ರಾಷ್ಟ್ರ ಮೊದಲು.. ದೇಶ ಬಲಪಡಿಸಲು ದೊಡ್ಡ ಸುಧಾರಣೆಗಳಿಗೆ ಬದ್ಧ – ಪ್ರಧಾನಿ ಮೋದಿ ಪ್ರತಿಜ್ಞೆ
ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆಯ ಆಂಗವಾಗಿ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ 11ನೇ ಬಾರಿ ಧ್ವಜಾರೋಹಣ ಮಾಡಿದ್ದಾರೆ. ಬೆಳಗ್ಗೆ 7:30ರ ಸುಮಾರಿಗೆ ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸಿ, ದೇಶದ ಜನತೆಗೆ ಸ್ವಾತಂತ್ರೋತ್ಸವದ ಶುಭಕೋರಿದರು.
ಇದನ್ನೂ ಓದಿ: ದರ್ಶನ್ ಶಾಪ ವಿಮೋಚನೆಗೆ ಯಾಗ – ಪೂಜಾ ಫಲ ಬಿಡುಗಡೆ ಭಾಗ್ಯ ನೀಡುತ್ತಾ?
ಧ್ವಜಾರೋಹಣಕ್ಕೂ ಮೊದಲು ಪ್ರಧಾನಿ ಮೋದಿ ಅವರು ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ರಾಜ್ಘಾಟ್ನಿಂದ ಕೆಂಪುಕೋಟೆಗೆ ತೆರಳಿದರು. ಈ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿಯನ್ನು ಸ್ವಾಗತಿಸಿದರು. ಬಳಿಕ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದಾರೆ.
ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ದೇಶವನ್ನುದ್ದೇಶಿ ಮಾತನಾಡಿದ ಮೋದಿ, ದೇಶದ ಸ್ವಾತಂತ್ರ್ಯಕ್ಕಾಗಿ ಜೀವನ ಸಮರ್ಪಣೆ ಮಾಡಿದ, ಸಂಘರ್ಷ ಮಾಡಿದ ಅಗಣಿತ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡುವ ಶುಭ ದಿನ. ಜನಜೀವನ ಪರಿವರ್ತಿಸಲು, ದೇಶವನ್ನು ಬಲಪಡಿಸಲು ದೊಡ್ಡ ಸುಧಾರಣೆಗಳಿಗೆ ಬದ್ಧ. ನಮಗೆ ರಾಷ್ಟ್ರ ಮೊದಲು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಜ್ಞೆ ಮಾಡಿದರು.
ಸುಧಾರಣೆಗಳಿಗೆ ನಮ್ಮ ಬದ್ಧತೆ ಗುಲಾಬಿ ಪತ್ರಿಕೆಯ ಸಂಪಾದಕೀಯಕ್ಕಾಗಿ ಅಲ್ಲ. ದೇಶವನ್ನು ಬಲಿಷ್ಠಗೊಳಿಸುವುದು ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡಲು ಬಯಸುತ್ತೇನೆ. ತಜ್ಞರು ಅಥವಾ ಬೌದ್ಧಿಕ ಚರ್ಚಾ ಕ್ಲಬ್ಗಳನ್ನು ತೃಪ್ತಿಪಡಿಸಲು ಸರ್ಕಾರವು ವ್ಯಾಪಕವಾದ ಸುಧಾರಣೆಗಳನ್ನು ಜಾರಿಗೆ ತಂದಿಲ್ಲ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ‘ನೇಷನ್ ಫಸ್ಟ್’ ಪ್ರತಿಜ್ಞೆಯೇ ನಮ್ಮ ಆದ್ಯತೆ ಎಂದು ತಿಳಿಸಿದರು.