ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಬರುತ್ತಿದ್ದಾರೆ ಪ್ರಧಾನಿ ಮೋದಿ – ಆ. 26 ರಂದು ಪೀಣ್ಯದಲ್ಲಿ ರೋಡ್​ ಶೋ ಸಾಧ್ಯತೆ

ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಬರುತ್ತಿದ್ದಾರೆ ಪ್ರಧಾನಿ ಮೋದಿ – ಆ. 26 ರಂದು ಪೀಣ್ಯದಲ್ಲಿ ರೋಡ್​ ಶೋ ಸಾಧ್ಯತೆ

ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ -3 ಗೆ ಸಕ್ಸಸ್‌ ಕಂಡಿದೆ. ಚಂದ್ರಯಾನ – 3 ರ ಯಶಸ್ವಿ ಲ್ಯಾಂಡಿಂಗ್ ಹಿನ್ನೆಲೆ ದೇಶ, ವಿದೇಶಾದ್ಯಂತ ಇಸ್ರೋ ಕಾರ್ಯಾಚರಣೆಗೆ ಪ್ರಶಂಸೆ, ಅಭಿನಂದನೆಗಳು ವ್ಯಕ್ತವಾಗುತ್ತಿದೆ. ಈ ಐತಿಹಾಸಿಕ ಯೋಜನೆ ಯಶಸ್ವಿಯಾಗಿರುವ ಹಿನ್ನೆಲೆ ವಿಜ್ಞಾನಿಗಳನ್ನು ಅಭಿನಂದಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಇದನ್ನೂ ಓದಿ: ಚುನಾವಣೆ ನಡೆಸಲು ವಿಫಲವಾದ ಭಾರತೀಯ ಕುಸ್ತಿ ಫೆಡರೇಶನ್ –ಸದಸ್ಯತ್ವ ರದ್ದು ಮಾಡಿದ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್  

ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯ ದಕ್ಷಿಣ ಆಫ್ರಿಕಾದ ಜೋಹಾನ್ಸ್​​​ಬರ್ಗ್​​ನಲ್ಲಿ ನಡೆಯುತ್ತಿರುವ ಬ್ರಿಕ್ಸ್​ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಶೃಂಗಸಭೆಯ ನಂತರ ಪ್ರಧಾನಿ ಮೋದಿ ಅವರು ನೇರವಾಗಿ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕಚೇರಿಗೆ ಭೇಟಿ ನೀಡಿ, ವಿಜ್ಞಾನಿಗಳನ್ನು ಭೇಟಿಯಾಗಿ ಅವರ ಜತೆ ಸಭೆ ನಡೆಸಿ ದೆಹಲಿಗೆ ತೆರಳಲಿದ್ದಾರೆ.

ಪ್ರಧಾನಿ ಮೋದಿ ಅವರು ಶನಿವಾರ ಸಂಜೆ 5.55ಕ್ಕೆ ಎಚ್​ಎಎಲ್​ ಏರ್‌ಪೋರ್ಟ್‌ಗೆ ಆಗಮಿಸಲಿದ್ದಾರೆ. ಸಂಜೆ 6.30ರವರೆಗೆ ಏರ್‌ಪೋರ್ಟ್‌ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ರಾತ್ರಿ 7 ಗಂಟೆಗೆ ಇಸ್ರೋ ಕೇಂದ್ರ ಕಚೇರಿಗೆ ಭೇಟಿ ನೀಡಲಿದ್ದಾರೆ. ರಾತ್ರಿ 8 ಗಂಟೆಯವರೆಗೆ ಇಸ್ರೋ ಕಚೇರಿಯಲ್ಲಿ ಪ್ರಧಾನಿ ಮೋದಿ ಸಭೆ ನಡೆಸಲಿದ್ದು, ನಂತರ ರಾತ್ರಿ 8.35ಕ್ಕೆ ಬೆಂಗಳೂರಿನಿಂದ ದೆಹಲಿಗೆ ನಿರ್ಗಮಿಸಲಿದ್ದಾರೆ.

ಪ್ರಧಾನಿ ಭೇಟಿ ವೇಳೆ ಹೆಚ್ಚಿನ ಜನ ಸೇರಿಸುವುದು ಮತ್ತು ಪೀಣ್ಯದಲ್ಲಿ ರೋಡ್ ಶೋ ನಡೆಸಲು ಬಿಜೆಪಿ ಚಿಂತನೆ ನಡೆಸಿದೆ. ಈ ವಿಚಾರವಾಗಿ ರಾಜ್ಯ ಘಟಕದ ನಾಯಕರಿಗೆ ವರಿಷ್ಠರಿಂದ ಈಗಾಗಲೇ ಸೂಚನೆ ಬಂದಿದೆ. ಅದ್ಧೂರಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸ್ವಾಗತಕ್ಕೆ ಎಚ್​ಎಎಲ್​​ ಏರ್​ಪೋರ್ಟ್​ನಲ್ಲಿ 5-6 ಸಾವಿರ ಜನರನ್ನು ಸೇರಿಸಲು ಉದ್ದೇಶಿಸಲಾಗಿದೆ. ಮೋದಿ ಅವರು ಏರ್​ಪೋರ್ಟ್​ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆಯೂ ಇದೆ. ಪೀಣ್ಯದಲ್ಲಿ ಮೋದಿ ಅವರು ಸುಮಾರು 1 ಕಿಲೋಮೀಟರ್ ರೋಡ್​ಶೋ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳುವಂತೆ ಬೆಂಗಳೂರಿನ ಬಿಜೆಪಿ ಶಾಸಕರಿಗೆ ಕೂಡ ಸೂಚನೆ ನೀಡಲಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

suddiyaana