ನಾಳೆ ಮಂಡ್ಯಕ್ಕೆ ಪ್ರಧಾನಿ ಮೋದಿ ಭೇಟಿ – ಪೊಲೀಸ್ ಬಿಗಿ ಭದ್ರತೆ! ಹೇಗಿದೆ ಗೊತ್ತಾ ತಯಾರಿ

ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 15ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡುತ್ತಿದ್ದು, ಅಲ್ಲಿ ಬಾಲಗಂಗಾಧರನಾಥ ಶ್ರೀಗಳ ಗದ್ದುಗೆ ಉದ್ಘಾಟನೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ನೂತನ ಗದ್ದಿಗೆ ಉದ್ಘಾಟಿಸಲಿರುವ ಅವರು, ನಂತರ ಕೇರಳಕ್ಕೆ ಪ್ರಯಾಣಿಸಲಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಗುಡ್ನ್ಯೂಸ್! – ಇನ್ಮುಂದೆ ಪ್ರತಿ 5 ನಿಮಿಷಕ್ಕೊಂದು ರೈಲು ಸಂಚಾರ!
ಬೆಳಿಗ್ಗೆ ದೆಹಲಿಯಿಂದ ಹೊರಟು ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಆದಿಚುಂಚನಗಿರಿ ಹೆಲಿಪ್ಯಾಡ್ಗೆ ಸುಮಾರು 10:50ಕ್ಕೆ ತಲುಪಲಿದ್ದಾರೆ. ಬಳಿಕ ರಸ್ತೆ ಮಾರ್ಗವಾಗಿ ಮಠಕ್ಕೆ ತೆರಳಿ, ಬೆಳಗ್ಗೆ 11 ಗಂಟೆಗೆ ಮಾಜಿ ಪೀಠಾಧಿಪತಿ ಬಾಲಗಂಗಾಧರನಾಥ ಸ್ವಾಮಿ ಅವರ ನೂತನ ಗದ್ದಿಗೆ (ಮಂದಿರ) ಉದ್ಘಾಟನೆ ನೆರವೇರಿಸಲಿದ್ದಾರೆ. ನಂತರ BGS ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದ್ದು, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ಅವರು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಮರಳಿ ಅಲ್ಲಿಂದ ಕೇರಳಕ್ಕೆ ಪ್ರಯಾಣ ಮುಂದುವರಿಸಲಿದ್ದಾರೆ.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
ಪ್ರಧಾನಿ ಭೇಟಿ ಹಿನ್ನೆಲೆ ಜಿಲ್ಲಾಧಿಕಾರಿ ಕುಮಾರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆದಿದ್ದು, ಭದ್ರತೆ, ಪ್ರೋಟೋಕಾಲ್ ಹಾಗೂ ಲಾಜಿಸ್ಟಿಕ್ಸ್ ವ್ಯವಸ್ಥೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲಾಗಿದೆ. ಕಾರ್ಯಕ್ರಮ ಸ್ಥಳದ ಸಮೀಪ ಮೂರು ಹೆಲಿಪ್ಯಾಡ್ಗಳ ನಿರ್ಮಾಣ, ವಿಶೇಷ ಗ್ರೀನ್ ರೂಂ ಸಿದ್ಧತೆ, ನಿರಂತರ ವಿದ್ಯುತ್ ಪೂರೈಕೆ ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ, ಎಸ್ಪಿ ವಿ.ಜೆ. ಶೋಭಾರಾಣಿ ಹಾಗೂ ಎಡಿಸಿ ಬಿ.ಸಿ. ಶಿವಾನಂದ ಮೂರ್ತಿ ಉಪಸ್ಥಿತರಿದ್ದರು.
ಪೊಲೀಸರ ಹದ್ದಿನ ಕಣ್ಣು
ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಮಂಡ್ಯ ಪೊಲೀಸರು ಸಜ್ಜಾಗಿದ್ದಾರೆ. 05 ಎಸ್.ಪಿ, 10 ಎಎಸ್.ಪಿ ಮತ್ತು 15 ಡಿವೈಎಸ್.ಪಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಲಿದೆ. ಬರೋಬ್ಬರಿ 1700ಕ್ಕೂ ಹೆಚ್ಚು ಕಾನ್ಸ್ಟೇಬಲ್ಗಳು, 40 ಇನ್ಸ್ಪೆಕ್ಟರ್ಗಳು ಮತ್ತು 151 ಪಿಎಸ್ಐಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. 08 ಕೆಎಸ್ಆರ್ಪಿ ತುಕಡಿಗಳು, 10 ಡಿಎಆರ್ ಮತ್ತು ಕ್ಯೂಆರ್ ಟಿ ತಂಡಗಳು ಹದ್ದಿನ ಕಣ್ಣಿಟ್ಟಿವೆ.
ಪ್ರಧಾನಿಗಳ ವಿಶೇಷ ವಿಮಾನಕ್ಕಾಗಿ ಕ್ಷೇತ್ರದಲ್ಲಿ ಹೈಟೆಕ್ ಹೆಲಿಪ್ಯಾಡ್ ಸಿದ್ಧಗೊಂಡಿದೆ. ಕೇವಲ ಮಂದಿರ ಉದ್ಘಾಟನೆಯಷ್ಟೇ ಅಲ್ಲ, ಮೋದಿಯವರು ಶ್ರೀಗಳ ಗದ್ದುಗೆಗೆ ನಮಸ್ಕರಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕಾಗಿ ಭವ್ಯವಾದ ವೇದಿಕೆ ಸಜ್ಜಾಗಿದ್ದು, ಪ್ರತಿಯೊಬ್ಬ ಭಕ್ತನನ್ನೂ ತಪಾಸಣೆ ಮಾಡಿದ ನಂತರವೇ ಒಳಗೆ ಬಿಡಲಾಗುತ್ತಿದೆ.

ನೋಡಿರಿ

