ಬೆಂಗಳೂರಿನಲ್ಲಿ ಲೋಹದ ಹಕ್ಕಿಗಳ ಕಲರವ – ಏರೋ ಇಂಡಿಯಾ-2023 ಗೆ ಚಾಲನೆ ನೀಡಿದ ಮೋದಿ

ಬೆಂಗಳೂರಿನಲ್ಲಿ ಲೋಹದ ಹಕ್ಕಿಗಳ ಕಲರವ – ಏರೋ ಇಂಡಿಯಾ-2023 ಗೆ ಚಾಲನೆ ನೀಡಿದ ಮೋದಿ

ಬೆಂಗಳೂರು: ವಿಶ್ವದ ಗಮನ ಸೆಳೆಯುವ ಏರೋ ಇಂಡಿಯಾ-2023 ಏರ್‌ಶೋಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ 5 ದಿನಗಳ ಕಾಲ ವೈಮಾನಿಕ ಪ್ರದರ್ಶನ ನಡೆಯಲಿದೆ.

ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ಚಾಲನೆ ಕೊಡುತ್ತಲೇ ಸಾರಂಗ್ ಹೆಲಿಕಾಪ್ಟರ್ ಇತ್ಯಾದಿ ಯುದ್ಧವಿಮಾನಗಳು ವಿವಿಧ ರಚನೆಗಳಲ್ಲಿ ಆಗಸದಲ್ಲಿ ಪ್ರದರ್ಶನ ನೀಡಿದವು. ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಗೆಹ್ಲೋಟ್, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ಹಲವು ಗಣ್ಯರು ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಸಾವಿರಾರು ಗರ್ಭಿಣಿಯರು ಹೆರಿಗೆಗಾಗಿ ಅರ್ಜೆಂಟೀನಾಗೆ ಹೋಗೋದೇಕೆ?  – ಟೂರ್ ನೆಪದಲ್ಲಿ ಪಾಸ್ ಪೋರ್ಟ್ ಲೆಕ್ಕ!

ಏರೋ ಇಂಡಿಯಾ ಶೋನಲ್ಲಿ ಕೇವಲ ವೈಮಾನಿಕ ಶಕ್ತಿ ಪ್ರದರ್ಶನ ಮಾತ್ರವಲ್ಲ ವಿಶ್ವಾದ್ಯಂತ ರಕ್ಷಣಾ ಕ್ಷೇತ್ರಗಳ 809 ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಡುತ್ತಿವೆ. ಅದಕ್ಕಾಗಿ ಯಲಹಂಕದ ಐಎಎಫ್ ನಿಲ್ದಾಣದಲ್ಲಿ 35 ಸಾವಿರ ಚದರ ಮೀಟರ್ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮಂಗಳವಾರ 32 ದೇಶಗಳ ರಕ್ಷಣಾ ಸಚಿವರುಗಳು ಸಭೆಯೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ. 29 ದೇಶಗಳ ವಾಯುಪಡೆ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರಕ್ಷಣಾ ಕ್ಷೇತ್ರಗಳ ಜಾಗತಿಕ ಕಂಪನಿಗಳ ಸಿಇಒಗಳ ದುಂಡುಮೇಜಿನ ಸಭೆ ನಡೆಯಲಿದೆ. ಒಟ್ಟು 73 ಸಿಇಒಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದೆ. ಬೋಯಿಂಗ್, ಲಾಕ್​ಹೀಡ್ ಮಾರ್ಟೀನ್, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್, ಜನರಲ್ ಅಟಾಮಿಕ್ಸ್, ಲೀಬೆರ್ ಗ್ರೂಪ್, ರೇಥಿಯಾನ್ ಟೆಕ್ನಾಲಜೀಸ್, ಸಫ್ರಾನ್, ಜನರಲ್ ಅಥಾರಿಟಿ ಆಫ್ ಮಿಲಿಟರಿ ಇಂಡಸ್ಟ್ರೀಸ್ (ಗಾಮಿ) ಮೊದಲಾದ ಜಾಗತಿಕ ಕಂಪನಿಗಳು ಪಾಲ್ಗೊಳ್ಳುತ್ತಿವೆ. ಭಾರತದ ರಕ್ಷಣಾ ಕ್ಷೇತ್ರದ ಕಂಪನಿಗಳಾದ ಹೆಚ್​ಎಎಲ್, ಬಿಇಎಲ್, ಬಿಡಿಎಲ್, ಬೆಮೆಲ್, ಮಿಶ್ರ ಧಾತು ನಿಗಮ್ ಮೊದಲಾದ ಕಂಪನಿಗಳೂ ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಡುತ್ತಿವೆ.

ಏರೋ ಇಂಡಿಯಾ ಶೋ ಹಿನ್ನೆಲೆ ಸಾರ್ವಜನಿಕರಿಗೆ ಜಿಕೆವಿಕೆ ಹಾಗೂ ಜಕ್ಕೂರಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಏರ್ ಶೋ ವೀಕ್ಷಣೆಗೆ 4 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಏರ್ ಶೋ ಹಿನ್ನೆಲೆ ಫೆ.14ರಂದು ಬೆಳಗ್ಗೆ 7.30 ರಿಂದ ಏರ್ ಪೋರ್ಟ್ ಮೇಲ್ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

suddiyaana