ರಾಜ್ಯದ ಯುವಜನತೆಯ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ – ದೀದಿ ವಿರುದ್ಧ ಮೋದಿ ವಾಗ್ದಾಳಿ

ರಾಜ್ಯದ ಯುವಜನತೆಯ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ – ದೀದಿ ವಿರುದ್ಧ ಮೋದಿ  ವಾಗ್ದಾಳಿ

ಪಶ್ಚಿಮ ಬಂಗಾಳದ  ಆಡಳಿತಾರೂಢ ತೃಣಮೂಲ ಕಾಂಗ್ರೆಸ್  ವಿರುದ್ಧ   ಪ್ರಧಾನಿ  ಮೋದಿ  ತೀವ್ರ ವಾಗ್ದಾಳಿ ನಡೆಸಿದ್ದು, ಅಕ್ರಮ ವಲಸಿಗರನ್ನು ಆಹ್ವಾನಿಸುವ ಮೂಲಕ ರಾಜ್ಯದ ಯುವಜನತೆಯ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ  ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಅವರ ವಿರುದ್ಧ ಹೆಸರನ್ನು ಉಲ್ಲೇಖಿಸದೇ ಮೋದಿ ಈ ಟೀಕೆ ಮಾಡಿದ್ದಾರೆ.

ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ರಾಜ್ಯಸಭೆಯಲ್ಲಿ ಉತ್ತರಿಸಿದ ಪ್ರಧಾನಿ ಮೋದಿ, “ವಿಶ್ವದ ಹಲವು ರಾಷ್ಟ್ರಗಳು ಅಕ್ರಮ ವಲಸಿಗರನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದರೆ, ಇಲ್ಲಿ ಕೆಲವರು ಅವರ ಪರವಾಗಿ ನ್ಯಾಯಾಲಯದಲ್ಲಿ ವಾದಿಸುತ್ತಿದ್ದಾರೆ. ನಿಮ್ಮದೇ ಜನರ ಹಕ್ಕುಗಳು ಮತ್ತು ಉದ್ಯೋಗಗಳನ್ನು ಕಸಿದುಕೊಳ್ಳುತ್ತಿರುವ ಅಕ್ರಮ ನುಸುಳುಕೋರರ ಪರವಾಗಿ ನೀವು ಕೋರ್ಟ್‌ಗೆ ಹಾಜರಾಗುತ್ತೀರಿ” ಎಂದು ಕಿಡಿಕಾರಿದರು.

ಇದನ್ನೂ ಓದಿ: ನಮ್ಮ ಮೆಟ್ರೋ ದರ ಏರಿಕೆ ಬೆನ್ನಲ್ಲೇ ಕೇಂದ್ರ ಸಚಿವರನ್ನು ಭೇಟಿಯಾದ ತೇಜಸ್ವಿ ಸೂರ್ಯ! – ಮೆಟ್ರೋ ದರ ಮತ್ತೆ ಪರಿಷ್ಕರಣೆಯಾಗುತ್ತಾ?

ಕಾಂಗ್ರೆಸ್, ಟಿಎಂಸಿ ಮತ್ತು ಎಡಪಕ್ಷಗಳು ದಶಕಗಳ ಕಾಲ ಅಧಿಕಾರದಲ್ಲಿದ್ದರೂ ಕೇವಲ ತಮ್ಮ ಖಜಾನೆ ತುಂಬಿಸಿಕೊಂಡಿವೆಯೇ ಹೊರತು ಜನರಿಗಾಗಿ ಯಾವ ಕೆಲಸವನ್ನೂ ಮಾಡಿಲ್ಲʼʼ ಎಂದು ಅವರು ಆರೋಪಿಸಿದರು. ಬುಧವಾರ (ಫೆಬ್ರವರಿ 4) ಸುಪ್ರೀಂ ಕೋರ್ಟ್‌ನಲ್ಲಿ ಸ್ವತಃ ತಾವೇ ವಾದ ಮಂಡಿಸಿದ ಮೊದಲ ಹಾಲಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಮಮತಾ ಬ್ಯಾನರ್ಜಿ ಪಾತ್ರರಾದರು. ಪಶ್ಚಿಮ ಬಂಗಾಳವನ್ನು ಗುರಿ ಮಾಡಲಾಗುತ್ತಿದೆ ಮತ್ತು ಜನರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಅವರು ‘SIR’ ಪ್ರಕ್ರಿಯೆ ವಿರೋಧವಾಗಿ ವಾದ ಮಂಡಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯನ್ನು ಪ್ರಶ್ನಿಸಿರುವ ಬ್ಯಾನರ್ಜಿ, “ತಾರ್ಕಿಕ ವ್ಯತ್ಯಾಸ” ಇರುವ ಪ್ರಕರಣಗಳಲ್ಲಿ ಇತರೆ ದಾಖಲೆಗಳನ್ನು ನೀಡುವಂತೆ ಒತ್ತಾಯಿಸದೇ, ಆಧಾರ್ ಕಾರ್ಡ್‌ನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಮಮತಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

Kishor KV