ಒಂದೇ ವರ್ಷದಲ್ಲಿ ವಿಜಯಕಾಂತ್ ಅಭಿನಯದ 18 ಸಿನಿಮಾ ರಿಲೀಸ್ – ತಮಿಳು ಚಿತ್ರರಂಗದ ಕ್ಯಾಪ್ಟನ್ ಅಗಲಿಕೆಗೆ ಪ್ರಧಾನಿ ಮೋದಿ ಸಂತಾಪ

ಒಂದೇ ವರ್ಷದಲ್ಲಿ ವಿಜಯಕಾಂತ್ ಅಭಿನಯದ 18 ಸಿನಿಮಾ ರಿಲೀಸ್ – ತಮಿಳು ಚಿತ್ರರಂಗದ ಕ್ಯಾಪ್ಟನ್ ಅಗಲಿಕೆಗೆ ಪ್ರಧಾನಿ ಮೋದಿ ಸಂತಾಪ

ತಮಿಳು ಚಿತ್ರರಂಗದ ಖ್ಯಾತ ನಟ ಮತ್ತು ಡಿಎಂಡಿಕೆ ಮುಖ್ಯಸ್ಥ, ಕ್ಯಾಪ್ಟನ್ ವಿಜಯಕಾಂತ್ ಗುರುವಾರ ಬೆಳಗಿನ ಜಾವ ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ವಿಜಯ್‌ಕಾಂತ್ ಅವರಿಗೆ 71 ವರ್ಷ ವಯಸ್ಸಾಗಿತ್ತು.  ನ್ಯೂಮೋನಿಯಾ ಜ್ವರ ಮತ್ತು ಕೊರೊನಾ ಸೋಂಕಿನಿಂದಾಗಿ ಚೆನ್ನೈನ ಎಂಐಒಟಿ ಇಂಟರ್ನ್ಯಾಷನಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ತೀವ್ರ ಕ್ಷೀಣಿಸಿದ್ದರಿಂದ ಬುಧವಾರ ರಾತ್ರಿಯಿಂದ ಅವರು ವೆಂಟಿಲೇಟರ್ ಸಹಾಯದಲ್ಲಿದ್ದರು. ಆದರೆ, ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತಪಟ್ಟಿದ್ದಾರೆ. ‘ವಿಜಯಕಾಂತ್ ಅವರನ್ನು ವೆಂಟಿಲೇಟರ್ ಸಹಾಯದಲ್ಲಿ ಇಡಲಾಗಿತ್ತು. ಆದರೆ, ಎಷ್ಟೇ ಪ್ರಯತ್ನಿಸಿದರೂ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ. ಡಿಸೆಂಬರ್ 28ರ ಬೆಳಿಗ್ಗೆ ಅವರು ನಿಧನ ಹೊಂದಿದರು’ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯಕಾಂತ್ ಅವರನ್ನು ಡಿಸೆಂಬರ್ 26ರಂದು ಮಂಗಳವಾರ ಸಾಮಾನ್ಯ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ‘ವಿಜಯ್ ಅವರು ಆರೋಗ್ಯವಾಗಿದ್ದಾರೆ. ಇದೊಂದು ಸಾಮಾನ್ಯ ಪರೀಕ್ಷೆ. ಅವರು ಶೀಘ್ರವೇ ಮನೆಗೆ ಮರಳಲಿದ್ದಾರೆ’ ಎಂದು ಡಿಎಂಡಿಕೆ ಪಕ್ಷದವರು ಹೇಳಿದ್ದರು. ಆದರೆ, ಇದೀಗ ಅವರ ಸಾವಿನ ಸುದ್ದಿ ಕೇಳಿ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ.

ವಿಜಯಕಾಂತ್ ಅವರು 1952ರಲ್ಲಿ ಮದುರೈನಲ್ಲಿ ಜನಿಸಿದರು. ವಿಜಯಕಾಂತ್ ಅವರ ಮೂಲ ಹೆಸರು ವಿಜಯರಾಜ್ ಅಲಗರ್ಸ್ವಾಮಿ. ಅವರು 80ರ ದಶಕದಲ್ಲಿ ಸಿನಿಮಾ ರಂಗಕ್ಕೆ ಬಂದರು. 150ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇನಿಕ್ಕುಂ ಇಲಮೈ ಸಿನಿಮಾದ ಮೂಲಕ ಸಿನಿಯಾನ ಆರಂಭಿಸಿದ ವಿಜಯಕಾಂತ್, ಸುಮಾರು 20ಕ್ಕೂ ಅಧಿಕ ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿರುವುದು ವಿಶೇಷ. ಅವರ ಬಹುತೇಕ ಸಿನಿಮಾಗಳು ಭ್ರಷ್ಟಾಚಾರದ ವಿರುದ್ಧದ ಕಥೆಯನ್ನು ಹೊಂದಿರುತ್ತಿದ್ದವು. 80ರ ದಶಕದಲ್ಲಿ ವಿಜಯಕಾಂತ್ ಯಾವ ಮಟ್ಟಿಗೆ ಬೇಡಿಕೆ ಹೆಚ್ಚಿಸಿಕೊಂಡಿದ್ದರು ಎಂದರೆ, 1984ರ ಒಂದೇ ವರ್ಷ ಅವರ 18 ಸಿನಿಮಾಗಳು ತೆರೆಕಂಡಿದ್ದವು.

2009ರ ಈಚೆಗೆ ಅವರು ಚಿತ್ರರಂಗದಿಂದ ದೂರ ಆಗಿ ರಾಜಕೀಯದಲ್ಲಿ ತೊಡಗಿಕೊಂಡಿದ್ದರು. ಪ್ರೇಮಲತಾ ಅವರನ್ನು ವಿಜಯಕಾಂತ್ 1990ರಲ್ಲಿ ಮದುವೆ ಆದರು. ಇವರಿಗೆ ಇಬ್ಬರು ಮಕ್ಕಳು. 2005ರಲ್ಲಿ ವಿಜಯಕಾಂತ್ ಅವರು ಡಿಎಂಡಿಕೆಯನ್ನು ಸ್ಥಾಪಿಸಿದರು. ಚೆನ್ನೈನಲ್ಲಿ ಈ ಪಕ್ಷದ ಮುಖ್ಯ ಕಚೇರಿ ಇದೆ. ಆ ಬಳಿಕ ಅವರು ಸಿನಿಮಾ ಕಡೆ ಹೆಚ್ಚು ಒಲವು ತೋರಿಸಲಿಲ್ಲ. ಅವರು ಎರಡು ಬಾರಿ ವಿಧಾನಸಭಾ ಸದಸ್ಯರಾಗಿದ್ದರು. 2011ರಿಂದ 2016ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿದ್ದರು. ಅವರ ಆರೋಗ್ಯ ಇತ್ತೀಚೆಗೆ ಹದಗೆಟ್ಟಿದ್ದರಿಂದ ರಾಜಕೀಯದಲ್ಲೂ ಆ್ಯಕ್ಟೀವ್ ಆಗಿರಲಿಲ್ಲ. ಹಲವಾರು ವರ್ಷಗಳ ಕಾಲ ನಟರಾಗಿ ಚಿತ್ರೋದ್ಯಮಕ್ಕೆ ಸೇವೆ ಸಲ್ಲಿಸಿರುವ ಕ್ಯಾಪ್ಟನ್ ವಿಜಯಕಾಂತ್ ಅವರಿಗೆ 71 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಗಳು ಅವರನ್ನೂ ಕಾಡುತ್ತಿದ್ದವು.

ಕ್ಯಾಪ್ಟನ್ ವಿಜಯ್‌ಕಾಂತ್ ನಿಧನಕ್ಕೆ ಇಡೀ ತಮಿಳು ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ನಟನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಎಕ್ಸ್ ಮಾಡಿರುವ ಪ್ರಧಾನಿ, ವಿಜಯಕಾಂತ್ ಅವರ ನಿಧನ ಅತೀವ ದುಃಖ ತಂದಿದೆ. ತಮಿಳು ಚಲನಚಿತ್ರ ಪ್ರಪಂಚದ ದಂತಕಥೆಯಾಗಿರುವ ಅವರು ತಮ್ಮ ನಟನೆಯಿಂದಲೇ ಎಲ್ಲರ ಮನಗೆದ್ದಿದ್ದರು. ರಾಜಕೀಯ ನಾಯಕರಾಗಿ ಅವರು ಸಾರ್ವಜನಿಕ ಸೇವೆಗೆ ಬದ್ಧರಾಗಿದ್ದರು. ಇಂದು ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಆತ್ಮೀಯ ಸ್ನೇಹಿತರಾಗಿದ್ದರು. ನನ್ನೊಂದಿಗಿನ ಅವರ ಒಡನಾಟವನ್ನು ನಾನು ನೆನಪಲ್ಲಿಟ್ಟುಕೊಂಡಿದ್ದೇನೆ. ಈ ಸಂದರ್ಭದಲ್ಲಿ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

ವಿಜಯಕಾಂತ್ ನಿಧನಕ್ಕೆ ಸಂತಾಪ ಸೂಚಿಸಿರುವ ನಟಿ ಖುಷ್ಬೂ, “ನಾವು ರತ್ನವನ್ನು ಕಳೆದುಕೊಂಡಿದ್ದೇವೆ. ಚಿನ್ನದ ಹೃದಯ ಹೊಂದಿದ್ದ ವ್ಯಕ್ತಿ ನಮ್ಮ ಪ್ರೀತಿಯ ಕ್ಯಾಪ್ಟನ್, ನಮ್ಮ ವಿಜಯಕಾಂತ್ ಅವರ ಕುಟುಂಬ, ಅಭಿಮಾನಿಗಳು ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಸಂತಾಪಗಳು” ಎಂದು ಟ್ವೀಟ್ ಮಾಡಿದ್ದಾರೆ.

Sulekha