73 ವರ್ಷದ ಮೋದಿ 11 ದಿನ ಕಠಿಣ ವ್ರತ ಮಾಡಿದ್ದೇಗೆ? – ಊಟವಿಲ್ಲದೆ ಎಷ್ಟು ದಿನ ಬದುಕಬಹುದು?

73 ವರ್ಷದ ಮೋದಿ 11 ದಿನ ಕಠಿಣ ವ್ರತ ಮಾಡಿದ್ದೇಗೆ? – ಊಟವಿಲ್ಲದೆ ಎಷ್ಟು ದಿನ ಬದುಕಬಹುದು?

ಜಗತ್ತೇ ಬೆರಗಾಗುವಂತೆ ಭವ್ಯ ರಾಮಮಂದಿರ ಲೋಕಾರ್ಪಣೆಗೊಂಡಿದೆ. ಲಕ್ಷಾಂತರ ಭಕ್ತರು ಅಯೋಧ್ಯೆಯಲ್ಲಿ ಜನ್ಮ ತಳೆದ ಬಾಲರಾಮನನ್ನು ಕಣ್ತುಂಬಿಕೊಳ್ತಿದ್ದಾರೆ. ಆದಿಪುರುಷನ ಜಪತಪದ ಜೊತೆ ಜೊತೆಗೆ ಈಗ ಪ್ರಧಾನಿ ಮೋದಿಯವರ ಕಠಿಣ ವ್ರತ ಭಾರೀ ಚರ್ಚೆಯಲ್ಲಿದೆ. 73 ವರ್ಷದ ಮೋದಿ 11 ದಿನಗಳ ಕಾಲ ಹೇಗೆ ಉಪವಾಸ ಮಾಡಿದ್ರು..? ಇದು ಸಾಧ್ಯನಾ ಎಂದು ಪ್ರಶ್ನಿಸುತ್ತಿದ್ದಾರೆ. ಹಾಗಾದ್ರೆ ಉಪವಾಸ ಎಂದರೇನು..? ಎಷ್ಟು ದಿನ ಮಾಡಬಹುದು..? ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ..

ಕೋಟ್ಯಂತರ ಭಕ್ತರ ಶತಮಾನಗಳ ಕನಸು ಜನವರಿ 22ರಂದು ನನಸಾಗಿದೆ. ಬಾಲರಾಮನ ಪ್ರಾಣ ಪ್ರತಿಷ್ಠೆಗಾಗಿ 11 ದಿನಗಳ ಕಠಿಣ ವ್ರತ ಕೈಗೊಂಡು ಪ್ರಧಾನಿ ಮೋದಿ ಪೂಜೆ ನೆರವೇರಿಸಿದ್ದಾರೆ. ಬರೀ ಎಳನೀರು ಮಾತ್ರ ಸೇವಿಸಿ ರಾಮ ಸೇವೆ ಮಾಡಿದ್ದಾರೆ. ಹಾಗಾದ್ರೆ ಉಪವಾಸ ಎಂದರೇನು..? ಸಾಮಾನ್ಯ ಅರ್ಥದಲ್ಲಿ ಉಪವಾಸ ಎಂದರೆ ಏನನ್ನೂ ತಿನ್ನದೇ, ಕುಡಿಯದೇ, ದೇವರ ಧ್ಯಾನ ಮಾಡುವುದು.

ಇದನ್ನೂ ಓದಿ: ತಂಗಿ ಲಿವರ್‌ ದಾನ ಮಾಡಿದರೂ ಬದುಕುಳಿಯಲಿಲ್ಲ ಅಕ್ಕ! – ವಿಧಿಯ ಆಟಕ್ಕೆ ಬಲಿಯಾಯ್ತು ಮುಗ್ಧ ಜೀವ

ಮೇಲ್ನೋಟಕ್ಕೆ ಇದು ಧಾರ್ಮಿಕ ನಂಬಿಕೆ ಅನ್ನಿಸಿದ್ರೂ ವೈಜ್ಞಾನಿಕವಾಗಿ ನಿಮ್ಮ ದೇಹ ಮತ್ತು ಆತ್ಮವನ್ನು ಶುದ್ಧೀಕರಿಸುವುದು ಇದರ ಉದ್ದೇಶ. ಇದರಲ್ಲಿ ಹಸಿವನ್ನು ನಿಗ್ರಹಿಸಿ, ನೀರು ಹಾಗೂ ಆಹಾರವನ್ನು ತಿನ್ನದೇ ಇರಬೇಕಾಗುತ್ತದೆ. ಇದ್ರಿಂದ ನಮ್ಮ ದೇಹಕ್ಕೆ ಹಲವು ಲಾಭಗಳಿವೆ. ಉಪವಾಸದ ಸಂದರ್ಭದಲ್ಲಿ ನಮ್ಮ ದೇಹದಲ್ಲಿನ ಸತ್ತ ಜೀವಕೋಶಗಳು, ಅನಾರೋಗ್ಯಕರ ಜೀವಕೋಶಗಳು, ಬಾಹ್ಯ ಅಂಶಗಳು ಮತ್ತು ಕೊಬ್ಬಿನ ಕೋಶಗಳನ್ನು ಕರಗಿಸುತ್ತದೆ. ಹಾಗೇ ಮಾನಸಿಕ ಆರೋಗ್ಯಕ್ಕೂ ಉಪಯೋಗವಾಗುತ್ತದೆ. ಉಪವಾಸದ ವೇಳೆ ನೀವು ಹೆಚ್ಚು ಶಾಂತರಾಗುತ್ತೀರಿ, ನಿಮ್ಮ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ನಿಮ್ಮ ಕಣ್ಣುಗಳು ಉತ್ತಮಗೊಳ್ಳುತ್ತವೆ, ನಿಮ್ಮ ರುಚಿ ಮತ್ತು ನಿಮ್ಮ ಮೂಗು ತುಂಬಾ ಸೂಕ್ಷ್ಮವಾಗಿರುತ್ತದೆ.

ಇನ್ನು ಆಹಾರವಿಲ್ಲದೇ ಎಷ್ಟು ದಿನ ಬದುಕಬಹುದು ಅನ್ನೋದನ್ನ ನಿಖರವಾಗಿ ಹೇಳೋಕೆ ಆಗಲ್ಲ. ಯಾಕಂದ್ರೆ ಇದು ಪ್ರತಿಯೊಬ್ಬ ವ್ಯಕ್ತಿಯ ವಿಚಾರದಲ್ಲೂ ವಿಭಿನ್ನವಾಗಿದೆ. ಉಪವಾಸ ಮಾಡುವವರ ವಯಸ್ಸು, ತೂಕ, ಮಾನಸಿಕ ಸ್ಥಿರತೆ, ದೈಹಿಕ ಸಾಮರ್ಥ್ಯ, ಆರೋಗ್ಯ ಇತ್ಯಾದಿಗಳನ್ನು ಪರಿಗಣಿಸಬೇಕಾಗುತ್ತದೆ. ಫಾಸ್ಟಿಂಗ್ ವೇಳೆ ಹೆಚ್ಚು ನೀರು ಕುಡಿದರೆ ಅಥವಾ ದ್ರವ ಪದಾರ್ಥ ಸೇವಿಸಿದರೆ ಆಹಾರವಿಲ್ಲದೆ ಹೆಚ್ಚು ಕಾಲ ಬದುಕಬಹುದು. ಅದ್ರಲ್ಲೂ ಎಳನೀರು ದೇಹದಲ್ಲಿನ ನೀರಿನ ಅಂಶವನ್ನು ಸಮತೋಲನದಲ್ಲಿರಿಸುತ್ತದೆ. ಸಾಕಷ್ಟು ಖನಿಜ, ಲವಣ ಮತ್ತು ಸಕ್ಕರೆ ಅಂಶವನ್ನು ಎಳನೀರು ಹೊಂದಿದೆ. ದೈಹಿಕ ಚಟುವಟಿಕೆಯಿಂದ ನಮ್ಮ ದೇಹದಲ್ಲಿ ನಷ್ಟವಾಗುವ ಸೋಡಿಯಂ ಮತ್ತು ಪೋಟಾಷಿಯಂನ್ನು ಕೂಡ ಸುಸ್ಥಿತಿಯಲ್ಲಿಡಲು ಇದು ಸಹಕರಿಸುತ್ತದೆ. ಎಳನೀರು, ಹೃದಯದಲ್ಲಿ ರಕ್ತ ಸಂಚಾರ ಸುಗಮವಾಗಿಸಿ, ಅದರ ನಾಳಗಳಲ್ಲಿ ಕೆಟ್ಟ ಕೊಬ್ಬು ಶೇಖರಣೆಯಾಗುವುದನ್ನು ತಡೆದು, ಒಳ್ಳೆ ಕೊಬ್ಬಿನ ಅಂಶ ಹೆಚ್ಚು ಮಾಡುವುದರ ಮೂಲಕ ದೇಹಕ್ಕೆ ಶಕ್ತಿ ಒದಗಿಸುತ್ತದೆ. ಎಳನೀರು ಕುಡಿದು ಉಪವಾಸ ಮಾಡಿದರೆ, ದೇಹದಲ್ಲಿನ ಅನಗತ್ಯ ತೂಕವೆಲ್ಲಾ ನಿರ್ನಾಮವಾಗುತ್ತದೆ. ಮೂತ್ರಪಿಂಡದ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಹೀಗಾಗಿ ಮೋದಿ ಎಳನೀರು ಕುಡಿದು 11 ದಿನ ಉಪವಾಸ ಮಾಡುವುದು ಸಾಧ್ಯವಾಯಿತು.. ಆದ್ರೆ ಅನಾರೋಗ್ಯಕ್ಕೆ ಒಳಗಾದವರು ಅಥವಾ ದೀರ್ಘಕಾಲಿನ ಕಾಯಿಲೆಗಳಿಗೆ ತುತ್ತಾದವರು ಉಪವಾಸ ಮಾಡೋದು ಒಳ್ಳೆಯದಲ್ಲ.

Shwetha M