ಕರ್ನಾಟಕ ಮುಜರಾಯಿ ದೇಗುಲಗಳಲ್ಲಿ ಇಂದಿನಿಂದ ಹೊಸ ರೂಲ್ಸ್ – ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿದ ಸರ್ಕಾರ!

ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ಇಂದಿನಿಂದ ಹೊಸ ರೂಲ್ಸ್ ಜಾರಿಗೆ ಬಂದಿದೆ. ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ.
ಇದನ್ನೂ ಓದಿ: ಚಿನ್ನಯ್ಯನ ಪಾಳ್ಯದಲ್ಲಿ ನಿಗೂಢ ಸ್ಫೋಟ – ಸಿಎಂ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ
ಈ ಬಗ್ಗೆ ಮಾತನಾಡಿರುವ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ, ದೇವಸ್ಥಾನ ಆವರಣದ ಒಳಭಾಗದಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ದೇಗುಲಗಳ ಹೊರಭಾಗದಲ್ಲಿ ಪ್ಲಾಸ್ಟಿಕ್ ನಿಷೇಧಿಸುವ ಬಗ್ಗೆ ಸರ್ಕಾರ ಮತ್ತು ಜಿಲ್ಲಾಡಳಿತಗಳು ನಿರ್ಧರಿಸುತ್ತವೆ. ಪರಿಸರ ಸ್ವಚ್ಛತೆ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಗೊಳಿಸಲಾಗುತ್ತಿದೆ. ಒಂದು ವೇಳೆ ಇದನ್ನು ಉಲ್ಲಂಘಿಸುವುದು ಕಂಡು ಬಂದರೆ ದಂಡ ವಿಧಿಸುವಂತೆ ದೇಗುಲಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ನಿನ್ನೆಯಷ್ಟೇ ಸಚಿವರು ಪರಿಷತ್ತಿನಲ್ಲಿ ತಿಳಿಸಿದ್ದರು.
ಈ ಮಧ್ಯೆ, ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿರುವ (ರಾಮನಗರ), ಧಾರ್ಮಿಕ ದತ್ತಿ ಇಲಾಖೆ ಅಡಿ ಬರುವ ಎಲ್ಲ ದೇಗುಲಗಳಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ದೇಗುಲಗಳ ಒಳಾಂಗಣಗಳಲ್ಲಿ ಪೂಜಾ ಕಾರ್ಯಕ್ರಮಗಳಿಗೆ ಪ್ಲಾಸ್ಟಿಕ್ ಬಿಂದಿಗೆ, ಬಕೆಟ್, ಪ್ಲಾಸ್ಟಿಕ್ ಜಗ್, ಪ್ಲಾಸ್ಟಿಕ್ ಲಕೋಟೆಗಳು, ಬಾಟಲಿಗಳನ್ನು ಬಳಸದಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಮುಜರಾಯಿ ಇಲಾಖೆಯ ದೇಗುಲಗಳಲ್ಲಿ ಪೂಜೆ ಮಾಡುವಾಗ ಸಂಸ್ಕೃತದ ಬದಲಿಗೆ ಕನ್ನಡದಲ್ಲಿ ಶ್ಲೋಕಗಳನ್ನು ಹೇಳುವಂತೆ ಸೂಚನೆ ನೀಡುವ ಬಗ್ಗೆ ಪರಿಗಣಿಸಲಾಗುತ್ತಿದೆ ಎಂಬುದಾಗಿಯೂ ಸಚಿವರು ವಿಧಾನಸಭೆಯಲ್ಲಿ ಗುರುವಾರ ತಿಳಿಸಿದ್ದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಕನ್ನಡದ ಶ್ಲೋಕದ ಬಗ್ಗೆ ಪ್ರಸ್ತಾಪಿಸಿದ್ದರು. ಅದಕ್ಕೆ ಉತ್ತರಿಸಿದ ರಾಮಲಿಂಗಾ ರೆಡ್ಡಿ, ಕನ್ನಡದಲ್ಲಿ ಶ್ಲೋಕಗಳನ್ನು ಅಭ್ಯಾಸ ಮಾಡಲು ಸೂಚನೆ ಕೊಡುತ್ತೇವೆ ಎಂದಿದ್ದಾರೆ.

ನೋಡಿರಿ

