ಮತದಾರರಿಗೆ ಕನ್ನಡದಲ್ಲೇ ಪ್ರಧಾನಿ ಮೋದಿ ಸಂದೇಶ – ಹಕ್ಕು ಚಲಾಯಿಸಿದ ಮಾಜಿ ಪ್ರಧಾನಿ ಹೆಚ್‌ಡಿಡಿ, ಸಿಎಂ ಸಿದ್ದರಾಮಯ್ಯ

ಮತದಾರರಿಗೆ ಕನ್ನಡದಲ್ಲೇ ಪ್ರಧಾನಿ ಮೋದಿ ಸಂದೇಶ – ಹಕ್ಕು ಚಲಾಯಿಸಿದ ಮಾಜಿ ಪ್ರಧಾನಿ ಹೆಚ್‌ಡಿಡಿ, ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಭರದಿಂದ ಸಾಗುತ್ತಿದೆ. ಮೊದಲ ಹಂತದ ಚುನಾವಣೆ ರಾಜ್ಯದ  14 ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ರಾಜಕಾರಣಿಗಳು, ಚಿತ್ರನಟರು ಮತ್ತು ಕ್ರೀಡಾಪಟುಗಳು ಸೇರಿದಂತೆ ಅನೇಕರು ಮತದಾನ ಮಾಡುತ್ತಿದ್ದಾರೆ.

ಕನ್ನಡದಲ್ಲೇ ಪ್ರಧಾನಿ ಮೋದಿ ಸಂದೇಶ

ಇನ್ನು ಮತದಾನದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಸಂದೇಶ ಕಳುಹಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಕನ್ನಡದಲ್ಲಿಯೇ ಪೋಸ್ಟ್‌ ಮಾಡಿರುವ ಪ್ರಧಾನಿ, ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಪ್ರತಿಯೊಬ್ಬರೂ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇನೆ. ಹೆಚ್ಚಿನ ಪ್ರಮಾಣದ ಮತದಾನವು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ನಮ್ಮ ಯುವ ಮತದಾರರು ಮತ್ತು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಾನು ವಿಶೇಷವಾಗಿ ಕೋರುತ್ತೇನೆ. ನಿಮ್ಮ ಮತ ನಿಮ್ಮ ಧ್ವನಿ! ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೆಲವು ಮತಗಟ್ಟೆಗಳಲ್ಲಿ ಇವಿಎಂ ತಾಂತ್ರಿಕ ದೋಷದಿಂದ ಮತದಾನ ವಿಳಂಬ – ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಗೂಂಡಾಗಿರಿ

ಹಕ್ಕು ಚಲಾಯಿಸಿದ ಮಾಜಿ ಪ್ರಧಾನಿ ಹೆಚ್‌ಡಿಡಿ

ಇನ್ನು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು  ಕೂಡ ತಮ್ಮ ಪತ್ನಿಯ ಜೊತೆ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ. ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 251 ರಲ್ಲಿ ದಂಪತಿ ಮತದಾನ ಮಾಡಿದ್ದಾರೆ.

ಮತದಾನ ಮಾಡುವುದಕ್ಕೂ ಮುನ್ನ ಹೊಳೆನರಸೀಪುರ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ, ಹರದನಹಳ್ಳಿಯ ದೇವೇಶ್ವರ ದೇವಾಲಯ ಹಾಗೂ ಮಾವಿನಕೆರೆಯ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ದೇವೇಗೌಡರು ಪೂಜೆ ಸಲ್ಲಿಸಿದರು. ಮತದಾನಕ್ಕೆ ಆಗಮಿಸಿದ ವೇಳೆ ಕೂಡ ಪಡುವಲಹಿಪ್ಪೆ ಗ್ರಾಮದ ಕೋದಂಡರಾಮ ದೇವಾಲಯದಲ್ಲೂ ಪೂಜೆ ಸಲ್ಲಿಸಿದ್ದಾರೆ.

ಮತಚಲಾಯಿಸಿದ ಸಿಎಂ ಸಿದ್ದರಾಮಯ್ಯ

ಇನ್ನು ಸಿಎಂ ಸಿದ್ದರಾಮಯ್ಯ ಕೂಡ ತಮ್ಮ ಹಕ್ಕು ಚಲಾಯಿಸಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೈಸೂರು ತಾಲೂಕಿನ ಸಿದ್ದರಾಮನಹುಂಡಿಯಲ್ಲಿ ಮತ ಚಲಾಯಿಸಿದರು. ಮತದಾನಕ್ಕೂ ಮುನ್ನ ಮನೆ ದೇವರಿಗೆ ಸಿದ್ದರಾಮಯ್ಯನವರು ಪೂಜೆ ಸಲ್ಲಿಸಿದ್ದಾರೆ. ಸಿಎಂ ಅವರು ಮೈಸೂರು ಸಿದ್ದರಾಮನಹುಂಡಿಯ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

Shwetha M

Leave a Reply

Your email address will not be published. Required fields are marked *