನಾದ ಕೆಲ ಪ್ರಾಂತ್ಯದ ಆಸ್ಪತ್ರೆಗಳು ಭರ್ತಿಯಾಗಿದೆ. ಇದೇ ಸೋಂಕು ಅಮೆರಿಕದ ಮಕ್ಕಳಲ್ಲೂ ಕಾಣಿಸಿಕೊಂಡಿದೆ. ಚೀನಾದಲ್ಲಿ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಅಲರ್ಟ್ ಘೋಷಿಸಿದ ಭಾರತ ತೀವ್ರ ಮುನ್ನಚ್ಚರಿಕೆ ವಹಿಸಿತ್ತು. ಆದರೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇದೀಗ 7 ಪ್ರಕರಣ ಪತ್ತೆಯಾಗಿದೆ. ಈ ಪ್ರಕರಣ ಚೀನಾದಲ್ಲಿ ಕಾಣಿಸಿಕೊಂಡ ನ್ಯುಮೋನಿಯಾ ಬ್ಯಾಕ್ಟೀರಿಯಾ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಎಟಿಎಂ ಹಣ ದೋಚಲು ಕಳ್ಳರ ಕಸರತ್ತು –  ಕಣ್ಣಮುಂದೆಯೇ ಸುಟ್ಟು ಹೋಯ್ತು ಕಂತೆ ಕಂತೆ ಕಾಸು!

ಈ ಸೋಂಕಿನ ಲಕ್ಷಣಗಳಿರುವ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಒಟ್ಟು 67 ಮಾದರಿಯನ್ನು ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ 7 ಮಾದರಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ. 2023ರ ಎಪ್ರಿಲ್‌ನಿಂದ ಸೆಪ್ಟೆಂಬರ್ ವರೆಗಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಲ್ಯಾನ್ಸೆಟ್ ಮೈಕ್ರೋಬ್ ನಡೆಸಿದ ಅಧ್ಯಯನದಲ್ಲಿ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. 7 ಪ್ರಕರಣ ಪೈಕಿ ಒಂದು ಪ್ರಕರಣ ಪಿಸಿಆರ್ ಪರೀಕ್ಷೆ ವೇಳೆ ದೃಢಪಟ್ಟಿದೆ. ಇನ್ನುಳಿದ 6 ಪ್ರಕರಣ ಐಜಿಎಂ ಎಲಿಸಾ ಟೆಸ್ಟ್ ವೇಳೆ ಪತ್ತೆಯಾಗಿದೆ.

ಭಾರತದಲ್ಲಿ ಪತ್ತೆಯಾದ ನ್ಯೂಮೋನಿಯಾ ಬ್ಯಾಕ್ಟೀರಿಯಾ ಪ್ರಕರಣ ಕೊರೋನಾ ರೀತಿ ಪಸರಿಸುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಹೆಚ್ಚಿನ ಮಾದರಿ ಪರೀಕ್ಷಿಸಿ, ಪ್ರಕರಣದ ತೀವ್ರತೆಯನ್ನು ಅಳೆಯಲು ಏಮ್ಸ್ ಮುಂದಾಗಿದೆ.

ಭಾರತಕ್ಕೂ ಮೊದಲು ಅಮೆರಿಕದ ಓಹಿಯೋ ಮತ್ತು ಮಸಾಚ್ಯುಸೆಟ್ಸ್‌ ರಾಜ್ಯದ 3-14ರ ವಯೋಮಾನದ ಮಕ್ಕಳಲ್ಲಿ ಏಕಾಏಕಿ ಭಾರೀ ಪ್ರಮಾಣದ ನ್ಯುಮೋನಿಯಾ ಸೋಂಕು ಕಾಣಿಸಿಕೊಂಡಿತ್ತು. ಇತ್ತೀಚೆಗೆ ಚೀನಾದಲ್ಲೂ ಎಳೆಯ ವಯಸ್ಸಿನ ಮಕ್ಕಳಲ್ಲಿ ಇದೇ ರೀತಿಯಲ್ಲಿ ನ್ಯುಮೋನಿಯಾ ಮಾದರಿಯ ನಿಗೂಢ ಸೋಂಕು ಕಾಣಿಸಿಕೊಂಡು ಜಾಗತಿಕ ಮಟ್ಟದಲ್ಲಿ ಮತ್ತೊಂದು ಸಾಂಕ್ರಾಮಿಕ ಏಳುವ ಭೀತಿ ಕಾಣಿಸಿಕೊಂಡಿತ್ತು.

ಓಹಿಯೋ ವೈದ್ಯಕೀಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯಂತೆ ಗುರುವಾರ ಒಂದೇ ದಿನ 145 ಪ್ರಕರಣ ದಾಖಲಾಗಿದ್ದು, ವೈದ್ಯಕೀಯ ಇಲಾಖೆ ಇದನ್ನು ಸ್ಫೋಟ ಎಂದು ಪರಿಗಣಿಸಿ ತುರ್ತು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾಮಾನ್ಯ ಜ್ವರ ಮತ್ತು ಶ್ವಾಸಕೋಶದಲ್ಲಿ ಅಲ್ಪ ಪ್ರಮಾಣದ ಉರಿ ಕಾಣಿಸಿಕೊಳ್ಳುವುದು ಇದರ ಲಕ್ಷಣಗಳಾಗಿದ್ದು, ವೈದ್ಯರು ರೋಗಿಗಳಿಗೆ ಔಷಧ ನೀಡಿ ಮನೆಯಲ್ಲೆ ಆರೈಕೆ ಮಾಡಿಕೊಳ್ಳುವಂತೆ ಸೂಚಿಸುತ್ತಿದ್ದಾರೆ.

Shwetha M