ಮೈದಾನಕ್ಕೆ ನುಗ್ಗಿ ಕೊಹ್ಲಿ ಪಾದ ಮುಟ್ಟಿ ತಬ್ಬಿಕೊಂಡ ಅಭಿಮಾನಿ – ಭದ್ರತೆ ಉಲ್ಲಂಘಿಸಿದ ಅಭಿಮಾನಿಗೆ ಕಾನೂನು ಸಂಕಷ್ಟ

ಮೈದಾನಕ್ಕೆ ನುಗ್ಗಿ ಕೊಹ್ಲಿ ಪಾದ ಮುಟ್ಟಿ ತಬ್ಬಿಕೊಂಡ ಅಭಿಮಾನಿ – ಭದ್ರತೆ ಉಲ್ಲಂಘಿಸಿದ ಅಭಿಮಾನಿಗೆ ಕಾನೂನು ಸಂಕಷ್ಟ

ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಿದೆ. ಆರಂಭಿಕ ಎರಡು ಪಂದ್ಯಗಳನ್ನು ಗೆದ್ದು ಸರಣಿ ತನ್ನದಾಗಿಸಿಕೊಂಡಿರುವ ಭಾರತ, ತವರಿನಲ್ಲೇ ವೈಟ್‌ವಾಶ್‌ ಮಾಡುವ ಗುರಿ ಹೊಂದಿದೆ. ಭಾನುವಾರ ಇಂದೋರ್‌ನ ಹೋಳ್ಕರ್‌ ಮೈದಾನದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆರು ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ. ಪಂದ್ಯದ ವೇಳೆ ಕಿಂಗ್‌ ಕೊಹ್ಲಿ ಅಭಿಮಾನಿಯೊಬ್ಬ ಎಲ್ಲರಿಗೂ ಶಾಕ್‌ ನೀಡಿದ್ದಾನೆ. ಮೈದಾನದ ಒಳಗೆ ಪ್ರವೇಶಿಸಿ ವಿರಾಟ್‌ ಕೊಹ್ಲಿಯನ್ನು ಅಪ್ಪಿಕೊಂಡಿದ್ದಾನೆ. ಭದ್ರತೆ ಉಲ್ಲಂಘಿಸಿದ ವಿರಾಟ್‌ ಅಭಿಮಾನಿಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಪಾಪಿ ಪಾಕಿಸ್ತಾನದಲ್ಲಿ ಬೆಲೆ ಏರಿಕೆ ಬಿಸಿ – ಒಂದು ಡಜನ್‌ ಮೊಟ್ಟೆ ಬೆಲೆ 400 ರೂ.!

ಹೌದು, ಟೀಂ ಇಂಡಿಯಾ ಮತ್ತು ಅಫ್ಘಾನಿಸ್ತಾನ ನಡುವಿನ 2ನೇ ಟಿ20 ಪಂದ್ಯದ ವೇಳೆ ಇಂದೋರ್‌ನ ಹೋಳ್ಕರ್‌ ಮೈದಾನದಲ್ಲಿ ಭದ್ರತೆ ಉಲ್ಲಂಘನೆ ನಡೆದಿದೆ. ಪಂದ್ಯದಲ್ಲಿ ಅಫ್ಘಾನಿಸ್ತಾನದ ಇನ್ನಿಂಗ್ಸ್‌ ವೇಳೆ ಕೊಹ್ಲಿಯ ಅಪ್ಪಟ ಅಭಿಮಾನಿಯೊಬ್ಬ  ಭದ್ರತೆ ಉಲ್ಲಂಘಿಸಿ ಮೈದಾನಕ್ಕೆ ಹಾರಿಬಂದು ಕೊಹ್ಲಿಯನ್ನು ಭೇಟಿಯಾಗಿದ್ದಾನೆ.‌ ಓಡಿಬಂದು ಬೌಂಡರಿ ಲೈನ್‌ ಬಳಿ ನಿಂತಿದ್ದ ಕೊಹ್ಲಿಯ ಪಾದಮುಟ್ಟಿದ್ದಾನೆ. ಬಳಿಕ ಅಪ್ಪಿಗೊಂಡು ಭಾವುಕನಾಗಿದ್ದಾನೆ. ಮೈದಾನಕ್ಕೆ ನುಗ್ಗಿದ ಅಭಿಮಾನಿಯನ್ನು ಮಧ್ಯಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವಕನನ್ನು ತುಕೋಗಂಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.

ಟಿಕೆಟ್‌ ಖರೀದಿಸಿ ಪಂದ್ಯ ವೀಕ್ಷಿಸಲು ಬಂದಿದ್ದ ಯುವಕ ನರೇಂದ್ರ ಹಿರ್ವಾನಿ ಗೇಟ್‌ ಮೂಲಕ ಮೈದಾನಕ್ಕೆ ನುಗ್ಗಿದ್ದಾನೆ. ಯುವಕನು ಕೊಹ್ಲಿಯ ಅಪ್ಪಟ ಅಭಿಮಾನಿಯಾಗಿದ್ದು, ಹಿರಿಯ ಆಟಗಾರನನ್ನು ಭೇಟಿಯಾಗಬೇಕೆಂಬ ಆಸೆಯಿಂದ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಮೈದಾನ ಪ್ರವೇಶಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಯುವಕನ ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆ ಮುಗಿದ ಬಳಿಕ ಬಳಿಕ ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Shwetha M