ರಸ್ತೆ ರಸ್ತೆಗಳಲ್ಲೂ ರಾರಾಜಿಸುತ್ತಿದೆ ‘ಕೇಸರಿ’ – ಬೆಳಗಾವಿಯಲ್ಲಿ ಹೇಗಿದೆ ಮೋದಿ ಚುನಾವಣಾ ರಣತಂತ್ರ..?

ರಸ್ತೆ ರಸ್ತೆಗಳಲ್ಲೂ ರಾರಾಜಿಸುತ್ತಿದೆ ‘ಕೇಸರಿ’ – ಬೆಳಗಾವಿಯಲ್ಲಿ ಹೇಗಿದೆ ಮೋದಿ ಚುನಾವಣಾ ರಣತಂತ್ರ..?

ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗದಿದ್ರೂ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅದ್ರಲ್ಲೂ ಬಿಜೆಪಿಯಂತೂ ಪ್ರಧಾನಿ ನರೇಂದ್ರ ಮೋದಿಯವರನ್ನೇ ಅಸ್ತ್ರವಾಗಿ ಪ್ರಯೋಗ ಮಾಡ್ತಿದ್ದು, ಇವತ್ತು ಕೂಡ ಶಕ್ತಿಪ್ರದರ್ಶನಕ್ಕೆ ಮುಂದಾಗಿದೆ. ಇವತ್ತು ಶಿವಮೊಗ್ಗದ ನೂತನ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ ಬಳಿಕ ಬೆಳಗಾವಿಯಲ್ಲಿ ರೋಡ್ ಶೋ ಮೂಲಕ ಬಿಜೆಪಿ ಗೆಲುವಿಗೆ ರಣತಂತ್ರ ರೂಪಿಸಲಿದ್ದಾರೆ.

ಮಧ್ಯಾಹ್ನ 2.15 ರಿಂದ 3.30 ರವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ಬೃಹತ್ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಲಿದ್ದಾರೆ. ರಾಜ್ಯದ ದೊಡ್ಡ ಜಿಲ್ಲೆ ಎನ್ನಲಾಗುವ ಬೆಳಗಾವಿ ವ್ಯಾಪ್ತಿಯೊಂದರಲ್ಲೇ 18 ವಿಧಾನಸಭಾ ಕ್ಷೇತ್ರಗಳಿವೆ. ಹೀಗಾಗಿ ಕಾರ್ಯಕ್ರಮಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಜನ ಸೇರಿಸಲು ಯೋಜಿಸಲಾಗಿದೆ. ಮೋದಿ ಭೇಟಿ ಹಿನ್ನೆಲೆ ಇಡೀ ಬೆಳಗಾವಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಬೆಳಗಾವಿಯ ಮುಖ್ಯ ರಸ್ತೆಗಳು ಸಂಪೂರ್ಣ ಕೇಸರಿಮಯವಾಗಿದೆ. ರಸ್ತೆಯೂದ್ದಕ್ಕೂ ಬಿಜೆಪಿ ಬಾವುಟ ಮತ್ತು ಭಗವಾ ದ್ವಜ ರಾರಾಜಿಸುತ್ತಿವೆ. ರಸ್ತೆ ಪಕ್ಕದ ಬ್ಯಾರಿಕೇಡ್ ಗೆ ಮತ್ತು‌ ರಸ್ತೆ ಮಧ್ಯದ ವಿದ್ಯುತ್ ದೀಪಗಳ ಕಂಬಕ್ಕೆ ಕೇಸರಿ ಬಟ್ಟೆ ಕಟ್ಟಿ ಸಿಂಗರಿಸಲಾಗಿದೆ.

ಇದನ್ನೂ ಓದಿ : ಮಲೆನಾಡಿಗರ ದಶಕಗಳ ಕನಸು ಕೊನೆಗೂ ನನಸು – ನೂತನ ವಿಮಾನ ನಿಲ್ದಾಣಕ್ಕೆ ಬಂದಿಳಿದ ‘ನಮೋ’!

ಬೆಳಗಾವಿಯ ಯಡಿಯೂರಪ್ಪ ರಸ್ತೆಯಲ್ಲಿರುವ ಮಾಲಿನಿ ಸಿಟಿಯಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಸಮಾವೇಶದ ವೇದಿಕೆಗೆ ಆಗಮಿಸುವ ಮುನ್ನ ಪ್ರಧಾನಿ ಮೋದಿ ರೋಡ್​ ಶೋ ಮಾಡಲಿದ್ದಾರೆ. ಚೆನ್ನಮ್ಮ ಸರ್ಕಲ್​ನಿಂದ 10.7 ಕಿ.ಮೀ ರೋಡ್ ಶೋ ನಡೆಯಲಿದೆ. ರೋಡ್ ಶೋ ಬಳಿಕ ವೇದಿಕೆಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕಿಸಾನ್ ಸಮ್ಮಾನ್​ ಯೋಜನೆಯ ದೇಶದ 8 ಕೋಟಿ ರೈತರಿಗೆ 16 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಿದ್ದಾರೆ.

ಸುಮಾರು 2 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. 50 ಎಕರೆ ಪ್ರದೇಶದಲ್ಲಿ ಮೂರು ಕಡೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ಸಮಾವೇಶಕ್ಕೆ ಬರುವ ಜನರಿಗೆ 1,500ಕ್ಕೂ ಹೆಚ್ಚು ಬಸ್​​ಗಳ​​ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ ನಗರದ ಹಲವೆಡೆ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ನಿಪ್ಪಾಣಿಯಿಂದ ಖಾನಾಪುರ, ಗೋವಾಕ್ಕೆ ತೆರಳುವ ಮಾರ್ಗ ಬದಲಾವಣೆ ಮಾಡಲಾಗಿದೆ. ಬಾಕ್ಸೈಟ್ ರಸ್ತೆ, ಹಿಂಡಲಗಾ ಗಣಪತಿ ದೇವಸ್ಥಾನ, ಶೌರ್ಯ ಸರ್ಕಲ್, ಕಾಂಗ್ರೆಸ್ ರಸ್ತೆ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶಹಾಪುರ ಕಡೆಯಿಂದ ಬರುವ ವಾಹನಗಳು ಇದೇ ಮಾರ್ಗವಾಗಿ ನಿಪ್ಪಾಣಿ ಕಡೆಗೆ ಸಂಚರಿಸುವಂತೆ ಬೆಳಗಾವಿ ಸಂಚಾರ ಪೊಲೀಸರು ಸೂಚಿಸಿದ್ದಾರೆ. ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗಾವಿಗೆ ಆಗಮನ ಹಿನ್ನೆಲೆ ಪ್ರಧಾನಮಂತ್ರಿ ಸ್ವಾಗತಿಸಲು ಸಾಮಾನ್ಯ ನಾಗರಿಕರಿಗೆ ಅವಕಾಶ ನೀಡಲಾಗಿದೆ. ನೇಕಾರ, ಪೌರ ಕಾರ್ಮಿಕ ಮಹಿಳೆ, ರೈತ ಕಾರ್ಮಿಕ ಮಹಿಳೆ, ಆಟೋ ಚಾಲಕ, ಕಟ್ಟಡ ಕಾರ್ಮಿಕರಿಂದ ಮೋದಿಗೆ ಸ್ವಾಗತಿಸಲಾಗುತ್ತೆ. ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಜನರನ್ನು ಆಯ್ಕೆ ಮಾಡಲಾಗಿದೆ. ಮೋದಿ ಸ್ವಾಗತಿಸುವವರಿಗೆ ಈಗಾಗಲೇ ಕೊವಿಡ್ ಟೆಸ್ಟ್ ಮಾಡಿಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿಯಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬೆಳಗಾವಿಯಲ್ಲಿ 3 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.

suddiyaana