14 ವರ್ಷಗಳ ಹಿಂದೆ ಮೋದಿ ಪ್ರಧಾನಿಯಾಗಬೇಕೆಂದು ಶಪಥ – ಶೂ ತೊಡಿಸಿ ಪ್ರತಿಜ್ಞೆ ಈಡೇರಿಸಿದ ಪ್ರಧಾನಿ ಮೋದಿ

ಹರಿಯಾಣದ ಯಮುನಾನಗರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಹುಕಾಲದ ಅಭಿಮಾನಿಯೊಬ್ಬರನ್ನು ಭೇಟಿಯಾಗಿದ್ದಾರೆ. ಅಲ್ಲದೇ ಆ ಅಭಿಮಾನಿಯ 14 ವರ್ಷಗಳ ಪ್ರತಿಜ್ಞೆಯನ್ನು ಈಡೇರಿಸಿದ್ದಾರೆ.
14 ವರ್ಷಗಳ ಹಿಂದೆ ಮೋದಿ ಪ್ರಧಾನಿಯಾಗಬೇಕು ಎಂದು ರಾಂಪಾಲ್ ಕಶ್ಯಪ್ ಅತೀ ದೊಡ್ಡ ಶಪಥ ಮಾಡಿದ್ದರು. ಕಾಲಿಗೆ ಚಪ್ಪಲಿ ಧರಿಸದೆ ಬರಿಗಾಲಲ್ಲಿ ಓಡಾಡುವುದಾಗಿ ಶಪಥ ಮಾಡಿದ್ದರು. ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೂ ರಾಂಪಾಲ್ ಕಶ್ಯಪ್ ಶಪಥ ಹಾಗೇ ಮುಂದುವರಿಸಿದ್ದರು. ಮೋದಿ ಪ್ರಧಾನಿಯಾಗಿ ಮತ್ತಷ್ಟು ಕಾಲ ಆಡಳಿತ ನಡೆಸಬೇಕು, ಅಭಿವೃದ್ಧಿ ಮಾಡಬೇಕು ಅನ್ನೋದು ರಾಂಪಲ್ ಮನದಾಸೆಯಾಗಿದೆ. ಹೀಗಾಗಿ ಬರಿಗಾಲಲ್ಲೇ ಓಡಾಡುತ್ತಿದ್ದ ರಾಂಪಾಲ್‌ನನ್ನು ಮೋದಿ ಭೇಟಿಯಾಗಿದ್ದಾರೆ.
ಮೋದಿ ಅವರು ರಾಂಪಾಲ್ ಅವರೊಂದಿಗಿನ ಭೇಟಿಯ ವಿಡಿಯೊವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಭೇಟಿಯ ವೇಳೆ ರಾಂಪಾಲ್ ಅವರಿಗೆ ಹೊಸ ಶೂ ನೀಡಿದ ಪ್ರಧಾನಿ ಮೋದಿ, ಶೂ ಹಾಕಲು ಅವರಿಗೆ ಸಹಾಯ ಮಾಡಿದ್ದಾರೆ.
‘ಯಮುನಾನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ, ನಾನು ಕೈತಾಲ್‌ನ ರಾಂಪಾಲ್ ಕಶ್ಯಪ್ ಅವರನ್ನು ಭೇಟಿಯಾದೆ. ನಾನು ಪ್ರಧಾನಿಯಾದ ನಂತರ ಹಾಗೂ ನನ್ನನ್ನು ಭೇಟಿಯಾದ ನಂತರವೇ ಪಾದರಕ್ಷೆಗಳನ್ನು ಧರಿಸುವುದಾಗಿ 14 ವರ್ಷಗಳ ಹಿಂದೆ ಅವರು ಪ್ರತಿಜ್ಞೆ ಮಾಡಿದ್ದರು. ರಾಂಪಾಲ್ ಅವರಂತಹ ಜನರ ಪ್ರೀತಿಗೆ ನಾನು ಸದಾ ಆಭಾರಿ’ ಎಂದು ಪ್ರಧಾನಿ ಬರೆದುಕೊಂಡಿದ್ದಾರೆ.