‘ದಿ ಕೇರಳ ಸ್ಟೋರಿ’ ರಿಲೀಸ್ – ಪ್ರಧಾನಿ ಮೋದಿ ಹೇಳಿದ್ದೇನು?

‘ದಿ ಕೇರಳ ಸ್ಟೋರಿ’ ರಿಲೀಸ್ – ಪ್ರಧಾನಿ ಮೋದಿ ಹೇಳಿದ್ದೇನು?

ದೇಶದಾದ್ಯಂತ ವಿವಾದದ ಕಿಚ್ಚು ಹೊತ್ತಿಸಿರುವ ಲವ್ ಜಿಹಾದ್ ಆಧಾರಿತ ಸಿನಿಮಾ ‘ದಿ ಕೇರಳ ಸ್ಟೋರಿ’ ಶುಕ್ರವಾರ ರಿಲೀಸ್ ಆಗಿದೆ. ಇದೀಗ ಈ ಸಿನಿಮಾದ ಕುರಿತು ಪ್ರಧಾನಿ ನರೇಂದ್ರ ಮೋದಿ ಬಳ್ಳಾರಿ ಸಮಾವೇಶದಲ್ಲಿ ಮಾತನಾಡಿದ್ದು, ದಿ ಕೇರಳ ಸ್ಟೋರಿ ಆತಂಕವಾದದ ಕಥಾವಸ್ತುವನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ಹಲವು ವರ್ಷಗಳಿಂದ ಆತಂಕವಾದದ ಸ್ವರೂಪ ಬದಲಾಗಿದೆ ಎಂದು ಹೇಳಿದ್ದಾರೆ.

‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಆತಂಕವಾದದ ಮತ್ತೊಂದು ಮುಖವನ್ನು ಪರಿಚಯಿಸಲಾಗಿದೆ. ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಆದರೆ, ಕಾಂಗ್ರೆಸ್ ಪಕ್ಷ ಈ ಕುರಿತು ಮಾತನಾಡದೇ ಸಿನಿಮಾವನ್ನು ನಿಷೇಧ ಮಾಡಬೇಕು ಎಂದು ಆತಂಕವಾದದ ಪರವಾಗಿಯೇ ಮಾತನಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ವಿವಾದದ ಸುಳಿಯಲ್ಲಿ ‘ದಿ ಕೇರಳ ಸ್ಟೋರಿ’ – ಚಿತ್ರ ಪ್ರದರ್ಶನಕ್ಕೆ ಹಿಂದೇಟು ಹಾಕಿದ ಚಿತ್ರಮಂದಿರದ ಮಾಲೀಕರು

‘ಭಯೋತ್ಪಾದನೆ ಮತ್ತು ಭಯೋತ್ಪಾದನಾ ಪ್ರವೃತ್ತಿಯ ಚಲನಚಿತ್ರಗಳನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಕಾಂಗ್ರೆಸ್ ಮತ ಬ್ಯಾಂಕ್‌ಗಾಗಿ ಭಯೋತ್ಪಾದನೆಯನ್ನು ರಕ್ಷಿಸಿದೆ. ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್‌ಗಾಗಿ ಭಯೋತ್ಪಾದನೆಗೆ ಬಲಿಯಾಗಿರುವುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಇಂತಹ ಪಕ್ಷ ಎಂದಾದರೂ ಕರ್ನಾಟಕವನ್ನು ಉಳಿಸಲು ಸಾಧ್ಯವೇ? ಭಯೋತ್ಪಾದನೆಯ ವಾತಾವರಣದಲ್ಲಿ, ಇಲ್ಲಿನ ಉದ್ಯಮ, ಐಟಿ ಉದ್ಯಮ, ಕೃಷಿ, ಕೃಷಿ ಮತ್ತು ವೈಭವದ ಸಂಸ್ಕೃತಿ ನಾಶವಾಗುತ್ತದೆ ಎಂದು ಹೇಳಿದರು.

ಶುಕ್ರವಾರ ‘ದಿ ಕೇರಳ ಸ್ಟೋರಿ’ ಸಿನಿಮಾ ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ತೆರೆಕಂಡಿದೆ. ಕಥಾವಸ್ತುವಿನ ಕಾರಣದಿಂದಾಗಿ ವಿವಾದಕ್ಕೀಡಾಗಿರುವ ಹಿನ್ನೆಲೆ ಕೇರಳದಲ್ಲಿ ಚಿತ್ರ ಪ್ರದರ್ಶನಕ್ಕೆ ಥಿಯೇಟರ್ ಮಾಲೀಕರು ಹಿಂದೇಟು ಹಾಕಿದ್ದಾರೆ. ಕೇರಳ ಸರಕಾರದ ಸಪೋರ್ಟ್ ಇಲ್ಲದ ಕಾರಣದಿಂದಾಗಿ ಮತ್ತು ಪ್ರತಿಭಟನೆಯ ಕಾವು ಜೋರಾಗಿದ್ದರಿಂದ ಚಿತ್ರಮಂದಿರಗಳ ಮಾಲೀಕರು ಭಯದಲ್ಲಿದ್ದಾರೆ. ಈ ಕಾರಣದಿಂದಾಗಿ ಸಾಕಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿಲ್ಲ ಎಂದು ಹೇಳಲಾಗುತ್ತಿದೆ.

‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ 32 ಸಾವಿರ ಹಿಂದೂ ಹೆಣ್ಣು ಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡಿ ಮದುವೆ ಮಾಡಿರುವ ಬಗ್ಗೆ ತೋರಿಸಲಾಗಿದೆ. ಅಲ್ಲದೇ ಅಂಥ ಹೆಣ್ಣು ಮಕ್ಕಳನ್ನು ಐಸಿಸ್‌ ಉಗ್ರ ಸಂಘಟನೆಗೆ ಸೇರಿಸಲಾಗಿದೆ ಎಂದು ತೋರಿಸಲಾಗಿದೆ. ಆದರೆ ವಾಸ್ತವದಲ್ಲಿ ಇದ್ಯಾವುದೂ ನಡೆದಿಲ್ಲ. ಬರೀ ಹಸಿ ಸುಳ್ಳುಗಳನ್ನೇ ನಿಜವೆಂಬಂತೆ ಚಿತ್ರದಲ್ಲಿ ಬಿಂಬಿಸಲಾಗಿದೆ. ಅಲ್ಪಸಂಖ್ಯಾತ ಸಮುದಾಯವನ್ನು ಗುರಿ ಮಾಡಿಕೊಂಡು ಸುಳ್ಳು ಕಥೆ ಮೇಲೆ ಸಿನಿಮಾ ಮಾಡಲಾಗಿದೆ. ರಾಜಕೀಯ ಮತ ಧ್ರುವೀಕರಣಕ್ಕೆ ಆರೆಸ್ಸೆಸ್‌ ಸೃಷ್ಟಿಸಿರುವ ಕಟ್ಟು ಕಥೆ. ಕೋಮು ಸಾಮರಸ್ಯದ ರಾಜ್ಯದಲ್ಲಿ ಹಿಂದೂಗಳ ಧ್ರುವೀಕರಣಕ್ಕೆ ಸುಳ್ಳು ಕಥೆ ಸೃಷ್ಟಿಸಲಾಗಿದೆ. ರಾಜ್ಯದ ಜಾತ್ಯತಿತ ವ್ಯವಸ್ಥೆಯನ್ನು ಬುಡಮೇಲು ಮಾಡಲು, ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸಲಾಗುತ್ತಿದೆ ಎಂಬುದು ಸಿನಿಮಾ ವಿರೋಧಿಸುತ್ತಿರುವ ಕಾಂಗ್ರೆಸ್‌ ಹಾಗೂ ಕೆಲ ಸಂಘ ಸಂಸ್ಥೆಗಳ ವಾದವಾಗಿದೆ.

suddiyaana