ಮೋದಿ ಸ್ವಾಗತಕ್ಕೆ ಸಜ್ಜಾಯ್ತು ದಾವಣಗೆರೆ – ಹೆಜ್ಜೆ ಹೆಜ್ಜೆಗೂ ಪತಾಕೆ.. ಹೇಗಿದೆ ಗೊತ್ತಾ ಸಿದ್ಧತೆ..!?

ಮೋದಿ ಸ್ವಾಗತಕ್ಕೆ ಸಜ್ಜಾಯ್ತು ದಾವಣಗೆರೆ – ಹೆಜ್ಜೆ ಹೆಜ್ಜೆಗೂ ಪತಾಕೆ.. ಹೇಗಿದೆ ಗೊತ್ತಾ ಸಿದ್ಧತೆ..!?

ಬೆಣ್ಣೆನಗರಿ ಅಂತಾನೇ ಕರೆಸಿಕೊಳ್ಳುವ ದಾವಣಗೆರೆ ಇವತ್ತು ಅಕ್ಷರಶಃ ಕೇಸರಿಮಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಕೇಸರಿ ಪಾಳಯದಲ್ಲಿ ಹಲ್ ಚಲ್ ಸೃಷ್ಟಿಯಾಗಿದೆ. ನಗರದ ತುಂಬೆಲ್ಲಾ ಬಿಜೆಪಿ ನಾಯಕರ ಕಟೌಟ್ ಗಳು ರಾರಾಜಿಸುತ್ತಿವೆ.

ಮಾರ್ಚ್ 25 ರಂದು ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ದಾವಣಗೆರೆ ಜಿಎಂ ಐಟಿ ಕ್ಯಾಂಪಸ್​ಗೆ(Davanagere IIT Campus) ಆಗಮಿಸಲಿದ್ದಾರೆ. ‌ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ(JP Nadda) ಆರಂಭಿಸಿದ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಕಾರ್ಯಕ್ರಮ ದಾವಣಗೆರೆಯಲ್ಲಿ ನಡೆಯಲಿದೆ. ಅಂದಾಜು 10 ಲಕ್ಷ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ. ಮಿಷನ್‌ 150 ಗುರಿಯೊಂದಿಗೆ ರಾಜ್ಯದ 4 ದಿಕ್ಕುಗಳಿಂದ ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿತ್ತು. ಮಾ.1ರಂದು ಮಲೆ ಮಾದೇಶ್ವರ ಬೆಟ್ಟ, ಮಾ.2ರಂದು ಸಂಗೊಳ್ಳಿ ರಾಯಣ್ಣನ ಸ್ಮಾರಕದ ನಂದಗಢದಿಂದ, ಮಾ.3ಕ್ಕೆ ಬಸವ ಕಲ್ಯಾಣದಿಂದ, ಅದೇ ದಿನ ಕೆಂಪೇಗೌಡರ ಜನ್ಮಸ್ಥಳ ಅವತಿ ದೇವನಹಳ್ಳಿಯಿಂದ ರಥಯಾತ್ರೆ ಆರಂಭವಾಗಿದ್ದು, ಸುಮಾರು 5,600 ಕಿಲೋ ಮೀಟರ್ ಕ್ರಮಿಸಿ ರಥಯಾತ್ರೆಗಳು ದಾವಣಗೆರೆಯಲ್ಲಿ ಮಹಾ ಸಂಗಮವಾಗಲಿವೆ.

ಇದನ್ನೂ ಓದಿ : ಅಮಿತ್ ಶಾಗೆ ಹೂಗುಚ್ಛ ನೀಡಿ ಉಪಹಾರ ಬಡಿಸಿದ ವಿಜಯೇಂದ್ರ – ಕೇಸರಿ ಪಾಳಯದಲ್ಲಿ ಅದೆಷ್ಟು ಲೆಕ್ಕಾಚಾರ?

ಮಹಾ ಸಂಗಮ ಸಮಾವೇಶಕ್ಕೆ ಬಂದ ಜನರಿಗಾಗಿ ಉಪಹಾರ, ಊಟದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 400 ಕೌಂಟರ್‌ ತೆರೆದಿದ್ದು, 1 ಸಾವಿರ ಬಾಣಸಿಗರು ಅಡುಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟು-ಕೇಸರಿ ಬಾತ್‌, ಮಧ್ಯಾಹ್ನದ ಊಟಕ್ಕೆ ಗೋಧಿ ಪಾಯಸ, ಪಲಾವ್‌, ಮೊಸರನ್ನದ ವ್ಯವಸ್ಥೆ ಇರುತ್ತದೆ. ಬೇಸಿಗೆಯಾದ್ದರಿಂದ 8-10 ಲಕ್ಷ ಜನರಿಗೆ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ವಾಹನಗಳ ನಿಲುಗಡೆಗೆ ಸುಮಾರು 44 ಸ್ಥಳಗಳನ್ನ ಗುರುತಿಸಲಾಗಿದ್ದು, 500 ಎಕರೆ ಜಾಗದಲ್ಲಿ ಪಾರ್ಕಿಂಗ್‌ಗೆ ಅನುಕೂಲ ಮಾಡಿಕೊಡಲಾಗಿದೆ.

ಮೋದಿ ಸಮಾವೇಶದ ಹಿನ್ನೆಲೆಯಲ್ಲಿ ದಾವಣಗೆರೆ, ಹರಿಹರದ ಬಹುತೇಕ ಎಲ್ಲಾ ಲಾಡ್ಜ್‌ಗಳು ಬುಕ್‌ ಆಗಿವೆ. ಬಿಐಇಟಿ ಗೆಸ್ಟ್‌ ಹೌಸ್‌ ವಿವಿಐಪಿಗಳಿಗೆ ಕಾಯ್ದಿರಿಸಿದೆ. ಪ್ರತಿಷ್ಠಿತ ಹೋಟೆಲ್‌ಗಳು, ಪ್ರವಾಸಿ ಮಂದಿರ, ಸರ್ಕ್ಯೂಟ್‌ ಹೌಸ್‌ಗಳು ಸಚಿವರು, ನಾಯಕರ ಹೆಸರಿಗೆ ಬುಕ್‌ ಆಗಿವೆ. ಬಂದಂತಹ ಕಾರ್ಯಕರ್ತರಿಗೆ ಕಲ್ಯಾಣ ಮಂಟಪಗಳಲ್ಲಿ ವಸತಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 10 ಸಾವಿರಕ್ಕೂ ಅಧಿಕ ಬಸ್‌ಗಳು, ಇನ್ನೋವಾ, ಕ್ರೂಸರ್‌, ಟಿಟಿ, ಕ್ರೂಸರ್‌, ಮಿನಿ ಬಸ್‌, ಖಾಸಗಿ ಬಸ್‌ಗಳು, ಖಾಸಗಿ ವಾಹನಗಳ ಮೂಲಕ, ರೈಲುಗಳ ಮೂಲಕವೂ ಜನ ದಾವಣಗೆರೆಯತ್ತ ಬರಲಿದ್ದಾರೆ. 25-30 ಸಾವಿರಕ್ಕೂ ಅಧಿಕ ಬೈಕ್‌ಗಳಲ್ಲಿ 45-50 ಸಾವಿರಕ್ಕೂ ಅಧಿಕ ಜನರು ಬರುವ ಸಾಧ್ಯತೆ ಇದೆ.

suddiyaana