ಐಪಿಎಲ್ 2024 ನಲ್ಲಿ ಮಹತ್ವದ ಬದಲಾವಣೆ ತಂದ ಬಿಸಿಸಿಐ – ಸೀಸನ್ 17 ನಲ್ಲಿ ಹೊಸ ನಿಯಮ ಜಾರಿ!
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಹಬ್ಬ ಶುರುವಾಗಲಿದೆ. ಐಪಿಎಲ್ ಸೀಸನ್ 17 ಗಾಗಿ ವೇದಿಕೆ ಸಿದ್ಧವಾಗಿದ್ದು, ಅಭಿಮಾನಿಗಳು ತಮಗಿಷ್ಟವಾದ ಆಟಗಾರರನ್ನು ನೋಡಿ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದಾರೆ. ಈಗಾಗಲೇ ಐಪಿಎಲ್ ಹರಾಜು ಪ್ರಕ್ರಿಯೆ ಮುಗಿದಿದೆ. ಮಾರ್ಚ್ 22 ರಿಂದ ಈ ಬಾರಿಯ ಐಪಿಎಲ್ ಶುರುವಾಗಲಿದೆ ಅಂತಾ ಹೇಳಲಾಗುತ್ತಿದೆ. ಈ ಬೆನಲ್ಲೇ ಐಪಿಎಲ್ನಲ್ಲಿನ ಕೆಲ ನಿಯಮಗಳನ್ನು ಬದಲಿಸಲು ಬಿಸಿಸಿಐ ಮುಂದಾಗಿದೆ.
ಹೌದು, ಈ ಬಾರಿಯ ಐಪಿಎಲ್‌ನಲ್ಲಿ ಕೆಲ ರೂಲ್ಸ್‌ಗಳನ್ನು ಬಿಸಿಸಿಐ ಚೇಂಜ್ ಮಾಡಿದೆ. ಹೊಸ ರೂಲ್ಸ್ ಪ್ರಕಾರ ಐಪಿಎಲ್ ಸೀಸನ್ 17 ರಲ್ಲಿ ಬೌಲರ್ಗಳಿಗೆ ಅನುಕೂಲವಾಗುವಂತೆ ಒಂದೇ ಓವರ್ನಲ್ಲಿ 2 ಬೌನ್ಸರ್ ಎಸೆಯಲು ಅವಕಾಶ ನೀಡಲಾಗುತ್ತದೆ. ಈ ಹಿಂದೆ ಒಂದು ಓವರ್ನಲ್ಲಿ ಒಂದೇ ಬೌನ್ಸರ್ ಎಸೆಯಬಹುದಿತ್ತು. 2ನೇ ಬೌನ್ಸರ್ ಅನ್ನು ಅಂಪೈರ್ ನೋ ಬಾಲ್ ಎಂದು ಪರಿಗಣಿಸುತ್ತಿದ್ದರು. ಆದರೆ ಮುಂದಿನ ಐಪಿಎಲ್‌ನಲ್ಲಿ ಒಂದೇ ಓವರ್ನಲ್ಲಿ 2 ಬೌನ್ಸರ್ಗಳನ್ನು ಎಸೆಯಲು ಅವಕಾಶವಿರಲಿದೆ. ಈ ಮೂಲಕ ಬ್ಯಾಟ್ಸ್ಮನ್ ಹಾಗೂ ಬೌಲರ್ ನಡುವೆ ಸಮನಾದ ಸ್ಪರ್ಧೆಯನ್ನು ಮೂಡಿಸಲು ಬಿಸಿಸಿಐ ಮುಂದಾಗಿದೆ.
ಇದನ್ನೂ ಓದಿ: ʼಭಾರತ್ ಜೋಡೊ-2.0ʼಗೆ ಕಾಂಗ್ರೆಸ್ ಚಿಂತನೆ! – ಜನವರಿಯಿಂದಲೇ ಯಾತ್ರೆ ಆರಂಭ ಸಾಧ್ಯತೆ!
ಇದರ ಜೊತೆಗೆ ಈ ಬಾರಿ ಕೂಡ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಯಲ್ಲಿರಲಿದೆ. ಅಂದರೆ ಟಾಸ್ ಸಮಯದಲ್ಲಿ ತಂಡಗಳು ಪ್ಲೇಯಿಂಗ್ ಇಲೆವೆನ್ ಘೋಷಿಸುವ ವೇಳೆ, 5 ಆಟಗಾರರನ್ನು ಹೆಸರಿಸಬಹುದು. ಈ 5 ಆಟಗಾರರಲ್ಲಿ, ಯಾವುದೇ ಒಬ್ಬ ಆಟಗಾರನನ್ನು ಪಂದ್ಯದ ಮಧ್ಯದಲ್ಲಿ ಮತ್ತೊಬ್ಬ ಆಟಗಾರನ ಬದಲಿಯಾಗಿ ಆಡಿಸಬಹುದಾಗಿದೆ.
ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯ ಮೂಲಕ ಎರಡೂ ತಂಡಗಳು ತಮ್ಮ ತಂತ್ರ ಮತ್ತು ಅವಶ್ಯಕತೆಗೆ ಅನುಗುಣವಾಗಿ ಪ್ಲೇಯಿಂಗ್ ಇಲೆವೆನ್ನಿಂದ ಒಬ್ಬ ಆಟಗಾರನನ್ನು ಬದಲಿಸಲು ಅವಕಾಶವನ್ನು ನೀಡಲಾಗುತ್ತದೆ. ಆದರೆ ಈ ನಿಯಮವನ್ನು ಬಳಸಲೇಬೇಕೆಂಬ ನಿಯಮವಿಲ್ಲ. ಅಂದರೆ ಇಂತಹದೊಂದು ಆಯ್ಕೆಯನ್ನು ಪ್ರಯೋಗಿಸುವುದು ತಂಡಕ್ಕೆ ಬಿಟ್ಟ ವಿಷಯ.
ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ನ ಓವರ್ಗಳಲ್ಲಿ 2 ಬೌನ್ಸರ್ಗಳು ಇರುವುದರಿಂದ ಬ್ಯಾಟ್ಸ್ಮನ್ನ ಚಿಂತೆ ಹೆಚ್ಚಾಗಲಿದಂತು ಸತ್ಯ. ಏಕೆಂದರೆ ಈ ಹಿಂದೆ ಒಂದು ಬೌನ್ಸರ್ ಮುಗಿದ ಬಳಿಕ ಮತ್ತೆ ಬೌನ್ಸರ್ ಎಸೆಯುವುದಿಲ್ಲ ಎಂಬುದು ಗೊತ್ತಿರುತ್ತಿತ್ತು. ಆದರೆ ಈ ಬಾರಿ 6 ಎಸೆತಗಳಲ್ಲಿ 2 ಬೌನ್ಸರ್ ಇರುವುದರಿಂದ ಬೌಲರ್ಗಳು ಪರಿಸ್ಥಿತಿಗೆ ತಕ್ಕಂತೆ ಬೌನ್ಸರ್ ಪ್ರಯೋಗಿಸಲಿದ್ದಾರೆ. ಹೀಗಾಗಿ ಅಂತಿಮ ಓವರ್ಗಳ ವೇಳೆ ಪಂದ್ಯವು ರೋಚಕತೆ ಪಡೆಯಲಿರುವುದನ್ನು ನಿರೀಕ್ಷಿಸಬಹುದು.