ಸಾರಿಗೆ ನೌಕರರು ಸಹಕರಿಸಿ ಮುಷ್ಕರ ಕೈ ಬಿಡಿ – ಡಿಕೆ ಶಿವಕುಮಾರ್

ಸಾರಿಗೆ ನೌಕರರು ಸಹಕರಿಸಿ ಮುಷ್ಕರ ಕೈ ಬಿಡಿ – ಡಿಕೆ ಶಿವಕುಮಾರ್

ಸಾರಿಗೆ ನೌಕರರಿಗೆ ಸಹಾಯ ಮಾಡುವ ಅವಕಾಶ ಸಿಕ್ಕರೆ ಖಂಡಿತವಾಗಿ ಮುಖ್ಯಮಂತ್ರಿಗಳು ಅದನ್ನು ಮಾಡುತ್ತಾರೆ. ಇಲ್ಲಿ ಹಠ ಮಾಡುವುದರಿಂದ ಪ್ರಯೋಜನವಿಲ್ಲ. ಸಾರ್ವಜನಿಕರ ಬದುಕು ಗಮನದಲ್ಲಿಟ್ಟುಕೊಂಡು ಸಹಕರಿಸಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್  ಅವರು ಸಾರಿಗೆ ನೌಕರರಿಗೆ ಮನವಿ ಮಾಡಿದ್ದಾರೆ.

ಸರ್ಕಾರ ಹಠಕ್ಕೆ ಬಿದ್ದು, ಸಾರಿಗೆ ನೌಕಕರ ಮನವಿಗೆ ಸ್ಪಂದಿಸುತ್ತಿಲ್ಲ ಅನ್ನೋ ಬಗ್ಗೆ ಡಿಕೆಶಿಯನ್ನ ಕೇಳಿದಾಗ  ಸಾರಿಗೆ ನೌಕರರ ಬೇಡಿಕೆ ತಪ್ಪು ಎಂದು ಸರ್ಕಾರ ಹೇಳುತ್ತಿಲ್ಲ. ಅವರು ಕೂಡ ಸರ್ಕಾರದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಅವರಿಗೆ ನೆರವಾಗಲು ಪ್ರಯತ್ನಿಸುತ್ತಿದ್ದಾರೆ. ನಾಗರೀಕರನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಾಧ್ಯವಾಗದನ್ನು ಮಾಡಿ ಎಂದು ಒತ್ತಡ ಹಾಕಬಾರದು, ನಮಗೆ ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ. ಇಂದು ಕರ್ತವ್ಯಕ್ಕೆ ಹಾಜರಾಗಿರುವ ಚಾಲಕರು ಹಾಗೂ ಕಂಡಕ್ಟರ್ ಗಳಿಗೆ ಅಭಿನಂದಿಸುತ್ತೇನೆ. ಸಾರ್ವಜನಿಕರ ಬದುಕು ಮುಖ್ಯ  ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ಪ್ರತಿಭಟನೆಗಾಗಿ ಫ್ರೀಡಂ ಪಾರ್ಕ್ ಪ್ರಾಚೀನ ಗೋಡೆ ನೆಲಸಮ? – ಪೊಲೀಸರಿಗೆ ದೂರು ನೀಡಿದ ಬಿಜೆಪಿ

ಒಂದು ದಿನ ಮುಂದೂಡಿ ಎಂಬ ಕೋರ್ಟ್ ಆದೇಶಕ್ಕೂ ಬೆಲೆ ನೀಡದೆ ಕೆಲವರು ಮುಷ್ಕರ ಮಾಡುತ್ತಿದ್ದಾರೆ ಎಂದು ಕೇಳಿದಾಗ, ಅನಗತ್ಯವಾಗಿ ಕಾನೂನಿಗೂ ಗೌರವ ನೀಡದೇ ಹಠ ಮಾಡುವುದು ಬೇಡ. ನೀವು ಸಮಾಜ ಸೇವೆ ಮಾಡುತ್ತಿದ್ದು, ನಮಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.

ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರಾ ಎಂಬ ಪ್ರಶ್ನೆಗೆ, ಆಗಸ್ಟ್ 10ರಂದು ಆಗಮಿಸುವುದಾಗಿ ತಿಳಿಸಿದ್ದಾರೆ. ಹಾಗಾಗಿ ನಾನು ಉದ್ಘಾಟನೆಯಾಗಲಿರುವ ಮೆಟ್ರೋ ಮಾರ್ಗವನ್ನು ಪೂರ್ವಭಾವಿಯಾಗಿ ಪರಿಶೀಲನೆ ಮಾಡಿದ್ದೇನೆ. ಅಧಿಕೃತ ಕಾರ್ಯಕ್ರಮ ಪಟ್ಟಿ ಇನ್ನೂ ಬಂದಿಲ್ಲ. ಆದರೆ ರೈಲ್ವೇ ಯೋಜನೆ ಉದ್ಘಾಟನೆ, ಅವರ ಪಕ್ಷದ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳಿವೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ರು.

Kishor KV