ಗಾಂಧಿ ಜಯಂತಿ ಹಿನ್ನೆಲೆ ರಾಜ್‌ಘಾಟ್‌ನಲ್ಲಿ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ, ದ್ರೌಪದಿ ಮುರ್ಮು

ಗಾಂಧಿ ಜಯಂತಿ ಹಿನ್ನೆಲೆ ರಾಜ್‌ಘಾಟ್‌ನಲ್ಲಿ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ, ದ್ರೌಪದಿ ಮುರ್ಮು

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 154 ನೇ ಜನ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ  ಮುರ್ಮು ಸೇರಿದಂತೆ ಹಲವು ಗಣ್ಯರು ದೆಹಲಿಯ ರಾಜ್‌ಘಾಟ್‌ಗೆ ತೆರಳಿ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಾತ್ಮ ಗಾಂಧೀಜಿ ಅಳಿಸಲಾಗದ ಪ್ರಮುಖ ಪಾತ್ರವನನ್ನು ವಹಿಸಿದ್ದಾರೆ. ಭಾರತವನ್ನು ವಸಾಹತುಶಾಹಿ ಆಡಳಿತದಿಂದ ಮುಕ್ತಗೊಳಿಸಲು ಹಲವು ಹೋರಾಟಗಳನ್ನು ಮುನ್ನಡೆಸಿದ್ದರು. ಅವರು ಅನೇಕರ ಜೀವನದಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 6,500 ಶ್ರೀಮಂತರನ್ನು ಕಳೆದುಕೊಳ್ಳಲಿದೆ ಭಾರತ! – ಉದ್ಯಮಿಗಳು ವಿದೇಶಗಳತ್ತ ಮುಖ ಮಾಡಿದ್ದೇಕೆ?  

ಇನ್ನು ಪ್ರಧಾನಿ ಮೋದಿ ಅವರು ಗಾಂಧೀಜಿ ಕುರಿತು ಟ್ವೀಟ್ ಮಾಡಿದ್ದು, ಗಾಂಧಿ ಜಯಂತಿಯ ವಿಶೇಷ ಸಂದರ್ಭದಲ್ಲಿ ನಾನು ಮಹಾತ್ಮ ಗಾಂಧಿ ಅವರಿಗೆ ನಮಸ್ಕರಿಸುತ್ತೇನೆ. ಅವರ ಕಾಲಾತೀತ ಬೋಧನೆಗಳು ನಮ್ಮ ಹಾದಿಯನ್ನು ಬೆಳಗಿಸುತ್ತಲೇ ಇರುತ್ತವೆ. ಅವರ ಕನಸುಗಳನ್ನು ನನಸಾಗಿಸಲು ನಾವು ಯಾವಾಗಲೂ ಕೆಲಸ ಮಾಡೋಣ, ಎಲ್ಲರೂ ಏಕತೆ ಮತ್ತು ಸೌಹಾರ್ದತೆಯನ್ನು ಬೆಳೆಸಿಕೊಳ್ಳಲಿ ಎಂದು ಹೇಳಿದ್ದರು.

ಮಹಾತ್ಮ ಗಾಂಧಿಯವರ ಅಹಿಂಸೆ ಮತ್ತು ಸಹಿಷ್ಣುತೆಯ ಮೌಲ್ಯಗಳನ್ನು ಗೌರವಿಸಲು ಈ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಇಂದು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರ ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿಜಯ ಘಾಟ್‌ನಲ್ಲಿ ಪುಷ್ಪ ಪ್ರಧಾನಿ ಮೋದಿ ನಮನ ಸಲ್ಲಿಸಿದರು. ಮಾಜಿ ಪ್ರಧಾನಿ  ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕುರಿತು ಟ್ವೀಟ್‌ ಮಾಡಿದ್ದು,  ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಅವರನ್ನು ಸ್ಮರಿಸುತ್ತಿದ್ದೇವೆ. ಅವರ ಸರಳತೆ, ದೇಶಕ್ಕಾಗಿ ಸಮರ್ಪಣೆ ಮತ್ತು ‘ಜೈ ಜವಾನ್, ಜೈ ಕಿಸಾನ್’ ಎಂಬ ಸಾಂಪ್ರದಾಯಿಕ ಕರೆ ಇಂದಿಗೂ ಪ್ರತಿಧ್ವನಿಸುತ್ತದೆ, ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಭಾರತದ ಪ್ರಗತಿಗೆ ಅವರ ಅಚಲ ಬದ್ಧತೆ ಮತ್ತು ಸವಾಲಿನ ಸಮಯದಲ್ಲಿ ಅವರ ನಾಯಕತ್ವವು ಅನುಕರಣೀಯವಾಗಿದೆ. ಬಲಿಷ್ಠ ಭಾರತಕ್ಕಾಗಿ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸಲು ನಾವು ಯಾವಾಗಲೂ ಕೆಲಸ ಮಾಡೋಣ’ ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ ರಾಜ್‌ಘಾಟ್‌ನಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಪಕ್ಷದ ಇತರ ಮುಖಂಡರು ಪುಷ್ಪ ನಮನ ಸಲ್ಲಿಸಿದರು.

 

Shwetha M