ಭಾರತದ ಮೊದಲ ಪ್ರಾದೇಶಿಕ ರಾಪಿಡ್ ರೈಲು ಸೇವೆ ‘ನಮೋ ಭಾರತ್‌’ಗೆ ಪ್ರಧಾನಿ ಚಾಲನೆ

ಭಾರತದ ಮೊದಲ ಪ್ರಾದೇಶಿಕ ರಾಪಿಡ್ ರೈಲು ಸೇವೆ ‘ನಮೋ ಭಾರತ್‌’ಗೆ ಪ್ರಧಾನಿ ಚಾಲನೆ

ನವದೆಹಲಿ: ಭಾರತದ ಮೊದಲ ಸೆಮಿ ಹೈ ಸ್ಪೀಡ್ ಪ್ರಾದೇಶಿಕ ರೈಲು ಸೇವೆಯಾದ ‘ನಮೋ ಭಾರತ್‌’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಿಗ್ಗೆ ಚಾಲನೆ ನೀಡಿದರು. ಪ್ರಾದೇಶಿಕ ತ್ವರಿತ ಪ್ರಯಾಣ ವ್ಯವಸ್ಥೆಯ (ಆರ್ಆರ್‌ಟಿಎಸ್) ದಿಲ್ಲಿ- ಗಾಜಿಯಾಬಾದ್- ಮೀರತ್ ರೈಲುಗಳಿಗೆ ಪ್ರಧಾನಿ ಮೋದಿ ಹಸಿರು ಬಾವುಟ ತೋರಿಸುವ ಮೂಲಕ ಉದ್ಘಾಟಿಸಿದರು.

ದೆಹಲಿ- ಗಾಜಿಯಾಬಾದ್- ಮೀರತ್ ಆರ್‌ಆರ್‌ಟಿಎಸ್‌ ಕಾರಿಡಾರ್‌ನ 17 ಕಿಮೀ ಉದ್ದದ ಆದ್ಯತಾ ವರ್ಗವು ಅಕ್ಟೋಬರ್ 21ರ ಶನಿವಾರದಿಂದ ಪ್ರಯಾಣಿಕರ ಓಡಾಟಕ್ಕೆ ಮುಕ್ತವಾಗಲಿದೆ. ಮೊದಲ ಹಂತದಲ್ಲಿ ದೆಹಲಿ, ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದಾದ್ಯಂತ ಪ್ರದೇಶಗಳನ್ನು ಸಂಪರ್ಕಿಸಲಿದೆ.

ಇದನ್ನೂ ಓದಿ: ಕಾರು ಖರೀದಿ ವಿಚಾರವಾಗಿ ದಂಪತಿ ಮಧ್ಯೆ ಜಗಳ! – ಪತಿಯ ಸಿಟ್ಟಿಗೆ ಹೆಂಡತಿ ಬಲಿ!

ಉತ್ತರ ಪ್ರದೇಶದಲ್ಲಿ ರಾಪಿಡ್ ಎಕ್ಸ್ ರೈಲು ‘ನಮೋ ಭಾರತ್‌’ಗೆ ಚಾಲನೆ ನೀಡಿದ ಬಳಿಕ ದುಹೈ ಡಿಪೋವನ್ನು ಸಂಪರ್ಕಿಸುವ ಸಾಹಿಬಾಬಾದ್ ರೈಲಿನಲ್ಲಿ ಪ್ರಯಾಣಿಸಿದ ಪ್ರಧಾನಿ, ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ಜತೆ ಸಂವಾದ ನಡೆಸಿದ್ದಾರೆ.

ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಮೊದಲ ತ್ವರಿತ ರೈಲು ಸೇವೆ – ನಮೋ ಭಾರತ್ ಚಾಲನೆ ನೀಡಲಾಗಿದೆ. ಇದು ಐತಿಹಾಸಿಕ ಕ್ಷಣ. ಆರ್‌ಆರ್‌ಟಿಎಸ್‌ನ ಮೊದಲ ಹಂತದಲ್ಲಿ ನಮೋ ಭಾರತ್ ರೈಲುಗಳು ದೆಹಲಿ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನದ ಹಲವು ಭಾಗಗಳನ್ನು ಸಂಪರ್ಕಿಸಲಿವೆ. ಮುಂದಿನ 12 ರಿಂದ 18 ತಿಂಗಳಲ್ಲಿ ದೆಹಲಿ – ಮೀರತ್ ನಡುವಿನ ಸಂಪೂರ್ಣ 82-ಕಿಮೀ ಮಾರ್ಗವನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ರೈಲಿನ ವಿಶೇಷತೆಗಳು ಏನು?

ಓವರ್ ಹೆಡ್ ಸ್ಟೋರೇಜ್, ವೈಫೈ, ಪ್ರತಿ ಸೀಟಿನಲ್ಲಿಯೂ ಚಾರ್ಜಿಂಗ್ ಆಯ್ಕೆಗಳಂತಹ ವಿಶಿಷ್ಟ ಸೌಲಭ್ಯಗಳನ್ನು ಇವು ಪ್ರಯಾಣಿಕರಿಗೆ ಒದಗಿಸಲಿವೆ. ಮುಖ್ಯವಾಗಿ ಇದು ಪ್ರೀಮಿಯಂ ದರ್ಜೆಯ ಬೋಗಿಗಳನ್ನು ಹೊಂದಿದ್ದು, ವಿಶಾಲ ಆಸನಗಳು, ಕಾಲುಚಾಚಲು ಸಾಕಷ್ಟು ಜಾಗ ಹಾಗೂ ಕೋಟ್ ಹ್ಯಾಂಗರ್‌ಗಳನ್ನು ಒಳಗೊಂಡಿದೆ ಎಂದು ಆರ್‌ಆರ್‌ಟಿಎಸ್ ರೈಲುಗಳ ಕುರಿತು ರೈಲ್ವೆ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.

ಸಂಪೂರ್ಣ ಹವಾ ನಿಯಂತ್ರಿತವಾದ ಈ ರೈಲಿನಲ್ಲಿ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳು, ತುರ್ತು ಬಾಗಿಲು ತೆರೆಯುವ ಯಾಂತ್ರಿಕತೆ ಮತ್ತು ರೈಲು ಕಾರ್ಯ ನಿರ್ವಾಹಕರ ಜತೆ ಸಂವಹಿಸಲು ಬಟನ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ದಿಲ್ಲಿ- ಗಾಜಿಯಾಬಾದ್- ಮೀರತ್ ಕಾರಿಡಾರ್ ಅನ್ನು 30 ಸಾವಿರ ಕೋಟಿಗೂ ಹೆಚ್ಚು ಹಣದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ದಿಲ್ಲಿ ಹಾಗೂ ಮೀರತ್ ಅನ್ನು ಸಂಪರ್ಕಿಸುವ ಯೋಜನೆಯಾಗಿದ್ದು, ಗಾಜಿಯಾಬಾದ್, ಮುರುದನಗರ ಮತ್ತು ಮೋದಿನಗರ ಕೇಂದ್ರಗಳ ಮೂಲಕ ಅರ್ಧ ಗಂಟೆಗೂ ಕಡಿಮೆ ಅವಧಿಯಲ್ಲಿ ಸಂಪರ್ಕಿಸುತ್ತವೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಆರ್‌ಆರ್‌ಟಿಎಸ್ ಹೊಸ ರೈಲು ಆಧಾರಿತ, ಸೆಮಿ ಹೈ ಸ್ಪೀಡ್‌ನ, ಅಧಿಕ ಆವರ್ತನದ ಪ್ರಯಾಣ ವ್ಯವಸ್ಥೆಯಾಗಿದ್ದು, 180 ಕಿಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿ ಪ್ರಾದೇಶಿಕ ಸಹಕಾರ ನಿಗಮವು (ಎನ್‌ಸಿಆರ್‌ಟಿಸಿ), ಆರ್‌ಆರ್‌ಟಿಎಸ್ ರೈಲಗಳಿಗೆ ಏಪ್ರಿಲ್‌ನಲ್ಲಿ ರಾಪಿಡ್‌ಎಕ್ಸ್ ಎಂದು ಹೆಸರು ಇರಿಸಿತ್ತು. ಆದರೆ ಅದಕ್ಕೆ ಚಾಲನೆ ನೀಡುವ ಹಿಂದಿನ ದಿನವಷ್ಟೇ, ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ‘ನಮೋ ಭಾರತ್’ ಎಂಬ ಹೆಸರು ಬಹಿರಂಗಪಡಿಸಿದ್ದರು.

Shwetha M