ಅತ್ಯಾಧುನಿಕ ಅಯೋಧ್ಯೆ ರೈಲು ನಿಲ್ದಾಣಕ್ಕೆ ನಮೋ ಚಾಲನೆ – ಏನಿದರ ವಿಶೇಷತೆ?

ಅತ್ಯಾಧುನಿಕ ಅಯೋಧ್ಯೆ ರೈಲು ನಿಲ್ದಾಣಕ್ಕೆ ನಮೋ ಚಾಲನೆ – ಏನಿದರ ವಿಶೇಷತೆ?

ಜನವರಿ 22ರಂದು ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೀತಾ ಇದೆ. ಜನವರಿ  23ರ ಬಳಿಕ ಶ್ರೀರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ನಿತ್ಯವೂ ಲಕ್ಷಾಂತರ ಭಕ್ತರು ಭೇಟಿ ನೀಡಲಿದ್ದಾರೆ. ಅಯೋಧ್ಯೆ ಕೇವಲ ಭಕ್ತಿ ಕೇಂದ್ರವಷ್ಟೇ ಅಲ್ಲ, ಟೂರಿಸಂ ಹಬ್ ಕೂಡ ಆಗಲಿದೆ. ಹೀಗಾಗಿ ಮರ್ಯಾದಾ ಪುರುಷೋತ್ತಮನ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಮೊದಲ ಹಂತದಲ್ಲಿ ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ರೈಲು ನಿಲ್ದಾಣವನ್ನ ಉದ್ಘಾಟಿಸಿದ್ದಾರೆ. ಅಯೋಧ್ಯೆ ರೈಲು ನಿಲ್ದಾಣದ ವಿಶೇಷತೆ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಅಯೋಧ್ಯೆಯಲ್ಲಿ ರೈಲು ನಿಲ್ದಾಣ ಈ ಹಿಂದೆಯೇ ಇತ್ತು. ಆದ್ರೆ, ಅಯೋಧ್ಯೆ ಭೂಮಿ ವಿವಾದ ಕೋರ್ಟ್​ನಲ್ಲಿ ಇದ್ದಿದ್ರಂದ ಅಯೋಧ್ಯೆಗೆ ಅಷ್ಟಾಗಿ ಯಾರೂ ಭೇಟಿ ನೀಡ್ತಾ ಇರಲಿಲ್ಲ. ಹೀಗಾಗಿ ಅಯೋಧ್ಯೆ ರೈಲು ನಿಲ್ದಾಣದಲ್ಲಿ ಕೇವಲ ಒಂದು ಪ್ಲ್ಯಾಟ್​ಫಾರ್ಮ್ ಅಷ್ಟೇ ಇತ್ತು. ಆದ್ರೀಗ ರಾಮಮಂದಿರ ತಲೆ ಎತ್ತಿ ನಿಂತಿದೆ. ಕೋಟ್ಯಂಯತರ ಭಕ್ತರು ಶ್ರೀರಾಮನ ದರ್ಶನಕ್ಕಾಗಿ ಕಾಯ್ತಾ ಇದ್ದಾರೆ. ಹೀಗಾಗಿ ಹಳೆಯ ರೈಲು ನಿಲ್ದಾಣದ ಚಿತ್ರಣವನ್ನೇ ಬದಲಿಸಲಾಗಿದೆ. ಅತ್ಯಾಧೂನಿಕ ನೂತನ ರೈಲು ನಿಲ್ದಾಣ ನಿರ್ಮಾಣಗೊಂಡಿದೆ.

ಇದನ್ನೂ ಓದಿ: ಅತ್ಯಾಧುನಿಕ ಅಯೋಧ್ಯೆ ರೈಲು ನಿಲ್ದಾಣ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ – ವಂದೇ ಭಾರತ್ ರೈಲುಗಳಿಗೂ ಚಾಲನೆ

ಅಯೋಧ್ಯಾ ಧಾಮ್ ಜಂಕ್ಷನ್ ಅಂತಾ ರೈಲು ನಿಲ್ದಾಣಕ್ಕೆ ಹೆಸರಿಡಲಾಗಿದೆ.  ರಾಮಮಂದಿರದ ವಾಸ್ತುಶಿಲ್ಪ ಶೈಲಿಯನ್ನೇ ಹೋಲುವಂತೆ ಈ ರೈಲು ನಿಲ್ದಾಣವನ್ನ ನಿರ್ಮಿಸಲಾಗಿದೆ. ಸುಮಾರು 11,414 ಸ್ಕ್ವೇರ್ ಮೀಟರ್​ನಲ್ಲಿ ರೈಲು ನಿಲ್ದಾಣ ನಿರ್ಮಾಣವಾಗಿದೆ. ರೈಲು ನಿಲ್ದಾಣದ ಮೇಲ್ಬಾಗದಲ್ಲಿರುವ ಡೋಮ್​ ಶ್ರೀರಾಮನ ಕಿರೀಟದ ಮುಕುಟವನ್ನೇ ಹೋಲುವಂತಿದೆ. ಹಾಗೆಯೇ ಸ್ಟೇಷನ್ ಮೇಲಿರುವ ಎರಡು ಶಿಖರಗಳು ಜಾನಕಿ ದೇವಾಲಯದ ಸಂಕೇತ. ಅಷ್ಟೇ ಅಲ್ಲ, ರೈಲು ನಿಲ್ದಾಣದಲ್ಲಿ 7 ಮಂಡಲಗಳು ಕೂಡ ಇವೆ. 240 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರೋ ಈ ಅತ್ಯಾಧುನಿಕ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳು ಕೂಡ ಇವೆ.

ಫುಡ್ ಪ್ಲಾಜಾ, ವೇಟಿಂಗ್ ಹಾಲ್, ಕುಡಿಯುವ ನೀರಿನ ಸ್ಟೇಷನ್, ಎಸ್ಕಲೇಟರ್, ಲಿಫ್ಟ್, ಸ್ಟಾಫ್ ರೂಮ್, ಶಾಪ್ಸ್ ಇವೆಲ್ಲವೂ ಅಯೋಧ್ಯಾ ಧಾಮ್ ರೈಲು ನಿಲ್ದಾಣದಲ್ಲಿದೆ. ಅಷ್ಟೇ ಅಲ್ಲ, ಅನಾರೋಗ್ಯಕ್ಕೊಳಗಾದ್ರೆ ಪ್ರಾಥಮಿಕ ಹಂತದ ಚಿಕಿತ್ಸೆ ನೀಡೋಕೆ ಅಂತಾ ಪ್ರತ್ಯೇಕ ರೂಮ್​​ ಕೂಡ ಇದೆ. 24 ಗಂಟೆಯೂ ವೈದ್ಯರ ಸೇವೆ ಸಿಗುತ್ತೆ. ಆಗಮನ ಮತ್ತು ನಿರ್ಗಮನಕ್ಕಾಗಿ ಪ್ರತ್ಯೇಕ ಮಾರ್ಗಗಳಿವೆ. ಟ್ಯಾಕ್ಸಿಗಳ ನಿಲುಗಡೆಗೆ ಅಂತಾನೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಒಟ್ಟು ಮೂರು ಅಂತಸ್ತಿನ ರೈಲು ನಿಲ್ದಾಣ ಇದಾಗಿದ್ದು, ಎಲ್ಲಾ ಫ್ಲೋರ್​ಗಳಿಗೂ ಅಗ್ನಿಶಾಮಕ ವಾಹನ ತಲುಪುವಂಥಾ ವ್ಯವಸ್ಥೆ ಇದೆ. ಹೀಗಾಗಿ ಸೇಫ್ಟಿ ವಿಚಾರದಲ್ಲೂ ಕೂಡ ತುಂಬಾನೆ ಎಚ್ಚರಿಕೆ ವಹಿಸಲಾಗಿದೆ. ಇನ್ನು ಇಡೀ ರೈಲು ನಿಲ್ದಾಣವನ್ನ ಪರಿಸರ ಸ್ನೇಹಿಯಾಗಿಯೇ ಕಟ್ಟಲಾಗಿದೆ. ಒಂದೇ ಮಾತಲ್ಲಿ ಹೇಳೋದಾದ್ರೆ ಅಯೋಧ್ಯಾ ಧಾಮ್ ರೈಲು ನಿಲ್ದಾಣ ಅಕ್ಷರಶ: ಏರ್​ಪೋರ್ಟ್​ನಂತೆಯೇ ಇದೆ. ವಿಮಾನ ನಿಲ್ದಾಣಕ್ಕೆ ಬಂದೆವೋ, ರೈಲು ನಿಲ್ದಾಣಕ್ಕೆ ಬಂದಿದ್ದೀವೋ ಅಂತಾ ಒಂದ್ಸಲ ಪ್ರಯಾಣಿಕರು ಕನ್​​ಫ್ಯೂಸ್ ಆಗೋದಂತೂ ಗ್ಯಾರಂಟಿ.

ಇನ್ನು ಅಯೋಧ್ಯೆಗೆ ತೆರಳೋಕೆ ಅಂತಾನೆ ಭಾರತೀಯ ರೈಲ್ವೆ ಅಮೃತ್ ಭಾರತ್ ಟ್ರೈನ್ ಅನ್ನೋ ಹೊಸ ರೈಲಿನ ವ್ಯವಸ್ಥೆ ಕೂಡ ಮಾಡಿದೆ. ಈ ರೈಲಿನಲ್ಲಿ ಒಟ್ಟು ಎರಡು ಇಂಜಿನಿಗಳಿದ್ದು, ಅತ್ಯಂತ ವೇಗವಾಗಿ ಚಲಿಸುತ್ತೆ. ಹಾಗೆಯೇ ಪ್ರಯಾಣ ಕೂಡ ಆರಾಮವಾಗಿಯೇ ಇರುತ್ತೆ. ಈ ರೈಲಿನಲ್ಲಿ ಸಿಸಿಕ್ಯಾಮರಾ ಸೇರಿದಂತೆ ಸುರಕ್ಷತಾ ಕ್ರಮಗಳನ್ನ ಕೂಡ ಕೈಗೊಳ್ಳಲಾಗಿದೆ. ಅಮೃತ್ ಭಾರತ್ ರೈಲಿನಲ್ಲಿ ಒಟ್ಟು 22 ಬೋಗಿಗಗಳಿವೆ. ಈ ಪೈಕಿ 12 ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್ ಮತ್ತು 8 ಜನರಲ್ ಕ್ಲಾಸ್ ಕೋಚ್​ಗಳಿವೆ. ಪ್ರತಿ ಸೀಟ್​ನ ಬಳಿಯೂ ಸೂಟೆಬಲ್ ಹೋಲ್ಡರ್ ಜೊತೆಗೆ ಮೊಬೈಲ್ ಚಾರ್ಜಿಂಗ್ ಪ್ಲಗ್ ಇದೆ. ದೆಹಲಿ, ಅಯೋಧ್ಯೆ, ಪಶ್ಚಿಮ ಬಂಗಾಳ ಮತ್ತು ಬೆಂಗಳೂರಿನ ಮಧ್ಯೆ ಎರಡು ಅಮೃತ್​ಭಾರತ್​ ರೈಲುಗಳ ಸಂಚಾರ ಈಗಾಗ್ಲೇ ಶುರುವಾಗಿದೆ. ಅಷ್ಟೇ ಅಲ್ಲ, ಅಯೋಧ್ಯೆಗೆ ತೆರಳೋಕೆ ವಂದೇ ಭಾರತ್ ರೈಲುಗಳ ಸಂಚಾರ ಕೂಡ ಅರಂಭವಾಗಿದೆ. ಅಯೋಧ್ಯೆ – ದೆಹಲಿ, ಬಳಿಕ ಜಮ್ಮು ಕಾಶ್ಮೀರದಲ್ಲಿದಲ್ಲಿರುವ ಶ್ರೀ ಮಾತಾ ವೈಷ್ಣೋದೇವಿ ದೇಗುಲಕ್ಕೂ ವಂದೇ ಭಾರತ್ ರೈಲು ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ.

Shwetha M