17 ವರ್ಷಗಳಿಂದ ಒಂದೇ ಟೀಮ್‌ನಲ್ಲಿ ಆಟ – ವಿರಾಟ್‌ ಕೊಹ್ಲಿಗೆ ಕರ್ನಾಟಕದ ಜೊತೆಗಿನ ಬಾಂಧವ್ಯ ಎಂಥಾದ್ದು?

17 ವರ್ಷಗಳಿಂದ ಒಂದೇ ಟೀಮ್‌ನಲ್ಲಿ ಆಟ – ವಿರಾಟ್‌ ಕೊಹ್ಲಿಗೆ ಕರ್ನಾಟಕದ ಜೊತೆಗಿನ ಬಾಂಧವ್ಯ ಎಂಥಾದ್ದು?

ವಿರಾಟ್ ಕೊಹ್ಲಿ. ಈ ಹೆಸ್ರಿಗಿರುವ ಶಕ್ತಿ, ಸಾಮರ್ಥ್ಯವೇ ಅಂಥಾದ್ದು. ವಿಶ್ವ ಕ್ರಿಕೆಟ್​ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅಂತಾನೇ ಕರೆಸಿಕೊಳ್ಳೋ ಕೊಹ್ಲಿ ದಾಖಲೆಗಳ ಮಹಾಶೂರ. ಆಫ್​ ದಿ ಫೀಲ್ಡ್​ನಲ್ಲಿ ಕೋಟ್ಯಂತರ ಅಭಿಮಾನಿಗಳ ಪಾಲಿಗೆ ರೋಲ್ ಮಾಡೆಲ್. ಪ್ರಸ್ತುತ ಕೊಹ್ಲಿಯಷ್ಟು ಜನಪ್ರಿಯತೆ ಗಳಿಸಿದ ಕ್ರಿಕೆಟರ್ ಮತ್ಯಾವ ದೇಶದಲ್ಲೂ ಇಲ್ಲ. ಕ್ರೀಡಾಭಿಮಾನಿಗಳಿಗೆ ಸದಾ ಸ್ಫೂರ್ತಿ ತುಂಬುವ ಕೊಹ್ಲಿಗೆ ಇಡೀ ಜಗತ್ತಿನಾದ್ಯಂತ ಫ್ಯಾನ್ಸ್ ಇದ್ದಾರೆ. ಅದ್ರಲ್ಲೂ ಕರ್ನಾಟಕದಲ್ಲಂತೂ ಕೊಹ್ಲಿಯನ್ನ ಕಿಂಗ್ ಆಗಿ ಮೆರೆಸ್ತಿದ್ದಾರೆ. ಕೊಹ್ಲಿಯನ್ನು ನಮ್ಮ ಮನೆ ಮಗ ಎಂದೇ ಕರೆಯುತ್ತಾರೆ. ಅಷ್ಟಕ್ಕೂ ಕೊಹ್ಲಿ ಇಷ್ಟೊಂದು ಫೇಮಸ್ ಆಗೋಕೆ ಕಾರಣ ಏನು..? ಕರ್ನಾಟಕದ ಜೊತೆಗಿನ ಅವ್ರ ಬಾಂಧವ್ಯ ಎಂಥಾದ್ದು ಅನ್ನೋ ಮಾಹಿತಿ ಇಲ್ಲಿದೆ.

ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದು ಸಲವೂ ಟ್ರೋಫಿ ಗೆದ್ದಿಲ್ಲ. ಕೊಹ್ಲಿ ಬೇರೆ ಟೀಮ್​ಗೆ ಹೋಗ್ತೀನಿ ಅಂದ್ರೆ ಕೇಳಿದಷ್ಟು ದುಡ್ಡು ಕೊಡೋಕೆ ಫ್ರಾಂಚೈಸಿಗಳೂ ರೆಡಿ ಇವೆ. ಆದ್ರೆ ಕಿಂಗ್ ಮಾತ್ರ ಆರ್​ಸಿಬಿ ಬಿಟ್ಟು ಅಲುಗಾಡಿಲ್ಲ. ಬೆಂಗಳೂರು ತಂಡದ ಮೂಲಕ ಐಪಿಎಲ್​ಗೆ ರಾಯಲ್ ಆಗೇ ಕಾಲಿಟ್ಟಿದ್ದ ಕೊಹ್ಲಿ ಇಲ್ಲಿಯೇ ಭದ್ರವಾಗಿ ಬೇರೂರಿದ್ದಾರೆ. ಡೇ ಒನ್ ನಿಂದಲೂ ಒಂದೇ ತಂಡಕ್ಕಾಗಿ ಆಡ್ತಿರೋ ಕೊಹ್ಲಿಯನ್ನ ಕಂಡ್ರೆ ಕರ್ನಾಟಕದ ಜನರಿಗೆ ತುಂಬಾ ಪ್ರೀತಿ. ಅದು ಆರ್​ಸಿಬಿ ತಂಡವನ್ನೇ ಪ್ರತಿನಿಧಿಸಲಿ ಅಥವಾ ಭಾರತ ತಂಡವನ್ನೇ ಪ್ರತಿನಿಧಿಸಲಿ ಅಷ್ಟೇ ಪ್ರೀತಿ ತೋರುತ್ತಾರೆ ಕನ್ನಡಿಗರು. ಇನ್ನು ಐಪಿಎಲ್​ನಲ್ಲಿ ಆರ್​ಸಿಬಿ ಕೋಟ್ಯಂತರ ಅಭಿಮಾನಿಗಳನ್ನ ಹೊಂದಲು ಪ್ರಮುಖ ಕಾರಣ ವಿರಾಟ್ ಕೊಹ್ಲಿ ಅಂದ್ರೂ ತಪ್ಪಾಗಲ್ಲ. ಆರ್​ಸಿಬಿ ಕರ್ನಾಟಕದ ತಂಡ, ಅದರಲ್ಲೂ ಬೆಂಗಳೂರನ್ನ ಪ್ರತಿನಿಧಿಸುವ ತಂಡ. ಕನ್ನಡಿಗರದ್ದು ನಿಯತ್ತು ಅಂದರೆ ನಿಯತ್ತು. ಅಂತಹ ರಾಜ್ಯದ ಫ್ರಾಂಚೈಸಿ ಪ್ರತಿನಿಧಿಸುತ್ತಿರುವ ಕೊಹ್ಲಿಯೂ ಅಷ್ಟೇ ನಿಯತ್ತಾಗಿ ತನ್ನ ಫ್ರಾಂಚೈಸಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಕಾರಣಕ್ಕೆ ಕೊಹ್ಲಿಯನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ.

ಚಿರ ಯುವಕ ವಿರಾಟ್ ಕೊಹ್ಲಿ! 

ಒಬ್ಬ ಕ್ರೀಡಾಪಟು ಹೇಗಿರಬೇಕೆಂಬುದಕ್ಕೆ ವಿರಾಟ್​ ಅತ್ಯುತ್ತಮ ಉದಾಹರಣೆ. ವಯಸ್ಸು 35 ಆಗಿದ್ದರೂ ಚಿರಯುವಕನಂತಿದ್ದಾರೆ. ಅದಕ್ಕೆ ಕಾರಣ ಅವರ ಫಿಟ್ನೆಸ್ ಮತ್ತು ಡಯೆಟ್ ಪ್ಲಾನ್. ಗಂಟೆಗಟ್ಟಲೆ ಜಿಮ್​​​ನಲ್ಲಿ ಕಳೆಯೋದ್ರ ಜೊತೆಗೆ ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸುತ್ತಾರೆ. ಗಂಟೆಗಟ್ಟಲೇ ನೆಟ್​ ಪ್ರಾಕ್ಟೀಸ್ ಮಾಡುತ್ತಾರೆ. ಫೀಲ್ಡ್​ನಲ್ಲಿ ಹಂಪೈರ್​ಗಳ ವಿರುದ್ಧವೇ ಧ್ವನಿ ಎತ್ತೋ ಕೊಹ್ಲಿ ತಲೆ ಬಾಗುವುದು ಅಭಿಮಾನಿಗಳಿಗೆ ಮಾತ್ರ. ವಿರಾಟ್​ಗೆ ಜಗತ್ತಿನ ಮೂಲೆ ಮೂಲೆಗಳಲ್ಲೂ ಫ್ಯಾನ್ಸ್ ಇದ್ದಾರೆ. ಅದಕ್ಕೆ ಕಾರಣ ಅವರ ಬ್ಯಾಟಿಂಗ್ ವೈಭವ. ವಿಶ್ವದ ಯಾವುದೇ ಪಿಚ್​​ನಲ್ಲಿ ಬೇಕಾದರೂ ರನ್​ ಗಳಿಸುವ ಸಾಮರ್ಥ್ಯ ಅವರಿಗಿದೆ. ಬೌಲರ್​ ಯಾರೇ ಇದ್ರೂ ಬೆಂಡೆತ್ತದೇ ಬಿಡೋದಿಲ್ಲ. ಚೇಸಿಂಗ್ ಟೈಮಲ್ಲಂತೂ ವಿರಾಟ ರೂಪ ಪ್ರದರ್ಶಿಸುತ್ತಾರೆ. ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್​ ನಡೆಸುವ ಕೊಹ್ಲಿ, ಅದೆಷ್ಟೋ ಪಂದ್ಯಗಳಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿ ಆಪತ್ಭಾಂದವನಂತೆ ಗೆಲುವು ತಂದುಕೊಟ್ಟಿದ್ದಾರೆ. ಇನ್ನು ಆನ್​​ಫೀಲ್ಡ್​ನಲ್ಲೂ ವಿರಾಟ್​ ಕೊಹ್ಲಿ ಒಬ್ಬ ಮಸ್ತ್ ಎಂಟರ್​ಟೈನರ್. ಆರ್​ಸಿಬಿ ಪಂದ್ಯ ಗೆಲ್ಲುತ್ತೋ, ಸೋಲುತ್ತೋ, ಆದರೆ ಎಂಟರ್​ಟೇನ್ಮೆಂಟ್​ಗೆ ಮಾತ್ರ ಬರ ಇರಲ್ಲ. ಡ್ಯಾನ್ಸ್ ಮಾಡೋದು, ಸಹ ಆಟಗಾರರನ್ನು ಗೇಲಿ ಮಾಡುವುದು, ತಮಾಷೆ ಮಾಡುವುದು, ಆಟಗಾರರನ್ನು ಹುರಿದುಂಬಿಸುವುದು, ಎದುರಾಳಿ ಆಟಗಾರರಿಗೆ ಕೀಟಲೆ ಮಾಡುವುದು, ಸ್ಲೆಡ್ಜಿಂಗ್ ಮಾಡುವ ಮೂಲಕ ಫುಲ್ ಜೋಶ್ ನಲ್ಲಿ ಇರ್ತಾರೆ.

ಮತ್ತೊಂದೆಡೆ ಕೊಹ್ಲಿ ಅಗ್ರೆಸ್ಸಿವ್ ಆಟಕ್ಕೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಮೈದಾನದಲ್ಲಿ ಅವರ ಆಕ್ರಮಣಕಾರಿ ವರ್ತನೆ  ತುಂಬಾ ಜನರಿಗೆ ಇಷ್ಟ. ಬ್ಯಾಟಿಂಗ್, ಫೀಲ್ಡಿಂಗ್​.. ಏನೇ ಆಗಿರಲಿ. ಮೈದಾನದಲ್ಲಿ ಚಿರತೆಯಂತೆ ಓಡಾಡುತ್ತಾ ಫುಲ್ ಆಕ್ಟಿವ್ ಆಗಿರ್ತಾರೆ. ಅದ್ರಲ್ಲೂ ಕಿಂಗ್​ನ ಯಾರಾದರೂ ಕೆಣಕಿದರೆ ಅವರ ಕಥೆ ಮುಗೀತೆಂದೇ ಅರ್ಥ. ಕೊಹ್ಲಿಯ ಉಗ್ರಾವತಾರ ಸಹಿಸಿಕೊಳ್ಳಲಾಗದೇ ಎದುರಾಳಿಗಳು ನಡುಗಿದ ಅದೆಷ್ಟೋ ಉದಾಹರಣೆಗಳು ಕಣ್ಮುಂದಿವೆ. ಕೊಹ್ಲಿಯ ಈ ಹೋರಾಟದ ಮನೋಭಾವ ಎಲ್ಲರಿಗೂ ಸಖತ್ ಇಷ್ಟ. ಹೀಗೆ ಮೈದಾನದಲ್ಲಿ ದಶಾವತಾರ ತೋರುತ್ತಾರೆ. ಆ ಮೂಲಕ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡುತ್ತಾರೆ. ಒಟ್ಟಾರೆ ಕೊಹ್ಲಿ ಆರ್​ಸಿಬಿಯ ಕಿಂಗ್ ಅಷ್ಟೇ ಅಲ್ಲ. ಕನ್ನಡಿಗರ ಮನೆ ಮಗನಂತೆಯೇ ಆಗಿದ್ದಾರೆ. ಮುಂದೊಂದು ದಿನ ಕರ್ನಾಟಕದಲ್ಲಿ ಅಪ್ಪುರಂತೆಯೇ ಮನೆಗಳಲ್ಲಿ ಕೊಹ್ಲಿ ಫೋಟೋ ಇದ್ದರೂ ಅಚ್ಚರಿ ಪಡ್ಬೇಕಿಲ್ಲ.

Shwetha M