ಪ್ರಾಜೆಕ್ಟ್ ಟೈಗರ್ ಗೆ ಐವತ್ತು ವರ್ಷ – ಮೈಸೂರಿನಲ್ಲಿ ಭಾನುವಾರ ಮೋದಿ ಹವಾ
ಚಾಮರಾಜನಗರ: ಬಂಡೀಪುರ ಅರಣ್ಯವನ್ನು ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷ ತುಂಬಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 9 ರಂದು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲಿದ್ದಾರೆ. ಅಷ್ಟೇ ಅಲ್ಲದೇ ಉದ್ಯಾನವನದಲ್ಲಿ ಸಫಾರಿ ನಡೆಸಲಿದ್ದಾರೆ.
ನರೇಂದ್ರ ಮೋದಿ ಶನಿವಾರ ರಾತ್ರಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಬಳಿಕ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಮೈಸೂರಿನ ಪ್ರತಿಷ್ಠಿತ ರಾಡಿಸನ್ ಬ್ಲೂ ಹೋಟೆಲ್ ಗೆ ತೆರಳಲಿ, ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಭಾನುವಾರ ಬೆಳಗ್ಗೆ 6.25ಕ್ಕೆ ಮೈಸೂರು ಹೆಲಿಪ್ಯಾಡ್‌ನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಹೆಲಿಪ್ಯಾಡ್‌ಗೆ ತೆರಳಲಿದ್ದಾರೆ. ಬಳಿಕ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ ರಸ್ತೆ ಮೂಲಕ ತೆರಳಿ, ಕಾಡಿನಲ್ಲಿ ಸಫಾರಿ ನಡೆಸಲಿದ್ದಾರೆ. ಅನಂತರ ಅರಣ್ಯ ಸಿಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ.
ಇದನ್ನೂ ಓದಿ: ಸುಖೋಯ್-30 ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಬಳಿಕ ತೆಪ್ಪಕಾಡು, ಮಧುಮಲೈಗೆ ತೆರಳಿ ಆಸ್ಕರ್ ಪ್ರಶಸ್ತಿ ಮೂಲಕ ವಿಶ್ವದ ಗಮನ ಸೆಳೆದ ಎಲಿಫ್ಯಾಂಟ್ ವಿಸ್ಪರರ್ಸ್ ತಂಡವನ್ನು ಭೇಟಿ ಮಾಡಲಿದ್ಧಾರೆ. ಅನಂತರ ಹೆಲಿಕಾಪ್ಟರ್ ಮೂಲಕ 10.20ಕ್ಕೆ ಮತ್ತೆ ಮೈಸೂರಿಗೆ ಆಗಮಿಸಲಿದ್ದಾರೆ.
ಬೆಳಗ್ಗೆ 10.30ಕ್ಕೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹುಲಿ ವರದಿ ಬಿಡುಗಡೆ ಮಾಡಲಿದ್ಧಾರೆ. ಇದೇ ಕಾರ್ಯಕ್ರಮದಲ್ಲಿ 50 ರೂ. ಮೌಲ್ಯದ ವಿಶೇಷ ನಾಣ್ಯವನ್ನೂ ಬಿಡುಗಡೆ ಮಾಡಲಿದ್ದಾರೆ. ಮಧ್ಯಾಹ್ನ 12.40ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ದಿಲ್ಲಿಗೆ ತೆರಳಲಿದ್ಧಾರೆ.
1973ರ ಎ. 1ರಂದು ದೇಶಾದ್ಯಂತ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಪ್ರಾಜೆಕ್ಟ್ ಟೈಗರ್ ಅನ್ನು ಘೋಷಿಸಿದ್ದರು. ಅದೇ ವರ್ಷದ ನ. 17ರಂದು ಆಗಿನ ಸಿಎಂ ದೇವರಾಜ ಅರಸು ಅವರು ಬಂಡೀಪುರ ರಕ್ಷಿತಾರಣ್ಯ ಘೋಷಣೆ ಮಾಡಿದರು. ರಾಜ್ಯದ ಮೊದಲ ಹುಲಿ ರಕ್ಷಿತಾರಣ್ಯ ಎನ್ನುವ ಖ್ಯಾತಿಯೂ ಇದಕ್ಕೆ ಸಿಕ್ಕಿತು. ಆಗ ಇಲ್ಲಿ ಕೇವಲ 13 ಹುಲಿಗಳಿದ್ದು, ಈಗ ಅವುಗಳ ಸಂಖ್ಯೆ 175ಕ್ಕೆ ಏರಿಕೆಯಾಗಿದೆ. ಹೀಗಾಗಿ 50 ವರ್ಷದ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರ ಮೈಸೂರನ್ನೇ ಆಯ್ಕೆ ಮಾಡಿಕೊಂಡಿದೆ ಎಂದು ಮೂಲಗಳು ಹೇಳಿವೆ.