ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಜಾತಿ ಜನಗಣತಿಗೆ ನಿರ್ಧಾರ – ಚುನಾವಣೆ ಹೊಸ್ತಿಲಲ್ಲಿ ವಿಪಕ್ಷಗಳ ಲೆಕ್ಕಾಚಾರವೇನು..?

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಜಾತಿ ಜನಗಣತಿಗೆ ನಿರ್ಧಾರ – ಚುನಾವಣೆ ಹೊಸ್ತಿಲಲ್ಲಿ ವಿಪಕ್ಷಗಳ ಲೆಕ್ಕಾಚಾರವೇನು..?

ರಾಷ್ಟ್ರ ರಾಜಕೀಯದಲ್ಲೀಗ ಜಾತಿಗಣತಿ ಜಟಾಪಟಿ ಜೋರಾಗುತ್ತಿದೆ. ಸಾಮಾಜಿಕ ನ್ಯಾಯ, ಸಮಾನತೆ, ಹಿಂದುಳಿದ ವರ್ಗಗಳಿಗೆ ಅಧಿಕಾರ ಹಂಚಿಕೆ ಕಾರಣ ನೀಡಿ ಇಂಡಿಯಾ ಮಹಾಮೈತ್ರಿ ಒಕ್ಕೂಟ ಜಾತಿಗಣತಿಯನ್ನ ಸಮರ್ಥನೆ ಮಾಡಿಕೊಳ್ತಿದೆ. ಬಿಹಾರ ಮಾದರಿಯಲ್ಲಿ ರಾಷ್ಟ್ರವ್ಯಾಪಿಯಾಗಿ ಜಾತಿಗಣತಿಯನ್ನು ನಡೆಸಿ ವರದಿ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ. ಆದರೆ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಜಾತಿಗಣತಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಇಂತಹ ಗಣತಿಗಳು ದೇಶವನ್ನು ಒಗ್ಗೂಡಿಸುವ ಬದಲು ವಿಭಜಿಸಲಿವೆ ಎಂದು ಆತಂಕ ವ್ಯಕ್ತಪಡಿಸಿದೆ. ಇದೀಗ ಪಂಚರಾಜ್ಯಗಳ ಚುನಾವಣೆ ಮತ್ತು ಲೋಸಕಭಾ ಚುನಾವಣೆಗೆ ಜಾತಿಜನಗಣತಿಯೇ ಅತಿದೊಡ್ಡ ಅಸ್ತ್ರವಾಗಲಿದೆ. ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತವಿರುವ ಎಲ್ಲ ರಾಜ್ಯಗಳಲ್ಲಿ ಜಾತಿ ಗಣತಿ ನಡೆಸುವ ಬಗ್ಗೆ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ. ಜಾತಿ ಗಣತಿ ಮಾಡಲು ಪ್ರಧಾನಿ ಮೋದಿ ಅಸಮರ್ಥರಾಗಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : 2024ರ ಲೋಕಸಭಾ ಚುನಾವಣೆಗೆ ದಕ್ಷಿಣದಿಂದಲೇ ರಾಹುಲ್ ಗಾಂಧಿ ಅಖಾಡಕ್ಕೆ – ಕನ್ಯಾಕುಮಾರಿ ಅಥವಾ ಕರ್ನಾಟಕದಿಂದ ಸ್ಪರ್ಧೆ..?

ಅಕ್ಟೋಬರ್ 9ರಂದು ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆದಿತ್ತು. ಈ ವೇಳೆ ಜಾತಿ ಜನಗಣತಿ ಮಾಡುವ ಬಗ್ಗೆ ಸರ್ವಾನುಮತದಿಂದ ಐತಿಹಾಸಿನ ನಿರ್ಣಯ ಕೈಗೊಳ್ಳಲಾಗಿತ್ತು. ಹಿಮಾಚಲ ಪ್ರದೇಶ, ರಾಜಸ್ಥಾನ, ಕರ್ನಾಟಕ ಮತ್ತು ಛತ್ತೀಸ್‌ಗಢದಲ್ಲಿ ಜಾತಿ ಗಣತಿಗೆ ಕಾಂಗ್ರೆಸ್ ನಿರ್ಧರಿಸಿದೆ. ಜಾತಿ ಗಣತಿಗೆ ಕಾಂಗ್ರೆಸ್ ಆಡಳಿತವಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಸಮ್ಮತಿ ಸೂಚಿಸಿದ್ದಾರೆ. ಜಾತಿಗಣತಿ ಮಾಡಲು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಈಗಾಗಲೇ ಆದೇಶ ನೀಡಿದ್ದಾರೆ. ಕರ್ನಾಟಕ ಸಿಎಂ ಸಿದ್ದರಾಮಯ್ಯ ಕೂಡ ಜಾತಿಗಣತಿ ವರದಿ ಬಿಡುಗಡೆ ಮಾಡೋದಾಗಿ ಹೇಳಿದ್ದಾರೆ. ಇಂಡಿಯಾ ಮೈತ್ರಿಕೂಟದ ಬಹುತೇಕ ಪಕ್ಷಗಳಿಂದ ಜಾತಿ ಗಣತಿಗೆ ಸಹಮತ ವ್ಯಕ್ತವಾಗಿದೆ.

ಇನ್ನು ಸಭೆಯಲ್ಲಿ ಜಾತಿಗಣತಿಗೆ ಸರ್ವಾನುಮತದಿಂದ ಒಪ್ಪಿಗೆ ಸಿಕ್ಕಿದೆ. ದೇಶದಲ್ಲಿ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ನಾಲ್ಕು ರಾಜ್ಯಗಳಲ್ಲಿ ಜಾತಿಗಣತಿಗೆ ಕಾಂಗ್ರೆಸ್ ಮುಂದಾಗಿದೆ. ಅಲ್ಲದೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ವರದಿ ತಯಾರಿಸಲು ಒತ್ತಾಯಿಸಲು ತೀರ್ಮಾನಿಸಲಾಗಿದೆ. ಸಭೆ ಬಳಿಕ ಮಾತನಾಡಿದ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜಾತಿಗಣತಿ ಮಾಡಲು ಪ್ರಧಾನಿ ಅಸಮರ್ಥರಾಗಿದ್ದಾರೆ..  ನಮ್ಮ 4 ಸಿಎಂಗಳ ಪೈಕಿ 3 ಮಂದಿ ಒಬಿಸಿ ವರ್ಗದವರು. ಬಿಜೆಪಿಯ 10 ಸಿಎಂಗಳ ಪೈಕಿ ಒಬ್ಬರು ಸಿಎಂ ಮಾತ್ರ ಒಬಿಸಿ ವರ್ಗದವರು ಎಂದರು.

ಜಾತಿಗಣತಿಗೆ ಕಾರಣವೂ ಇದೆ. ಎಲ್ಲ ರಂಗಗಳಲ್ಲೂ ಬಹುಸಂಖ್ಯಾತರು ಮತ್ತು ಬಲಾಢ್ಯರಿಂದಲೇ ಎಲ್ಲಾ ನಿರ್ಧಾರವಾಗುತ್ತಿದೆ. ಆಯಕಟ್ಟಿನ ಜಾಗಗಳಲ್ಲಿ ಕುಳಿತ ಪ್ರಬಲ ಜಾತಿಗಳ ಪ್ರಭಾವಿಗಳು ದುರ್ಬಲರ ಶೋಷಣೆ ಮಾಡ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಜಾತಿಗಣತಿಯಿಂದ ಎಲ್ಲರಿಗೂ ಸಮಾನ ಅವಕಾಶ ಸಾಧ್ಯತೆ ಸಿಗುವ ಸಾಧ್ಯತೆ ಇದೆ. ಸಮುದಾಯಗಳ ಸಂಖ್ಯಾಬಲವನ್ನು ಆಧರಿಸಿ ರಾಜಕೀಯ ಅಧಿಕಾರ ಹಂಚಿಕೆ ಮಾಡಬಹುದು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿಗಳಿಂದ ಸಂಪತ್ತಿನ ವಿತರಣೆ ವಿಷಯದಲ್ಲಿ ಸ್ಪಷ್ಟತೆ ಸಿಗುತ್ತೆ. ಜಾತಿಗಣತಿ ವರದಿ ಹೊರಬಿದ್ದರೆ ಪ್ರಾಬಲ್ಯ ಕಳೆದುಕೊಳ್ಳುವ ಭಯದಲ್ಲಿ ಪ್ರಭಾವಿಗಳಿದ್ದಾರೆ. ಹಿಂದುಳಿದ ವರ್ಗಗಳ ಜನರಿಗೆ ಹೆಚ್ಚಿನ ಸ್ಥಾನಮಾನ ಮತ್ತು ಪ್ರಾಶಸ್ತ್ಯ ಸಿಗುವ ಭಯ ಅವರಲ್ಲಿದೆ ಅಂತಾ ಒಂದಷ್ಟು ಚರ್ಚೆಯಾಗ್ತಿದೆ. ಬಿಜೆಪಿ ಸರ್ಕಾರದಿಂದಲೂ ರಾಷ್ಟ್ರವ್ಯಾಪಿ ಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ವ್ಯಕ್ತವಾಗಿದೆ. ಇದೇ ಕಾರಣಕ್ಕೆ 2011ರಲ್ಲಿ ಮಾಡಿರುವ ವರದಿಯನ್ನ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆ ಅನ್ನೋ ಆರೋಪ ಇದೆ. ಆದ್ರೆ ಯುಪಿಎ ಅವಧಿಯಲ್ಲೇ ಜಾತಿ ಗಣತಿ ಆಗಿದ್ರೂ, ಕಾಂಗ್ರೆಸ್ ಸರ್ಕಾರ ಕೂಡ ಜಾತಿಗಣತಿ ವರದಿ ರಿಲೀಸ್ ಮಾಡಲು ಹಿಂದೇಟು ಹಾಕಿದ್ದು ಯಾಕೆ ಅಂತಾ ಬಿಜೆಪಿ ನಾಯಕರು ತಿರುಗೇಟು ನೀಡ್ತಾ ಇದ್ದಾರೆ. ಅಷ್ಟೇ ಅಲ್ಲ, ಈಗ ಜಾತಿ ಹೆಸರಿನಲ್ಲಿ ವಿಪಕ್ಷಗಳು ದೇಶ ಒಡೆಯೋಕೆ ಮುಂದಾಗಿದೆ ಆರೋಪಿಸ್ತಿದೆ.

ಕೇಂದ್ರ ಸರ್ಕಾರ ಏನೇ ಹೇಳಿದ್ರೂ ಕಾಂಗ್ರೆಸ್ ಮಾತ್ರ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಜಾತಿಗಣತಿಯೊಂದೇ ಪರಿಹಾರ ಎಂದು ಪಟ್ಟು ಹಿಡಿದಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲೇ ಜನಗಣತಿಗೆ ಅಡಿ ಇಟ್ಟಿದೆ. ಕರ್ನಾಟಕದಲ್ಲೂ ನವೆಂಬರ್ ವೇಳೆಗೆ ಜಾತಿಗಣತಿ ವರದಿ ಬಿಡುಗಡೆ ಮಾಡೋದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದೆಲ್ಲಾ ಏನೇ ಇದ್ರೂ ಜಾತಿ ಸಮೀಕ್ಷೆಯಿಂದ ವಿವಿಧ ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ರಾಷ್ಟ್ರಮಟ್ಟದಲ್ಲಿ ಜಾತಿಗಣತಿ ನಡೆದು ವರದಿ ಬಿಡುಗಡೆಯಾದ್ರೆ ರಾಜಕೀಯ ಮಾತ್ರವಲ್ಲದೆ ಮೀಸಲಾತಿ ಸ್ವರೂಪ ಬದಲಾಗುವ ಸಾಧ್ಯತೆಯೂ ಇದೆ. ಆದ್ರೆ ಬಲಾಢ್ಯರ ವಿರೋಧದ ನಡುವೆಯೂ ಜಾತಿ ಸಮೀಕ್ಷೆ ವರದಿಯನ್ನ ಬಿಡುಗಡೆ ಮಾಡುವುದೇ ದೊಡ್ಡ ಸವಾಲು.

 

Shantha Kumari